ವೈದ್ಯ ವಿದ್ಯಾರ್ಥಿಗಳಿಂದ ಪ್ರತಿಭಟನೆ


ಮಡಿಕೇರಿ : ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರ ಕೋಟಾ ಹಾಗೂ ಶುಲ್ಕ ಹೆಚ್ಚಳದ ಪ್ರಸ್ತಾಪವನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್(ಎಐಡಿಎಸ್‌ಒ) ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಶುಲ್ಕ ಹೆಚ್ಚಳದ ಪ್ರಸ್ತಾಪದ ವಿರುದ್ಧ ಘೋಷಣೆ ಕೂಗಿದರು.

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ ಜಾರಿಗೆ ತರುವ ಪ್ರಸ್ತಾಪದ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಇತ್ತೀಚೆಗೆ ಸದನದಲ್ಲಿ ಮಾತನಾಡಿರುವುದನ್ನು ವಿರೋಧಿಸಿ ಮತ್ತು ಆ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಐಡಿಎಸ್‌ಒ ರಾಜ್ಯ ಸಮಿತಿ ಸದಸ್ಯ ಅಜಯ್ ಕಾಮತ್ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ ಕೋಟಾ (ಅನಿವಾಸಿ ಭಾರತೀಯರ ಕೋಟಾ) ಜಾರಿಗೆ ತರುವ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಇತ್ತೀಚೆಗೆ ಸದನದಲ್ಲಿ ಮಾತನಾಡಿದ್ದಾರೆ. ಸರ್ಕಾರದ ಈ ನಿಲುವು ನಿಜಕ್ಕೂ ವೈದ್ಯರಲ್ಲಿ, ವಿದ್ಯಾರ್ಥಿ, ಪಾಲಕರು ಹಾಗೂ ಜನಸಾಮಾನ್ಯರಲ್ಲೂ ದೊಡ್ಡ ಆಘಾತ ಮೂಡಿಸಿದೆ ಎಂದರು.

ರಾಜ್ಯ ಸರ್ಕಾರ, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10ರಷ್ಟು ಎನ್‌ಆರ್‌ಐ ಕೋಟಾವನ್ನು ಜಾರಿಗೆ ತರುವ ಮತ್ತು ವೈದ್ಯ ಕೀಯ ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳ ಶುಲ್ಕವನ್ನು ಶೇ.300 ರಿಂದ 600 ರ ಪ್ರಮಾಣದಲ್ಲಿ ಹೆಚ್ಚಿಸಲು ರಾಜ್ಯ ಸರ್ಕಾರ ಪ್ರಸ್ತಾಪ ಮಾಡಿದೆ. ಹಾಗೆಯೇ ಪದವಿ ಕೋರ್ಸುಗಳ ಶುಲ್ಕವನ್ನು 17 ಸಾವಿರದಿಂದ 50 ಸಾವಿರ ರೂ .ಗೆ ಈಗಾಗಲೇ ಏರಿಸಲಾಗಿದೆ. ಸ್ನಾತಕೋತ್ತರ ಕೋರ್ಸುಗಳ ಶುಲ್ಕಗಳನ್ನು 40 ಸಾವಿರದಿಂದ 3.5 ಲಕ್ಷ ರೂಪಾಯಿಗೆ ಏರಿಸುವ ಪ್ರಸ್ತಾಪ ಮಾಡಿದೆ. ಈ ಮೂಲಕ ರಾಜ್ಯ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇನ್ನೊಂದು ಆಘಾತ ನೀಡಿದೆ ಎಂದರು.

ಬೆಲೆ ಏರಿಕೆ, ಬರ ಮುಂತಾದ ಸಮಸ್ಯೆಗಳಿಂದ ಜನತೆ ತತ್ತರಿಸುತ್ತಿರುವಾಗ, ಶುಲ್ಕಗಳನ್ನು ಕಡಿಮೆ ಮಾಡುವ ಬದಲು, 5-6 ಪಟ್ಟು ಹೆಚ್ಚಿಸಿರುವುದು ಅತ್ಯಂತ ನೋವಿನ ವಿಚಾರ. ಆದ್ದರಿಂದ ಎನ್‌ಆರ್‌ಐ ಕೋಟಾವನ್ನು ಜಾರಿಗೆ ತರುವ ಹಾಗೂ ವೈದ್ಯಕೀಯ-ಸ್ನಾತಕೋತ್ತರ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೈಬಿಡಬೇಕೆಂದು, ಹೆಚ್ಚಿಸಿರುವ ವೈದ್ಯಕೀಯ ಪದವಿ ಶುಲ್ಕವನ್ನು ಹಿಂಪಡೆಯಬೇಕೆಂದು ಅಜಯ್ ಒತ್ತಾಯಿಸಿದರು.

ವೈದ್ಯಕೀಯ ವಿದ್ಯಾರ್ಥಿ ಮಲ್ಲಿಕಾರ್ಜುನ ಮಾತನಾಡಿ, ಇಂದು ಪ್ರತಿಭಾನ್ವಿತ ವಿದ್ಯಾರ್ಥಿಗಳು ಕೂಡ ವೈದ್ಯಕೀಯ ಕ್ಷೇತ್ರದತ್ತ ಬರಲು ಹಿಂದೇಟು ಹಾಕುವ ಸ್ಥಿತಿಯನ್ನು ಸರ್ಕಾರ ನಿರ್ಮಿಸುತ್ತಿದೆ. ಸರ್ಕಾರದ ನೀತಿಯಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಇದೆ. ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಸಿದರೆ ವಿದ್ಯಾರ್ಥಿಗಳ ಸ್ಥಿತಿ ಗೊಂದಲಮಯವಾಗಲಿದೆ ಎಂದು ಆತಂಕ ವ್ಯಕ್ತ ಪಡಿ ಸಿದರು. ಇದೇ ಸಂದರ್ಭದಲ್ಲಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಸೇಷನ್‌ನ ಮೈಸೂರಿನ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ರಾಮಕೃಷ್ಣ, ಶಾಹಿದ್ ಮತ್ತಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *