Friday, 16th November 2018  

Vijayavani

Breaking News

ವ್ಯವಹಾರ ಪರಿಕಲ್ಪನೆಗಳ ಮಾರ್ಗದರ್ಶಿ

Sunday, 08.07.2018, 3:02 AM       No Comments

| ಉಮೇಶ್​ಕುಮಾರ್ ಶಿಮ್ಲಡ್ಕ

ವ್ಯಾವಹಾರಿಕ ಪ್ರಪಂಚ ವರ್ಷದಿಂದ ವರ್ಷಕ್ಕೆ ಬದಲಾಗುತ್ತ ಹೋಗುತ್ತದೆ. ಹೊಸತನವನ್ನು ಮೈಗೂಡಿಸಿಕೊಂಡು ಮುಂದೆ ಸಾಗುತ್ತ ಹೋದಂತೆ ಹಳೆಯ ವ್ಯವಸ್ಥೆಗಳು ಸುಧಾರಿತ ರೂಪ ಹೊಂದಿ ಹೊಸ ಹೆಸರುಗಳೊಂದಿಗೆ ಗುರುತಿಸಲ್ಪಡುತ್ತವೆ. ಅನ್ಯಭಾಷೆಯ ವಿಶೇಷವಾಗಿ ಆಂಗ್ಲ ಭಾಷೆಯ ಪರಿಕಲ್ಪನೆಗಳು ವಾಣಿಜ್ಯ ಪ್ರಪಂಚವನ್ನು ಆಳತ್ತಿರುವುದು ಸರ್ವವೇದ್ಯ ವಿಚಾರ. ಆದ್ದರಿಂದ ಇಂತಹ ಪರಿಕಲ್ಪನೆಗಳನ್ನು ಅರಿತುಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ವ್ಯಾವಹಾರಿಕ ಪ್ರಪಂಚದಲ್ಲಿ ವ್ಯವಹರಿಸುವ ಪ್ರತಿಯೊಬ್ಬನದ್ದು ಕೂಡ. ವಾಣಿಜ್ಯ ಪ್ರಪಂಚವನ್ನು ಅರಿಯಬೇಕು ಎಂದರೆ ಲೆಕ್ಕಶಾಸ್ತ್ರ, ಅರ್ಥಶಾಸ್ತ್ರ, ವೆಚ್ಚ ನಿರ್ಣಯಶಾಸ್ತ್ರ, ನಿರ್ವಹಣಾ ಶಾಸ್ತ್ರಗಳ ಅರಿವು ಅತೀ ಅವಶ್ಯ. ವಿಶೇಷವಾಗಿ ಪದವಿ ಪೂರ್ವ, ಪದವಿ ತರಗತಿಗಳಲ್ಲಿ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರವನ್ನು ಅಧ್ಯಯನ ವಿಷಯವನ್ನಾಗಿ ತೆಗೆದುಕೊಂಡವರ ಪಾಲಿಗೆ ಇಂತಹ ಪರಿಕಲ್ಪನೆಗಳು ಆರಂಭದಲ್ಲಿ ಕ್ಲಿಷ್ಟಕರವಾಗಿ ಕಾಣಿಸುವುದು. ಆಂಗ್ಲ ಭಾಷೆಯಲ್ಲಿರುವ ಬಹುತೇಕ ಪರಿಕಲ್ಪನೆಯ ವಿವರಣೆ ಕಂಡುಕೊಳ್ಳುವುದಕ್ಕೆ ಹಲವು ನಿಘಂಟುಗಳನ್ನು ನೋಡಬೇಕಾಗುವುದು. ಪಠ್ಯಕ್ಕಿಂತಲೂ ಹೆಚ್ಚು ಗೈಡ್ ಅವಲಂಬಿಸಿ ಪರೀಕ್ಷೆ ಬರೆಯುವವರೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಇಂತಹ ಕಷ್ಟದ ಕೆಲಸಕ್ಕೆ ಯಾವ ವಿದ್ಯಾರ್ಥಿಯೂ ಕೈ ಹಾಕಲಾರ. ಒಂದೊಮ್ಮೆ ಸಾಹಸಕ್ಕಣಿಯಾದರೂ, ಆಂಗ್ಲ ಭಾಷೆಯ ವಾಣಿಜ್ಯ ಮತ್ತು ನಿರ್ವಹಣೆಯ ಪರಿಕಲ್ಪನೆಯನ್ನು ಭಾವಾರ್ಥ ಕೆಡದಂತೆ ಕನ್ನಡಕ್ಕೆ ಅನುವಾದಿಸುವುದು ಸುಲಭದ ಕೆಲಸವಂತೂ ಅಲ್ಲ.

ಇದಕ್ಕೆ ಪರಿಹಾರ ಎಂಬಂತೆ ಪ್ರೊಫೆಸರ್ ಎಚ್.ಆರ್.ಅಪ್ಪಣ್ಣಯ್ಯನವರ ನಾಲ್ಕು ವರ್ಷದ ಶ್ರಮದ ಫಲ ‘ವ್ಯವಹಾರ ಪರಿಕಲ್ಪನೆಗಳ(ವಾಣಿಜ್ಯ ಮತ್ತು ನಿರ್ವಹಣೆ) ಅರ್ಥ ವಿವರಣ ಕೋಶ’ ಮೂಡಿ ಬಂದಿದೆ. ಈ ಕೆಲಸಕ್ಕೆ ನಾಲ್ಕು ವರ್ಷ ಬೇಕಾಯಿತು ಎಂದರೂ, ಈ ಕೆಲಸ ಮಾಡಬೇಕು ಎಂದು ಅದಕ್ಕೂ ಮೊದಲು ಹಲವು ಸಲ ಪ್ರಯತ್ನಿಸಿ ಸೋತದ್ದನ್ನು ಕೂಡ ಪ್ರೊಫೆಸರ್ ಪುಸ್ತಕದ ಅರಿಕೆ ವಿಭಾಗದಲ್ಲಿ ಹೇಳಿಕೊಂಡಿದ್ದಾರೆ.

ಸರಳವಾಗಿ ಹೇಳಬೇಕು ಎಂದರೆ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರಗಳ ಕೆಲವು ಪದಗಳು ಒಂದೇ ರೀತಿ ಇದ್ದರೂ, ಆಯಾ ಶಾಸ್ತ್ರಗಳ ಪರಿಭಾಷೆಗೆ ಅವುಗಳ ಭಾವಾರ್ಥ ವ್ಯತ್ಯಾಸವಾಗುತ್ತವೆ. ಇಂತಹ ಸೂಕ್ಷ್ಮಗಳನ್ನು ಗ್ರಹಿಸಿ ದಾಖಲಿಸಿರುವುದು ಈ ಪುಸ್ತಕದ ವಿಶೇಷ. ಅದೇ ರೀತಿ, ವಿಷಯ, ಭಾಷಾ ತಜ್ಞರು ಕೂಡ ಈ ಪುಸ್ತಕವನ್ನು ಓದಿ ನೀಡಿದ ಪ್ರತಿಕ್ರಿಯೆಗಳ ವಿವರವೂ ಪುಸ್ತಕದಲ್ಲಿದೆ. ಅನೇಕರಿಗೆ ಇದು ನಿಘಂಟು, ಶಬ್ದ ಕೋಶದ ರೂಪದಲ್ಲಿ ಕಂಡಿದೆ. ಅಥವಾ ಅವರು ಈ ಪುಸ್ತಕವನ್ನು ಹಾಗೆ ಅರ್ಥೈಸಿಕೊಂಡಿದ್ದಾರೆ.

ನಿರ್ವಹಣಾ ಶಾಸ್ತ್ರದಲ್ಲಿ ವಿಶೇಷವಾಗಿ ಯಾವುದೇ ಕಂಪನಿಯ ಬ್ರಾಂಡಿಂಗ್ ವಿಚಾರಕ್ಕೆ ಬಂದಾಗ ಬಳಕೆಯಾಗುವ ಪದ ‘ಎಟಿಎಲ್ ಕಾಸ್ಟ್’ ಅಥವಾ ‘ಎಬೌ ದ ಲೈನ್ ಕಾಸ್ಟ್’. ಏಕಾಕಿಯಾಗಿ ಈ ಪದ ಕೇಳಿದವರಿಗೆ ಕಂಪನಿಯ ಬ್ರಾಂಡ್ ಮ್ಯಾನೇಜರ್ ಏನು ಹೇಳುತ್ತಾನೆ ಎಂದು ಅರ್ಥವಾಗದು. ಇದು ಪ್ರಮುಖವಾಗಿ ಜಾಹೀರಾತಿಗೆ ಸಂಬಂಧಿಸಿದ ಪರಿಕಲ್ಪನೆ. ಈ ಪುಸ್ತಕದಲ್ಲಿ ಅದರ ವಿವರಣೆ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿದೆ. ಇದೇ ರೀತಿ, ಬ್ಲಾ್ಯಕ್ ಸ್ವಾನ್ ಥಿಯರಿ, ಬ್ಲಾಂಕೆಟ್ ಮಾರ್ಟ್​ಗೇಜ್, ಗೋಲ್ ಸೆಟ್ಟಿಂಗ್ ಥಿಯರಿ ಎಂಬಿತ್ಯಾದಿ ಪರಿಕಲ್ಪನೆಗಳ ವಿವರಣೆಗಳೂ ಇವೆ.

ಇಂಗ್ಲಿಷ್ ವರ್ಣಮಾಲೆಯ ಎಯಿಂದ ಝೆಡ್ ತನಕದ ವಿವಿಧ ಪರಿಕಲ್ಪನೆಗಳ ವಿವರಣೆ 634 ಪುಟಗಳ ಈ ಪುಸ್ತಕದಲ್ಲಿದೆ. ಅಂದ ಹಾಗೆ, ಇದು ಏಕವ್ಯಕ್ತಿ ಕೃತಿಯಾದರೂ, ಇದರ ಪರಿಷ್ಕರಣೆಯಲ್ಲಿ ಹಲವು ವಿದ್ವಾಂಸರು, ವಿಷಯ ಪರಿಣತರು ಸಹಕರಿಸಿರುವುದನ್ನು ಪ್ರೊಫೆಸರ್ ಅಪ್ಪಣ್ಣಯ್ಯ ಉಲ್ಲೇಖಿಸಿದ್ದಾರೆ. ಇವನ್ನೆಲ್ಲ ಗಮನಿಸಿದರೆ ಈ ಪುಸ್ತಕ ಎಲ್ಲರಿಂದಲೂ ಸ್ವೀಕೃತವಾಗಬೇಕು, ವಿಷಯಗ್ರಾಹಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶ ಇಟ್ಟುಕೊಂಡು ರಚಿಸಿದ್ದು ಎಂಬುದು ವೇದ್ಯವಾಗುತ್ತದೆ. ಅದು ವಾಸ್ತವ ಕೂಡ.

ವ್ಯವಹಾರ ಪರಿಕಲ್ಪನೆಗಳ (ವಾಣಿಜ್ಯ ಮತ್ತು ನಿರ್ವಹಣೆ) ಅರ್ಥವಿವರಣ ಕೋಶ

ಲೇಖಕರು: ಹಿಮಾಲಯ ಪಬ್ಲಿಷಿಂಗ್ ಹೌಸ್, ಮುಂಬೈ

ಪ್ರಥಮ ಮುದ್ರಣ: 2018, ಪುಟಗಳ ಸಂಖ್ಯೆ: 654+4, ದರ: 1250 ರೂ.

Leave a Reply

Your email address will not be published. Required fields are marked *

Back To Top