ವೈಭವೀಕರಣ ಬೇಡ, ವಸ್ತುಸ್ಥಿತಿ ಇರಲಿ

ಶಿವಮೊಗ್ಗ: ಸಂಕಷ್ಟಕ್ಕೊಳಗಾದ ಯಾವುದೆ ವ್ಯಕ್ತಿಯೂ ಸಮೀಕ್ಷೆಯಿಂದ ಹೊರಗುಳಿಯಬಾರದು ಹಾಗೂ ವಿಷಯ ವೈಭವೀಕರಿಸದೆ ವಾಸ್ತವ ಚಿತ್ರಣ ಮತ್ತು ಸರ್ಕಾರದಿಂದ ಬೇಕಾಗುವ ಪರಿಹಾರ ಮೊತ್ತ ಕುರಿತು ನಿಖರ ವರದಿ ನೀಡಿ ಎಂದು ಅಪರ ಮುಖ್ಯ ಕಾರ್ಯದರ್ಶಿ ರಾಜೀವ್​ಚಾವ್ಲಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಶನಿವಾರ ಜಿಲ್ಲೆಯ ನೆರೆಹಾನಿ ಮಾಹಿತಿ ಪಡೆದ ಅವರು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೆರೆ ಹಾನಿಗೊಳಗಾದ ಜನ-ಜಾನುವಾರು, ಬೆಳೆ, ಮನೆ-ಮಠ, ಆಸ್ತಿಪಾಸ್ತಿ ನಷ್ಟದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ನಷ್ಟದ ಅಂದಾಜು ಲೆಕ್ಕ ಕ್ರೋಡೀಕರಿಸಿ, ಅಗತ್ಯ ಪರಿಹಾರ ಧನ ಬಿಡುಗಡೆಗೆ ಡಿಸಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ನೆರೆಯಿಂದ ಸಂತ್ರಸ್ತರಾದ ಅನೇಕ ಕುಟುಂಬಗಳ ಅಸಂಖ್ಯಾತ ಸದಸ್ಯರು ಪರಿಹಾರ ಕೇಂದ್ರಗಳಲ್ಲಿ ವಸತಿ ಸೌಲಭ್ಯ ಪಡೆದು ಈಗೀಗ ಮನೆಗೆ ತೆರಳುತ್ತಿದ್ದಾರೆ. ಆದರೂ ಶಿವಮೊಗ್ಗದ 4 ಹಾಗೂ ಸಾಗರದ ಒಂದು ಕೇಂದ್ರದಲ್ಲಿ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. ಇದಲ್ಲದೇ ನೆರೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿಯೂ ನೆರೆ ಪರಿಹಾರ ಕೇಂದ್ರಕ್ಕೆ ಬಾರದಿರುವವರೂ ಇದ್ದಾರೆ. ಅವರೆಲ್ಲರೂ ದಿನಕ್ಕೆ 60 ರೂ.ನಂತೆ ನಿರ್ವಹಣಾ ವೆಚ್ಚ ಹಾಗೂ 10 ಸಾವಿರ ರೂ. ಗಳ ಪರಿಹಾರಧನ ಪಡೆಯಲು ಅರ್ಹರಾಗಿದ್ದಾರೆ. ಆದ್ದರಿಂದ ಅಂತಹ ಸಂತ್ರಸ್ತರ ವಿಳಾಸ, ಬ್ಯಾಂಕ್ ಖಾತೆ ಮತ್ತಿತರ ವಿವರ ಸಂಗ್ರಹಿಸಿ ಎಂದು ಡಿಸಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾ. ಪಿ.ಮಣಿವಣ್ಣನ್, ಡಿಸಿ ಕೆ.ಬಿ.ಶಿವಕುಮಾರ್, ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಜಿಪಂ ಸಿಇಒ ಕೆ.ಶಿವರಾಮೇಗೌಡ, ಎಡಿಸಿ ಜಿ.ಅನುರಾಧಾ ಇತರರು ಇದ್ದರು.

ಎಲ್ಲಿ, ಎಷ್ಟು ನಷ್ಟ? ಸಣ್ಣ ಹಿಡುವಳಿದಾರರ 680 ಹೆಕ್ಟೇರ್ ಮಳೆ ಆಶ್ರಿತ ಮತ್ತು 3,027 ಹೆಕ್ಟೇರ್ ನೀರಾವರಿ ಕೃಷಿ ಭೂಮಿ ಹಾಗೂ 1,309 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದೆ. ತೋಟಗಾರಿಕೆ ಬೆಳೆಗಳಲ್ಲಿ ಬಹುಮುಖ್ಯವಾಗಿ ಶುಂಠಿ ಮತ್ತು ಅನಾನಸ್ ಬೆಳೆ ಅಲ್ಲದೆ 3,680 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಕೆ ಬೆಳೆ ಗುರುತಿಸಲಾಗಿದೆ. ಜತೆಗೆ ಜಾನುವಾರುಗಳು ಮೃತಪಟ್ಟಿವೆ. ಅವುಗಳ ನಷ್ಟದ ಅಂದಾಜು ಮೊತ್ತವನ್ನು ಶೀಘ್ರದಲ್ಲಿ ಸಮೀಕರಿಸುವಂತೆ ರಾಜೀವ್ ಚಾವ್ಲಾ ಹೇಳಿದರು.

ಜಿಲ್ಲಾದ್ಯಂತ 482 ಕಚ್ಚಾ ಮನೆಗಳು, 1,203 ಮನೆಗಳು ಗಂಭೀರ ಸ್ವರೂಪದಲ್ಲಿ ಹಾಗೂ 1,399 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಇವುಗಳಲ್ಲದೆ ಕೊಟ್ಟಿಗೆ ಮನೆಗಳು ಕೂಡ ಹಾನಿಗೊಳಗಾಗಿರುವುದನ್ನು ಗುರುತಿಸಲಾಗಿದೆ. ಅಂತೆಯೇ ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಶಾಲೆಗಳು, ಆರೋಗ್ಯ ಕೇಂದ್ರಗಳು, ಅಂಗನವಾಡಿ ಕಟ್ಟಡಗಳು, ರಸ್ತೆ, ಸೇತುವೆಗಳು ಹಾನಿಗೊಳಗಾಗಿವೆ. ಅವುಗಳ ನಷ್ಟವನ್ನು ಅಂದಾಜು ಮಾಡಲಾಗುವುದಲ್ಲದೇ ಅವುಗಳ ದುರಸ್ತಿ, ನವೀಕರಣ ಹಾಗೂ ನೂತನ ಕಟ್ಟಡಗಳ ನಿರ್ವಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಗಲತ್ತಿಗೆ ರಾಜೀವ್ ಚಾವ್ಲಾ ಭೇಟಿ: ತೀರ್ಥಹಳ್ಳಿ: ಮಳೆಯಿಂದ ಹಾನಿಗೀಡಾದ ಮಂಡಗದ್ದೆ ಹೋಬಳಿಯ ಹೆಗಲತ್ತಿ ಮತ್ತು ಅತ್ತಿಗದ್ದೆ ಗ್ರಾಮಗಳಿಗೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ಹಾಗೂ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜತೆಗೆ ಆಗಮಿಸಿ ಹೆಗಲತ್ತಿ ಗ್ರಾಮದ ಸರ್ವೆ ನಂ.42ರಲ್ಲಿ ಹಾನಿಗೊಳಗಾದ ಸಂತ್ರಸ್ತ ರೈತರ ಅಹವಾಲುಗಳನ್ನು ಆಲಿಸಿದರು. ನಂತರ ಕನ್ನಂಗಿ ಸಮೀಪದ ಅತ್ತಿಗದ್ದೆ ಗ್ರಾಮಕ್ಕೆ ತೆರಳಿ ಕುಂಟೇಹಳ್ಳದ ಸೇತುವೆ ಹಾಗೂ ಹಳ್ಳದ ದಡದಲ್ಲಿ ಹಾನಿಗೀಡಾದ ಪ್ರದೇಶ ವೀಕ್ಷಣೆ ಮಾಡಿದರು. ತಹಸೀಲ್ದಾರ್ ಎಂ.ಭಾಗ್ಯಾ, ರಾಜಸ್ವ ನಿರೀಕ್ಷಕ ಸ್ವಾಮಿ, ಮಾಳೂರು ಪಿಎಸ್​ಐ ಅಶ್ವಿನ್ ಇದ್ದರು.

Leave a Reply

Your email address will not be published. Required fields are marked *