ವ್ಯಕ್ತಿಯ ಮೇಲೆ ತಂದೆ, ಮಕ್ಕಳಿಂದ ಮಾರಣಾಂತಿಕ ಹಲ್ಲೆ

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದಲ್ಲಿ ಜಮೀನಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಶನಿವಾರ ಸಂಜೆ ಜಗಳ ತೆಗೆದ ತಂದೆ ಮತ್ತು ಮಕ್ಕಳಿಬ್ಬರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು, ಇದರಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ಒಕ್ಕಲಿಗರ ಬೀದಿ ನಿವಾಸಿ ಮಹದೇವ ಹಲ್ಲೆಗೊಳಗಾದ ಗಾಯಾಳು. ಇದೇ ಬೀದಿಯ ನಿವಾಸಿಗಳಾದ ಗೋವಿಂದೇಗೌಡ, ಈತನ ಮಕ್ಕಳಾದ ಲೋಕೇಶ್ ಮತ್ತು ನವೀನ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿದ್ದಾರೆ.

ವಿವರ: ಗ್ರಾಮದಿಂದ ಚಿಕ್ಕಲ್ಲೂರು ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಗಾಯಾಳು ಮಹದೇವ ಅವರ ಜಮೀನಿದ್ದು, ಬಾಳೆ ಮತ್ತು ಅರಿಸಿಣ ಬೆಳೆ ಬೆಳೆದು ಕಟಾವು ಮಾಡಿದ್ದಾರೆ. ಅವರ ಜಮೀನಿಗೆ ಹೊಂದಿಕೊಂಡಂತೆ ಆರೋಪಿ ಗೋವಿಂದೇಗೌಡ ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಮಹದೇವ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು 5 ತೆಂಗಿನ ಮರ ಸುಟ್ಟು ಕರಕಲಾಗಿವೆ. ಆರೋಪಿ ಗೋವಿಂದೇಗೌಡ ಅವರ ಬಾಳೆ ಗಿಡಕ್ಕೂ ಬೆಂಕಿ ತಾಕಿದೆ. ಇದನ್ನೇ ನೆಪ ಮಾಡಿಕೊಂಡ ಆರೋಪಿಗಳು ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನೀನೇ ಕಾರಣ ಎಂದು ಮಾ.23 ರಂದು ಸಂಜೆ ಜಮೀನಿನಲ್ಲಿ ಹಲ್ಲೆಗೆ ಮುಂದಾಗಿದ್ದಾರೆ.

ಈ ವೇಳೆ ಹಲ್ಲೆಯಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಪಕ್ಕದ ಜಮೀನಿನವರ ಬೈಕಿನಲ್ಲಿ ತೆರಳಿದ ಮಹದೇವನನ್ನು ಅಡ್ಡಗಟ್ಟಿ ದೊಣ್ಣೆಯಿಂದ ತಲೆ, ಕೈ ಮತ್ತು ಕಾಲುಗಳಿಗೆ ಮಾರಣಾಂತಿಕ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾದರು. ಗಾಯಾಳು ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.