Tuesday, 11th December 2018  

Vijayavani

Breaking News

ವೈಯಕ್ತಿಕ ಆಯ್ಕೆಗಳನ್ನು ಶಾಸನದಿಂದ ನಿರ್ದೇಶಿಸಲಾಗದು

Thursday, 16.11.2017, 3:00 AM       No Comments

ಅಸಮಾಧಾನ/ಬೇಗುದಿಗಳನ್ನು ವ್ಯಕ್ತಪಡಿಸಲೆಂದು ಶಾಂತಿಯುತ ಪ್ರತಿಭಟನೆ ನಡೆಸುವುದು ಮತ್ತು ಸಂಬಂಧಪಟ್ಟ ಅಧಿಕಾರವಲಯಗಳಲ್ಲಿ ಈ ದನಿ ಕೇಳುವಂತಾಗಬೇಕೆಂದು ನಿರೀಕ್ಷಿಸುವುದು ಜನರ ಮೂಲಭೂತ ಹಕ್ಕು. ಅದೇ ರೀತಿಯಲ್ಲಿ, ಪ್ರತಿಭಟನೆಗೆ ಅನುಜ್ಞಾರ್ಹವಾದ ಸಂಕೇತವಿಧಾನವನ್ನು ಬಳಸಿಕೊಳ್ಳುವುದು ಕೂಡ ಜನರ ಹಕ್ಕೇ ಆಗಿದೆ. 

ರಾಷ್ಟ್ರಗೀತೆಗೆ ಗೌರವ ಸಲ್ಲಬೇಕೆನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ ನಿರ್ದಿಷ್ಟ ವಿಧಾನದಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವಂತೆ ಮೇಲೆ ನಿರ್ಬಂಧ ಹೇರಿದರೆ ಅದರಿಂದ ಜನರ ಕ್ರಿಯಾಸ್ವಾತಂತ್ರ್ಯದ ನೆಲೆಗಟ್ಟಿಗೆ ಧಕ್ಕೆಯಾಗುತ್ತದೆ ಎಂಬ ಕುರಿತು ನಿನ್ನೆಯ ಕಂತಿನಲ್ಲಿ ರ್ಚಚಿಸಲಾಗಿತ್ತು. ಇಂದು ಈ ನಿಟ್ಟಿನಲ್ಲಿನ ಮತ್ತಷ್ಟು ಸಂಗತಿಗಳನ್ನು ಅವಲೋಕಿಸೋಣ.

ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವಲ್ಲಿ ನಮ್ಮ ಸಂವಿಧಾನಕ್ಕಿರುವ ಚೈತನ್ಯ ಮಹತ್ತರವಾದುದು. ಜೀವನದ ಮತ್ತು ಸಮಾನತೆಯ ಹಕ್ಕುಗಳು ಮಾತ್ರವಲ್ಲದೆ, ಅಭಿವ್ಯಕ್ತಿ, ಸಭೆ ಸೇರುವಿಕೆ, ವ್ಯಾಪಾರ, ಧರ್ಮ, ಶಿಕ್ಷಣ ಮತ್ತು ಇಂಥ ಇನ್ನೂ ಅನೇಕ ವಿಷಯಗಳ ಕುರಿತಾದ ಸ್ವಾತಂತ್ರ್ಯಗಳು ಈ ಪಟ್ಟಿಯಲ್ಲಿ ಸೇರಿವೆ. ‘ಮೂಲಭೂತ’ ಹೆಸರಿದ್ದ ಮಾತ್ರಕ್ಕೆ ಮೂಲಭೂತ ಹಕ್ಕುಗಳನ್ನು ಹಾಗೆಂದು ಪರಿಗಣಿಸಲಾಗದು. ಬ್ರಿಟಿಷರ ಕಪಿಮುಷ್ಟಿಯಲ್ಲಿ ನಲುಗಿದ ಭಾರತದ ಜನರು, ಸುದೀರ್ಘ ಕಾಲದವರೆಗೆ ಅತ್ಯಂತ ಮೂಲಭೂತವೆನಿಸಿದ್ದ ಮಾನವ ಹಕ್ಕುಗಳಿಂದ ವಂಚಿತರಾಗಿದ್ದರ ಹಿನ್ನೆಲೆಯಲ್ಲಿ ಈ ಹಕ್ಕುಗಳಿಗಿರುವ ಮಹತ್ವವನ್ನು ಗ್ರಹಿಸಬೇಕು. ಸರ್ಕಾರದ ದಮನಕಾರಿ ನೀತಿಯಿಂದಾಗಿ ಬಳಲಿದವರು, ಇಂಥ ಸಂರಕ್ಷಣಾತ್ಮಕ ಹಕ್ಕುಗಳ ಪ್ರಾಮುಖ್ಯವನ್ನು ನಿಜಕ್ಕೂ ಅರ್ಥೈಸಿಕೊಳ್ಳಬಲ್ಲರು. ಆದ್ದರಿಂದ, ಈ ಹಕ್ಕುಗಳ ಅರ್ಥ, ಇಂಗಿತ, ಪ್ರಾಮುಖ್ಯ ಹಾಗೂ ವ್ಯಾಪ್ತಿಯನ್ನು ನಿರ್ಷRಸುವಾಗ ಸಂವಿಧಾನದ ಹಿನ್ನೆಲೆಯನ್ನು ಅವಲೋಕಿಸಬೇಕಾಗುತ್ತದೆ. ಈ ಪರಿಗಣನೆಯಿಟ್ಟುಕೊಂಡೇ, ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಭಾರತ ಗಣರಾಜ್ಯವನ್ನು ಹುಟ್ಟುಹಾಕುವಂಥ ಸಂವಿಧಾನವೊಂದನ್ನು ನಮಗೆ ಕೊಟ್ಟುಕೊಂಡಿದ್ದೇವೆ.

ಗರಿಷ್ಠತಮ ಕ್ರಿಯಾಸ್ವಾತಂತ್ರ್ಯ ಮತ್ತು ಸೀಮಿತ ಆಡಳಿತ ಚಟುವಟಿಕೆ/ಹತೋಟಿಯಂಥ ನೆಲೆಗಟ್ಟಿನ ಮೇಲೆ ಸರ್ಕಾರದ ಕ್ರಮವಿರಬೇಕು ಎಂಬುದನ್ನು ಇವೆಲ್ಲವೂ ಸೂಚ್ಯವಾಗಿ ಹೇಳುತ್ತವೆ. ಅಷ್ಟೇ ಅಲ್ಲ, ಸಂವಿಧಾನಕ್ಕೆ ಮೂಲಾಧಾರವಾಗಿರುವುದು ವೈಯಕ್ತಿಕ ಹಕ್ಕುಗಳ ಪಾರಮ್ಯವೇ ವಿನಾ, ಸರ್ಕಾರಿ ಕ್ರಮದ ಪರಮಾಧಿಕಾರವಲ್ಲ ಎಂಬುದನ್ನೂ ಇದು ಧ್ವನಿಸುತ್ತದೆ. ಈ ರೀತಿಯಾಗಿ, ನಾಗರಿಕರ ಜೀವನ/ಜೀವನಶೈಲಿಗಳ ಮೇಲೆ ಸರ್ಕಾರವು ಅತಿರೇಕದ ಹತೋಟಿ ಚಲಾಯಿಸದಂತೆ ತಡೆಯುವ ನಿಯಂತ್ರಕವಾಗಿ ಸಂವಿಧಾನವು ಪಾತ್ರವಹಿಸುತ್ತದೆ. ಹಕ್ಕುಗಳ ಚಲಾವಣೆಯ ಮೇಲೂ ಸಂವಿಧಾನ ಒಂದಷ್ಟು ಕಟ್ಟುಪಾಡುಗಳನ್ನು ಹೇರಿದೆಯಾದರೂ, ಆ ಕಟ್ಟುಪಾಡುಗಳು ಇತರರ ಕ್ರಿಯಾಸ್ವಾತಂತ್ರ್ಯವನ್ನು ನಿಜಕ್ಕೂ ಸಂರಕ್ಷಿಸುವುದರ ಜತೆಗೆ ಎಲ್ಲರ ಯೋಗಕ್ಷೇಮವನ್ನು ಬಯಸುವಂಥವಾಗಿವೆ ಹಾಗೂ ನಾಗರಿಕರ ಆಯ್ಕೆಗಳನ್ನು ಅನುಚಿತ ರೀತಿಯಲ್ಲಿ ಮೊಟಕುಗೊಳಿಸುವ ಇಂಗಿತ ಇವಕ್ಕಿಲ್ಲ.

ಆದಾಗ್ಯೂ, ಇಂಥ ಪಾರಸ್ಪರಿಕ ಕ್ರಿಯೆಗಳಿಂದಾಗಿ ಕೆಲವೊಮ್ಮೆ ತಿಕ್ಕಾಟಗಳು ಉದ್ಭವಿಸುತ್ತವೆ. ಪ್ರಸ್ತುತ ಮುನ್ನೆಲೆಗೆ ಬಂದಿರುವ ರಾಷ್ಟ್ರಗೀತೆ ಗಾಯನ ಕುರಿತಾದ ಚರ್ಚೆಗೆ ಸಂಬಂಧಿಸಿದ ಉದಾಹರಣೆಯೊಂದು, ‘ಬಿಜೋ ಎಮಾನ್ಯುಯೆಲ್ ವರ್ಸಸ್ ಕೇರಳ ಸರ್ಕಾರ (1986)’ ಪ್ರಕರಣದಲ್ಲಿ ಸವೋಚ್ಚ ನ್ಯಾಯಾಲಯವು ನೀಡಿದ ನಿರ್ಣಯದಲ್ಲಿ ದಾಖಲಿಸಲ್ಪಟ್ಟಿದೆ. ಈ ಪ್ರಕರಣದಲ್ಲಿ, ಮೂವರು ಮಕ್ಕಳು ‘ಯೆಹೋವನ ಸಾಕ್ಷಿಗಳು’ (ಒಛಿಜಟಡಚಜ’ಠ ಗಜಿಠ್ಞಿಛಿಠಠಛಿಠ) ಎಂಬ ಧಾರ್ವಿುಕ ಗುಂಪಿನ ಸದಸ್ಯರಾಗಿದ್ದರು. ಶಾಲೆಯ ಬೆಳಗಿನ ಸಭೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವಾಗ, ಅವರು ನಿಂತಿರುತ್ತಿದ್ದರೇ ಹೊರತು ಹಾಡುತ್ತಿರಲಿಲ್ಲ. ಕೆಲವೊಂದು ‘ಒತ್ತಾಯಗುಂಪುಗಳು’ ಇದಕ್ಕೆ ‘ದೇಶಪ್ರೇಮವಿಲ್ಲದ’ ವರ್ತನೆ ಎಂದು ದೂರಿದ್ದರಿಂದಾಗಿ ಪ್ರಾಂಶುಪಾಲರು ಈ ಮಕ್ಕಳನ್ನು ಶಾಲೆಯಿಂದ ಹೊರಹಾಕಿದರು. ಸವೋಚ್ಚ ನ್ಯಾಯಾಲಯ ಈ ಉಚ್ಚಾಟನೆಯನ್ನು ಅಸಾಂವಿಧಾನಿಕ ಎಂದಿತು. ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ತುಲನೆ ಮಾಡುತ್ತ ಅದು ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿತ್ತು: ‘ಸಂವಿಧಾನಕ್ಕೆ ನಿಷ್ಠೆಯಿಂದಿದ್ದು ವಿಧೇಯರಾಗಿ ನಡೆದುಕೊಳ್ಳಬೇಕಾದ ಹಾಗೂ ಅದರ ಆದರ್ಶಗಳು, ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಬೇಕಾದ ಕರ್ತವ್ಯವನ್ನು ಸಂವಿಧಾನದ 51ಎ ವಿಧಿಯು ಭಾರತದ ಪ್ರತಿಯೊಬ್ಬ ನಾಗರಿಕನ ಮೇಲೆ ವಿಧಿಸುತ್ತದೆಯಾದರೂ, ರಾಷ್ಟ್ರಗೀತೆಯ ಗಾಯನವಾಗುತ್ತಿರುವಾಗ ಅದರಲ್ಲಿ ಸೇರಿಕೊಳ್ಳದಿರುವ ಮೂಲಕ ಅಗೌರವ ತೋರಿಸಲಾಗಿದೆ ಎನ್ನುವುದು ಸೂಕ್ತವಾಗಲಾರದು; ಕಾರಣ, ರಾಷ್ಟ್ರಗೀತೆಯನ್ನು ಹಾಡುತ್ತಿರುವಾಗ ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಎದ್ದುನಿಂತಿದ್ದರು’. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಮೌನವಾಗಿ ಉಳಿಯುವ ಹಕ್ಕೂ ಅಂತರ್ಗತವಾಗಿದೆ ಎಂಬುದನ್ನು ನ್ಯಾಯಾಲಯ ಈ ರೀತಿಯಾಗಿ ವ್ಯಾಖ್ಯಾನಿಸಿತು.

ಎದ್ದು ನಿಲ್ಲುವ ಆದರೆ ಹಾಡದಿರುವ ವರ್ತನೆಯು ಗೌರವಸೂಚಿಸುವುದರ ಒಂದು ಅಳತೆಗೋಲಾದರೆ, ರಾಷ್ಟ್ರಗೀತೆಯನ್ನು ನುಡಿಸುತ್ತಿರುವಾಗ ವ್ಯಕ್ತಿಯೊಬ್ಬನು ಗೌರವಪೂರ್ಣವಾಗಿ ಮಂಡಿಯೂರಿ ಕುಳಿತಿರುವ ಮತ್ತು ಎದ್ದು ನಿಲ್ಲದಿರುವ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಬಹುದೇ? ಅಥವಾ ಹಾಗೆ ಮಾಡಿದಲ್ಲಿ ಅದನ್ನು ಅಗೌರವವಾಗುತ್ತದೆಯೇ ಮತ್ತು ಅದು ‘ರಾಷ್ಟ್ರೀಯ ಗೌರವ ಅಪಮಾನ ತಡೆ ಕಾಯ್ದೆ, 1971’ರ ಪರಿಚ್ಛೇದ 3ರಲ್ಲಿ ನೀಡಲಾಗಿರುವ ದಂಡನೆಗೆ ಸಂಬಂಧಿಸಿದ ಉಪಬಂಧಗಳು ಅದಕ್ಕೆ ಅನ್ವಯವಾಗುತ್ತವೆಯೇ? ಎಂಬ ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತದೆ.

ವರ್ಣಭೇದ ನೀತಿ ಹಾಗೂ ಪೊಲೀಸರ ಪಾಶವೀವರ್ತನೆಗೆ ವಿರುದ್ಧವಾಗಿ ಅಮೆರಿಕ ರಾಷ್ಟ್ರೀಯ ಫುಟ್​ಬಾಲ್ ಲೀಗ್​ನ ತಂಡಗಳಲ್ಲಿದ್ದ ಆಟಗಾರರು ಈಚೆಗೆ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ, ಅಮೆರಿಕದ ರಾಷ್ಟ್ರಗೀತೆಯನ್ನು ನುಡಿಸುತ್ತಿರುವಾಗ ಮಂಡಿಯೂರಿ ಕುಳಿತುಕೊಳ್ಳುವ ಮೂಲಕ ಅಸಮಾಧಾನವನ್ನು ಹೊರಹಾಕಿದರು. ಇಂಥ ಆಟಗಾರರಲ್ಲೊಬ್ಬ ಮಂಡಿಯೂರಿ ಕುಳಿತಿದ್ದರ ಜತೆಗೆ, ‘ಕಪು್ಪ ಜನರನ್ನು ಮತ್ತು ಮಿಶ್ರವರ್ಣೀಯರನ್ನು ದಮನಿಸುವ ದೇಶವೊಂದರ ಧ್ವಜದ ಬಗ್ಗೆ ನನಗಿರುವ ಹೆಮ್ಮೆಯನ್ನು ತೋರಿಸಲು ನಾನು ಎದ್ದು ನಿಲ್ಲುವುದಿಲ್ಲ. ನನ್ನ ಪಾಲಿಗೆ, ಇದು ಫುಟ್​ಬಾಲ್​ಗಿಂತ ಮಿಗಿಲಾದದು’ ಎಂದು ಹೇಳಿದ ಎನ್ನಲಾಗಿದೆ.

ಭಾರತದಲ್ಲಿರುವುದು ಇದಕ್ಕೆ ತದ್ವಿರುದ್ಧವಾದ ಪರಿಪಾಠ. ಶಾಸನಗಳ ಮೂಲಕ ಮತ್ತು ಸ್ವರೂಪನಿಷ್ಠವಾಗಿ ನಾವು ನಮ್ಮ ರಾಷ್ಟ್ರೀಯ ಚಿಹ್ನೆಗಳೆಡೆಗೆ ಅದರಲ್ಲೂ ನಿರ್ದಿಷ್ಟವಾಗಿ ರಾಷ್ಟ್ರಧ್ವಜದೆಡೆಗೆ- ಅವುಗಳ ಹಿಂದಿರುವ ಅರ್ಥವನ್ನು ಪ್ರಜ್ಞಾಪೂರ್ವಕವಾಗಿ ತಿಳಿದುಕೊಂಡೇ- ಗೌರವ ಸೂಚಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ. ನಮ್ಮ ಹಕ್ಕುಗಳನ್ನು ಚಲಾಯಿಸುವಾಗ ಹೊಣೆಗಾರಿಕೆಯ ಅರಿವನ್ನೂ ಹೊಂದಿದ್ದೇವೆ. ನಮ್ಮ ಹಕ್ಕುಗಳು ನಮ್ಮ ಕರ್ತವ್ಯಗಳಿಗೆ ಸಂಬಂಧಿಸಿದಂಥವು, ನಮ್ಮ ಹಕ್ಕುಗಳ ದುರುಪಯೋಗವಾಗಬಾರದು ಮತ್ತು ಕರ್ತವ್ಯಗಳಿಂದ ವಿಮುಖರಾಗಬಾರದು ಎಂಬುದೂ ನಮಗೆ ಗೊತ್ತಿದೆ.

ಸ್ವಾರಸ್ಯಕರ ಸಂಗತಿಯೆಂದರೆ, ‘ರಾಷ್ಟ್ರೀಯ ಗೌರವ ಅಪಮಾನ ತಡೆ ಕಾಯ್ದೆ’ಯು ರಾಷ್ಟ್ರಧ್ವಜವನ್ನು ಅಪಮಾನಿಸುವ ಅಪರಾಧಕ್ಕೆ ಒಂದು ವಿನಾಯಿತಿಯನ್ನು ಒದಗಿಸುತ್ತದೆ; ‘ಭಾರತದ ಸಂವಿಧಾನಕ್ಕೆ ತಿದ್ದುಪಡಿ ಅಥವಾ ಭಾರತದ ರಾಷ್ಟ್ರಧ್ವಜಕ್ಕೆ ಮಾರ್ಪಾಡೊಂದನ್ನು ತರುವ ದೃಷ್ಟಿಯಿಟ್ಟುಕೊಂಡು, ಸಂವಿಧಾನವನ್ನು ಅಥವಾ ಭಾರತದ ರಾಷ್ಟ್ರಧ್ವಜವನ್ನು ಅಥವಾ ಸರ್ಕಾರದ ಯಾವುದೇ ಕ್ರಮಗಳನ್ನು ಟೀಕಿಸುವ ಅಥವಾ ಅಸಮ್ಮತಿಸುವಂಥ ಹೇಳಿಕೆಗಳನ್ನು’ ಹೊರತುಪಡಿಸುವ ಮೂಲಕ ಅದು ಇಂಥ ವಿನಾಯಿತಿಯನ್ನು ನೀಡಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆಯ ವಿಷಯಗಳಿಗೆ ಸಂಬಂಧಿಸಿದ ವರ್ತನೆ ಮತ್ತು ಗೌರವವು ಸಮರ್ಥವಾಗಿಯೇ ವ್ಯಾಖ್ಯಾನಿಸಲ್ಪಟ್ಟಿರುವಾಗಲೇ, ಇದಕ್ಕೆ ಪ್ರತಿಯಾಗಿರುವ ಗೌರವಯುತವಾಗಿ ಪ್ರತಿಭಟಿಸುವ ಹಕ್ಕೆಂಬುದು ಒಂದು ಜಟಿಲ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಕಾನೂನು ಇಲ್ಲದಿರುವುದೇ ಇದಕ್ಕೆ ಕಾರಣ.

ಅಸಮಾಧಾನ/ಬೇಗುದಿಗಳನ್ನು ವ್ಯಕ್ತಪಡಿಸಲೆಂದು ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವುದು ಮತ್ತು ಸರ್ಕಾರಕ್ಕೆ ಈ ದನಿ ಕೇಳುವಂತಾಗಬೇಕೆಂದು ನಿರೀಕ್ಷಿಸುವುದು ಜನರ ಮೂಲಭೂತ ಹಕ್ಕು ಎಂಬುದನ್ನು ಅಲ್ಲಗಳೆಯಲಾಗದು. ಅದೇ ರೀತಿಯಲ್ಲಿ, ಪ್ರತಿಭಟನೆಗೆ ಅನುಜ್ಞಾರ್ಹವಾದ ಸಂಕೇತವಿಧಾನ ಬಳಸಿಕೊಳ್ಳುವುದು ಕೂಡ ಜನರ ಹಕ್ಕೇ ಆಗಿದೆ. ಸಂವಿಧಾನದ 19(1)(ಎ), 19(1)(ಬಿ) ಮತ್ತು 19(1)(ಸಿ) ವಿಧಿಗಳ ಅಡಿಯಲ್ಲಿ ಖಾತ್ರಿಪಡಿಸಲಾಗಿರುವ ಮೂಲಭೂತ ಸ್ವಾತಂತ್ರ್ಯಗಳಲ್ಲಿ ಪ್ರತಿಭಟನೆಯ ಹಕ್ಕೊಂದರ ಜಾಡುಹಿಡಿಯಬಹುದು. 19(1)(ಎ) ವಿಧಿಯು ನಾಗರಿಕರಿಗೆ ವಾಕ್ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ ಮತ್ತು ತನ್ಮೂಲಕ ಈ ಉಪಬಂಧವು ಕೆಟ್ಟಭಾಷೆಯನ್ನು ಬಳಸದೆಯೇ ಶಾಂತಿಯುತ ಹಾಗೂ ವ್ಯವಸ್ಥಿತ ವಿಧಾನದಲ್ಲಿ ನಾಗರಿಕನೊಬ್ಬ ಘೋಷಣೆಗಳನ್ನು ಕೂಗಬಹುದು ಎಂಬುದನ್ನು ಖಾತ್ರಿಪಡಿಸುತ್ತದೆ. ಅಷ್ಟೇ ಅಲ್ಲ, ಮೌನವಾಗೇ ಉಳಿಯುವ ಹಕ್ಕು ಹಾಗೂ ಅಸಮ್ಮತಿಸುವ ಹಕ್ಕನ್ನೂ ಇದು ಖಾತ್ರಿಪಡಿಸುವುದರಿಂದಾಗಿ, ನಾಗರಿಕನೊಬ್ಬನು ನಿರ್ದಿಷ್ಟ ಘೋಷಣೆಯ ವಿಷಯದಲ್ಲಿ ಅಸಮ್ಮತಿಸಬಹುದು ಹಾಗೂ ತನ್ನ ಅಸಮ್ಮತಿ/ನಿರಾಕರಣೆಯನ್ನು ವ್ಯಕ್ತಪಡಿಸಬಹುದು. ಸಭೆಸೇರುವ ಹಕ್ಕನ್ನು 19(1)(ಬಿ) ವಿಧಿಯು ನೀಡುತ್ತದೆ ಮತ್ತು ತನ್ಮೂಲಕ ಶಾಂತಿಯುತವಾಗಿ ಮತ್ತು ಶಸ್ತ್ರಾಸ್ತ್ರಗಳಿಲ್ಲದೆ ಒಂದೆಡೆ ಸೇರುವ ಹಕ್ಕು ಎಲ್ಲ ನಾಗರಿಕರಿಗೂ ಇದೆ ಎಂಬುದನ್ನು ಅದು ಖಾತ್ರಿಪಡಿಸುತ್ತದೆ. ಇನ್ನು, 19(1)(ಡಿ) ವಿಧಿಯ ಅಡಿಯಲ್ಲಿ ಮುಕ್ತವಾಗಿ ಸಂಚರಿಸುವ ಹಕ್ಕನ್ನು ಪ್ರದಾನಿಸಲಾಗಿದ್ದು, ಶಾಂತಿಯುತ ಪ್ರತಿಭಟನಾ ಮೆರವಣಿಗೆಗಳನ್ನು ಜನರು ನಡೆಸಬಹುದೆಂಬುದನ್ನು ಅದು ಖಾತ್ರಿಪಡಿಸುತ್ತದೆ.

ಚಲನಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ನುಡಿಸುವ ಮತ್ತು ಹಾಡುವ ಚರ್ಚಾವಿಷಯವನ್ನು ಭಾರತದ ಸವೋಚ್ಚ ನ್ಯಾಯಾಲಯವು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ವಿವೇಚನೆ ಮತ್ತು ತೀರ್ವನಕ್ಕೆ ಬಿಟ್ಟಿದೆ. ಈ ವಿಷಯವನ್ನು ಪರಿಗಣಿಸುವಾಗ, ಸರ್ಕಾರವು ತನ್ನ ಮಾರ್ಗದರ್ಶಿ ಸೂತ್ರಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ‘ಗೌರವಯುತ ಪ್ರತಿಭಟನೆಗಿರುವ ಹಕ್ಕಿನ’ ಪರಿಗಣನೆಯಲ್ಲಿ ಮರುಪರಿಶೀಲಿಸುವುದು ಮುಖ್ಯವಾಗುತ್ತದೆ. ನಾವು ಇಂಥದೇ ಉನ್ನತ ಗೌರವವನ್ನು ಇಟ್ಟುಕೊಂಡಿರುವ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ವಿಷಯದಲ್ಲೂ ನ್ಯಾಯಸಮ್ಮತ ಚರ್ಚೆ ಹಾಗೂ ಟೀಕೆ-ಟಿಪ್ಪಣಿಗಳಿಗೆ ನಾವು ಅವಕಾಶ ಕಲ್ಪಿಸಿಕೊಡಬೇಕಾಗುತ್ತದೆ. ಹಕ್ಕುಗಳನ್ನು ದಮನಿಸುವುದಕ್ಕೆ ಮತ್ತು ಬಲವಂತದ ದೇಶಪ್ರೇಮವನ್ನು ತುಂಬುವುದಕ್ಕೆ ರಾಷ್ಟ್ರಗೀತೆಯು ಒಂದು ಸಾಧನವಾಗಿ ಬಳಕೆಯಾಗುವುದಕ್ಕೆ ನಾವೇಕೆ ಅವಕಾಶ ನೀಡಬೇಕು? ರಾಷ್ಟ್ರಗೀತೆಯ ಗಾಯನ/ವಾದನದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನು ಮಂಡಿಯೂರಿ ಕೂರಲು ಬಯಸಬಹುದು ಮತ್ತು ಅದೇ ವೇಳೆಗೆ ನಮ್ಮ ರಾಷ್ಟ್ರ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಸಾಧನೆಗಳ ಕುರಿತಾಗಿ ಅತೀವ ಗೌರವವನ್ನೂ ಹೊಂದಿರಬಹುದು. ಆದ್ದರಿಂದ, ಎಲ್ಲಿಯ ತನಕ ಆತ ಮತ್ತೊಬ್ಬರ ದೇಶಭಕ್ತಿಯ ಅಭಿವ್ಯಕ್ತಿಗೆ ಅಡಚಣೆ ಒಡ್ಡುವುದಿಲ್ಲವೋ ಅಥವಾ ರಾಷ್ಟ್ರಗೀತೆಗೆ ಅನುಚಿತ ರೀತಿಯಲ್ಲಿ ಅಗೌರವ ತೋರುವುದಿಲ್ಲವೋ, ಅಲ್ಲಿಯವರೆಗೆ ತನ್ನ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಚಲಾಯಿಸುವುದಕ್ಕೆ ಅವನಿಗೆ ಅನುವುಮಾಡಿಕೊಡಬೇಕು. ‘ನೀನು ಹೇಳುವುದನ್ನು ನಾನು ಒಪ್ಪದಿರಬಹುದು; ಆದರೆ ಪ್ರಾಣ ಕೊಟ್ಟಾದರೂ ಸರಿ, ನಿನಗಿರುವ ಹೇಳುವ ಹಕ್ಕನ್ನು ರಕ್ಷಿಸುತ್ತೇನೆ’ ಎಂಬ ಗ್ರಹಿಕೆಯು ಬಹುಸಾಂಸ್ಕೃತಿಕ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರ ತಳಹದಿಯಾಗಿರುತ್ತದೆ ಎಂಬುದನ್ನು ಮರೆಯದಿರೋಣ.

Leave a Reply

Your email address will not be published. Required fields are marked *

Back To Top