More

  ವ್ಯವಸ್ಥೆ ಬಲವಾದಾಗ ಗ್ರಾಮಗಳ ಅಭಿವೃದ್ಧಿ ಸಾಧ್ಯ

  ಸಿದ್ದಾಪುರ: ಗ್ರಾಪಂ ವ್ಯವಸ್ಥೆ ಬಲಗೊಂಡಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿ ಆಗಬೇಕಾದರೆ ಇಚ್ಛಾಶಕ್ತಿಯೂ ಅವಶ್ಯ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

  ತಾಲೂಕಿನ ವಾಜಗೋಡ ಗ್ರಾ.ಪಂ. ಸಭಾ ಕೊಠಡಿ ಹಾಗೂ ಎನ್​ಆರ್​ಎಲ್​ಎಂ ಯೋಜನೆಯಲ್ಲಿ ಆರಂಭಗೊಂಡ ಅಗರಬತ್ತಿ ತಯಾರಿಕೆ ಘಟಕ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.

  ಸರ್ಕಾರದ ಯೋಜನೆಗಳು ಸರಿಯಾಗಬೇಕಾದರೆ ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯ. ಅನುದಾನಗಳು ಬಂದರೂ ಅದನ್ನು ಎಲ್ಲ ವಾರ್ಡ್​ಗಳಿಗೆ ಸರಿಯಾಗಿ ಹಂಚಬೇಕಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನಿರ್ವಹಿಸುವುದಕ್ಕೂ ಇಂದು ತೊಂದರೆ ಆಗುತ್ತಿದೆ ಎನ್ನುವ ಆಕ್ಷೇಪ ಕೇಳಿಬರುತ್ತಿದೆ. ವ್ಯವಸ್ಥೆ ಸುಧಾರಣೆ ಮಾಡುವುದಕ್ಕೆ ಈಗಾಗಲೇ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ವಾಜಗೋಡ ಗ್ರಾಪಂನಲ್ಲಿ 650 ಶೌಚಗೃಹ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.

  ವಾಜಗೋಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತಪಟ್ಟಿರುವುದರಿಂದ ಈ ವರ್ಷ ಜನತೆ ಜಾಗೃತರಾಗಿರಬೇಕಾಗಿದೆ ಎಂದು ಹೇಳಿದರು.

  ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ ಮಾತನಾಡಿ, ವಾಜಗೋಡಿಗೆ ಮೊಬೈಲ್ ಟವರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇರುವುದನ್ನು ಹಾಗೂ ಗ್ರಾಪಂ ವ್ಯಾಪ್ತಿಯ ರಸ್ತೆಗಳ ಅವ್ಯವಸ್ಥೆ ಕುರಿತು ವಿಧಾನಸಭಾಧ್ಯಕ್ಷರ ಗಮನಕ್ಕೆ ತಂದರು.

  ಈ ವೇಳೆ ವಿವಿಧ ಯೋಜನೆಯಲ್ಲಿ ಮಂಜೂರಿಯಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚೆಕ್, ಅಂಗವಿಕಲರಿಗೆ ಸೌಲಭ್ಯವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿತರಿಸಿದರು.

  ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ,ಗ್ರಾಪಂ ಉಪಾಧ್ಯಕ್ಷೆ ರೇಣುಕಾ ವಿ. ನಾಯ್ಕ ಹಾಗೂ ಸದಸ್ಯರು, ತಾಪಂ ಇಒ ಪ್ರಶಾಂತ ರಾವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು. ಶಿಕ್ಷಕ ವಿನಾಯಕ ವೈದ್ಯ, ಪಿಡಿಒ ನಾಗೇಶ ಎಚ್.ಪಿ. ಕಾರ್ಯಕ್ರಮ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts