ವ್ಯಂಗ್ಯಚಿತ್ರಕಾರರದ್ದು ಅಪರೂಪದ ಗ್ರಹಿಕೆ

ಧಾರವಾಡ: ದೈನಂದಿನ ಬದುಕಿನ ಜಂಜಾಟಗಳನ್ನು ಕುಂಚದಲ್ಲಿ ಅರಳಿಸಿ, ನೋಡುಗರ ಮುಖದ ಮೇಲೆ ನಗುವಿನ ಗೆರೆ ಎಳೆಯುವ, ವ್ಯಂಗ್ಯ ಹಾಗೂ ವಿಡಂಬನೆ ಮೂಲಕ ಲೋಕದ ಡೊಂಕು ಎತ್ತಿ ತೋರುವ ವ್ಯಂಗ್ಯಚಿತ್ರಕಾರರದ್ದು ಅಪರೂಪದ ಗ್ರಹಿಕೆ ಎಂದು ಬಾಲಬಳಗ ಸೃಜನಶೀಲ ಟ್ರಸ್ಟ್ ಕಾರ್ಯಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಭಿಪ್ರಾಯಪಟ್ಟರು.

ಇಲ್ಲಿನ ಬಾಲಬಳಗ ಸೃಜನಶೀಲ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ‘ಕಾರ್ಟೂನ್ ಸುಗ್ಗಿ.. ನೋಡಿ ಹಿಗ್ಗಿ!’ ಘೊಷವಾಕ್ಯದ ಅಡಿ ಶನಿವಾರ ಹಮ್ಮಿಕೊಂಡಿದ್ದ ಬಾಗಲಕೋಟೆ ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವಾರ್ಷಿಕೋತ್ಸವ ಹಾಗೂ ವ್ಯಂಗ್ಯಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಪ್ರಾಧ್ಯಾಪಕ ಹರ್ಷವರ್ಧನ್ ಶೀಲವಂತ ಮಾತನಾಡಿ, ಮಾಧ್ಯಮ ಕಚೇರಿಯಲ್ಲಿ ವ್ಯಂಗ್ಯಚಿತ್ರ ಕಾರರಿಗೆ ಅವರದ್ದೇ ಆದ ಸ್ಥಾನ, ಮಾನಗಳಿವೆ. ಈ ಪ್ರಯೋಗ ಮಕ್ಕಳಲ್ಲಿ ವ್ಯಂಗ್ಯಚಿತ್ರಗಳ ಬಗ್ಗೆ ವಿಶೇಷ ಪ್ರೀತಿ, ಆಕರ್ಷಣೆ ಹಾಗೂ ಆಸಕ್ತಿ ತಳೆಯುವಂತೆ ಮಾಡಿದೆ ಎಂದರು.

ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಗೌರವಾಧ್ಯಕ್ಷ ಅಶೋಕ ಜೋಶಿ ಮಾತನಾಡಿ, ನಮ್ಮ ಮುಖವನ್ನೇ ಕನ್ನಡಿಯಲ್ಲಿ ದಿಟ್ಟಿಸಿ ನೋಡಿಕೊಂಡರೆ ಇತರರಿಗಿಂತ ನಾನು ಹೇಗೆ ಭಿನ್ನ? ಎಂಬ ವೈಲಕ್ಷಣಗಳು ಕಾಣುತ್ತವೆ. ನಮ್ಮನ್ನು ನೋಡಿ ನಾವು ನಗುವುದನ್ನು ಕಲಿತರೆ, ಇತರರ ಮುಖ ಚಹರೆ ವಿಶೇಷತೆ ಗಮನಿಸಲು ಸಾಧ್ಯ ಎಂದರು.

ಡಾ. ಸಂಜೀವ್ ಕುಲಕರ್ಣಿ ಅವರು ರಚಿಸಿದ ತಮ್ಮ ಸ್ವಂತ ವ್ಯಂಗ್ಯಚಿತ್ರ ಗಮನ ಸೆಳೆಯಿತು. ಶಾಲೆಯ ನೂರಕ್ಕೂ ಹೆಚ್ಚು ಮಕ್ಕಳು ವ್ಯಂಗ್ಯಚಿತ್ರ ರಚನೆ ಶಿಬಿರದಲ್ಲಿ ಪಾಲ್ಗೊಂಡು, ಪ್ರಥಮ ಪ್ರಯತ್ನದಲ್ಲೇ ಸುಂದರ ವ್ಯಂಗ್ಯಚಿತ್ರಗಳನ್ನು ಬಿಡಿಸಿ ಭರವಸೆ ಮೂಡಿಸಿದರು. ಉತ್ತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವೆಂಕಟೇಶ ಇನಾಮದಾರ, ಪ್ರಧಾನ ಕಾರ್ಯದರ್ಶಿ ಜಗದೀಶ ಭಜಂತ್ರಿ, ಪ್ರಶಾಂತ ಭಾರತ (ನಾಯಕ್), ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಇತರರು ಇದ್ದರು.