ವ್ಯಾಪಾರಕ್ಕೆ ವಿಶ್ವಾಸವೇ ಆಧಾರ

ಹುಬ್ಬಳ್ಳಿ: ಆಹಾರ ಧಾನ್ಯ ಬೆಳೆಯುವ ರೈತರು ಹೇಗೆ ಪರೋಪಕಾರದ ಕೆಲಸ ಮಾಡುವರೋ ಹಾಗೇ ವರ್ತಕರು ಅದನ್ನು ಅಗತ್ಯವುಳ್ಳವರಿಗೆ ತಲುಪಿಸುವ ಮಹತ್ವದ ಕಾರ್ಯ ಮಾಡುತ್ತಾರೆ, ಇಲ್ಲಿ ವ್ಯವಹಾರ ಎನ್ನುವುದು ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿಯ ಅಮರಗೋಳ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಶುಕ್ರವಾರ ಆಹಾರ ಧಾನ್ಯ ವರ್ತಕರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ರೈತರು ಬೆಳೆದ ಧಾನ್ಯಗಳಿಗೆ ಅವುಗಳನ್ನು ಕೊಂಡುಕೊಳ್ಳುವ ಮೂಲಕ ಫಲ ಕೊಡುವವರೇ ವರ್ತಕರು. ಅದನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ವರ್ತಕರ ಮೇಲಿದೆ. ಬಂದ ಲಾಭದಲ್ಲಿ ಒಂದಿಷ್ಟು ದಾನ ಧರ್ಮದ ಕಾರ್ಯಕ್ಕೂ ನೀಡಬೇಕು ಎಂದು ಸಲಹೆ ಮಾಡಿದರು.

ರೈತರ ಪರಿಶ್ರಮ: ರೈತರ ಪರಿಶ್ರಮದಿಂದಾಗಿ ಇಂದು ಭಾರತ ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೊಗರಿ ಸೇರಿ ಕೆಲ ಧಾನ್ಯಗಳ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಿತು. ವರ್ತಕರು ರಫ್ತು ವ್ಯವಹಾರದ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಸಂಸದ ಪ್ರಲ್ಹಾದ ಜೋಶಿ ಸಲಹೆ ನೀಡಿದರು.

ರೈತರು ಬೆಳೆಯುತ್ತಾರೆ. ಆದರೆ, ಅವರಿಗೆ ಸಮಯ ಇರುವುದಿಲ್ಲ. ಭಾರತದ ಭಾಸ್ಮತಿ ಅಕ್ಕಿಗೆ ವಿದೇಶದಲ್ಲಿ ಒಳ್ಳೆಯ ಬೇಡಿಕೆ ಇದೆ. ವ್ಯಾಪಾರಸ್ಥರಿಗೆ ಅನೇಕ ಅವಕಾಶಗಳಿದ್ದು, ಸುವ್ಯವಸ್ಥಿತ ಪ್ಯಾಕಿಂಗ್​ನಲ್ಲಿ ರಫ್ತಿಗೆ ಕ್ರಮ ಕೈಗೊಳ್ಳಬೇಕು. ಹುಬ್ಬಳ್ಳಿ ವಿಮಾನ ಸೇವೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದರು.

ಉದ್ಯೋಗ ಸೃಷ್ಟಿ ಸರ್ಕಾರದ ಕೆಲಸವಾಗಿ ಉಳಿದಿಲ್ಲ. ಬೇಕಾದರೆ ಉದ್ಯೋಗ ಸೃಜನೆಗೆ ಸವಲತ್ತು ನೀಡಲಿದೆ. 2021ರ ವೇಳೆಗೆ ಬೆಂಗಳೂರಿಗೆ ಹುಬ್ಬಳ್ಳಿಯಿಂದ ನಾಲ್ಕು ತಾಸಿನಲ್ಲಿ ತಲುಪುವ ರೈಲು ಲಭ್ಯವಾಗಲಿದೆ. ಜ. 25ರಿಂದ ತಿರುಪತಿಗೆ ವಿಮಾನ ಸೇವೆ ಶುರುವಾಗಲಿದೆ ಎಂದು ಸಂಸದರು ಹೇಳಿದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ವರ್ತಕರ ಬೇಡಿಕೆಗಳ ಬಗ್ಗೆ ಗಮನ ಹರಿಸಲಾಗುವುದು. ಎಪಿಎಂಸಿ ಆವರಣದ ಕಸ ಸಂಗ್ರಹಣೆಗೆ ಪಾಲಿಕೆ ವಾಹನ ಬಿಡಲಾಗುವುದು ಎಂದು ಭರವಸೆ ನೀಡಿದರು.

ಎಪಿಎಂಸಿ ಸದಸ್ಯ ಚನ್ನು ಹೊಸಮನಿ ಮಾತನಾಡಿ, ವರ್ತಕರ ವಿರುದ್ಧ ಕಾನೂನುಗಳನ್ನು ತಂದಾಗ ವ್ಯಾಪಾರಸ್ಥರೆಲ್ಲ ಒಗ್ಗಟ್ಟಾಗಿ ಹೋರಾಡಬೇಕು. ಅದಕ್ಕಾಗಿ ಸಂಘಟನೆ ಅವಶ್ಯ ಎಂದರು.

ಎಪಿಎಂಸಿಯವರು ಮುಖ್ಯವಾಗಿ ಇಲ್ಲಿ ಟ್ರಕ್ ಟರ್ವಿುನಲ್ ನಿರ್ವಿುಸಬೇಕು, ಸರಕು ಸಾಗಣೆದಾರರಿಗೆ ಜಾಗ ನೀಡಬೇಕು. ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಬೇಕು. ಭದ್ರತೆಗೆ ಆದ್ಯತೆ ನೀಡಬೇಕು. ಬಸ್ ಹಾಗೂ ನಿಲ್ದಾಣ ಸೌಕರ್ಯ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಮಂಡಿಸಿದರು.

ಹು-ಧಾ ಇಸ್ಕಾನ್ ಮುಖ್ಯಸ್ಥ ರಾಜೀವ ಲೋಚನ ದಾಸ್, ರಾಯಾಪುರ ಇಸ್ಕಾನ್​ನಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಅನ್ನದಾಸೋಹಕ್ಕೆ ದೇಣಿಗೆ ನೀಡುವಂತೆ ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ಜಗನ್ನಾಥಗೌಡ ಸಿದ್ದನಗೌಡ್ರ ಮಾತನಾಡಿದರು.

ಹಿರಿಯ ವರ್ತಕರಾದ ಶಂಕ್ರಣ್ಣ ಮುನವಳ್ಳಿ, ಜಿ.ಎಂ. ಚಿಕ್ಕಮಠ, ವಿ.ಆರ್. ಬೋರಟ್ಟಿ, ಗಣೇಶ ಕಠಾರೆ, ಮಲ್ಲಿಕಾರ್ಜುನ ಬೋರಟ್ಟಿ, ರತನಚಂದ್, ಪ್ರೇಮನಾಥಸಾ ಕಠಾರೆ, ಬಸವರಾಜ ಯಕಲಾಸಪುರ, ಜೀವನ ವಸ್ತ್ರದ, ಕಬ್ಬೇರಹಳ್ಳಿ, ಇತರರು ಪಾಲ್ಗೊಂಡಿದ್ದರು.

ಡಾ. ರಾಮು ಮೂಲಗಿ ಜಾನಪದ ಗೀತೆ ಹಾಡಿದರು. ಸಂಘದ ಅಧ್ಯಕ್ಷ ಶಿವಾನಂದ ಸಣ್ಣಕ್ಕಿ ಸ್ವಾಗತಿಸಿದರು.

ಬಿಐಎಸ್ ಕಚೇರಿ: ಹುಬ್ಬಳ್ಳಿಯಲ್ಲಿ ಬಿಐಎಸ್ ಕಚೇರಿ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್) ಬಹುದಿನಗಳ ಬೇಡಿಕೆಯಾಗಿತ್ತು. ಈಗ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಜ. 28ರಂದು ಇಲ್ಲಿಯ ರಾಯಾಪುರ ಬಳಿಯ ಕೆಎಸ್​ಎಫ್​ಸಿ ಕಟ್ಟಡದಲ್ಲಿ ಕೇಂದ್ರ ಸಚಿವ ರಾಮವಿಲಾಸ ಪಾಸ್ವಾನ್ ಅವರು ಉದ್ಘಾಟಿಸುವರು ಎಂದು ಸಂಸದ ಜೋಶಿ ತಿಳಿಸಿದರು.