ಕುಮಟಾ: ಮೂರೂರಿನ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶುಕ್ರವಾರ ಇಂಡಿಯನ್ ಮೆಡಿಕಲ್ ಅಸೋಸಿ ಯೇಷನ್ ವತಿಯಿಂದ ಕರೊನಾ ವೈರಸ್ (ಕೋವಿಡ್-19) ಜಾಗೃತಿ ಉಪನ್ಯಾಸ ಕಾರ್ಯಕ್ರಮ ಜರುಗಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಮಾತನಾಡಿ, ಪ್ರಸ್ತುತ ಪ್ರಪಂಚದಲ್ಲಿ ಭಯ ಹುಟ್ಟಿಸುತ್ತಿರುವ ಕರೊನಾ ರೋಗದ ಬಗ್ಗೆ ಅತಿಭಯದ ಅವಶ್ಯಕತೆಯಿಲ್ಲ. ಪ್ರತಿಯೊಬ್ಬರೂ ಸ್ವಯಂ ಸ್ವಚ್ಛತೆಯಿಂದ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಇತರರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ. ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಜನನಿಬಿಡ ಪ್ರದೇಶದಲ್ಲಿ ಸೇರುವುದು ಅಥವಾ ಇತರ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದುವುದರಿಂದ ದೂರವಿರಬೇಕು. ಕೆಮ್ಮುವಾಗ, ಸೀನುವಾಗ ಶುಭ್ರ ಕರವಸ್ತ್ರ ಬಳಸಿದಲ್ಲಿ ಮಾಸ್ಕ್ ಅನವಶ್ಯಕ ಎಂದು ತಿಳಿಸಿದರು.
ಡಾ. ನಮ್ರತಾ ಶಾನಭಾಗ ಮಾತನಾಡಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕರೊನಾ ರೋಗದ ಭೀತಿ ಹೆಚ್ಚುತ್ತಿದೆ. ಪ್ರಸ್ತುತ ಶೇ. 2ರಷ್ಟಿರುವ ಕರೊನಾ ಈ ಮೊದಲು ಶೇ. 20ರಷ್ಟು ಜಗತ್ತನ್ನು ವ್ಯಾಪಿಸಿರುವ ರೋಗಗಳಿಗಿಂತ ಜನರನ್ನು ಹೆಚ್ಚು ಭಯಗ್ರಸ್ತವಾಗಿಸಿದೆ. ಸರಿಯಾದ ಮಾಹಿತಿ ಪಡೆದು ವೈದ್ಯರ ಸಲಹೆಗಳೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ವಿದ್ಯಾನಿಕೇತನ ಸಂಸ್ಥೆ ಕಾರ್ಯಾಧ್ಯಕ್ಷ ಆರ್.ಜಿ. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ವಿ.ಎಸ್. ಹೆಗಡೆ, ಟಿ.ಎಸ್. ಭಟ್ಟ, ಐ.ಪಿ. ಭಟ್ಟ, ಜಿ.ವಿ. ಹೆಗಡೆ ಇದ್ದರು. ವಿದ್ಯಾನಿಕೇತನ ಸಂಸ್ಥೆ ಸದಸ್ಯ ಡಾ. ಎಸ್.ವಿ. ಭಟ್ಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯಾಧ್ಯಾಪಕ ವಿವೇಕ ಆಚಾರಿ, ಶಿಕ್ಷಕ ಲೋಕೇಶ ಹೆಗಡೆ, ಜಿ.ಆರ್. ನಾಯ್ಕ ನಿರ್ವಹಿಸಿದರು.