Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ವೈದ್ಯ, ದಾದಿ ವಿರುದ್ಧ ಐಎಎಸ್ ಅಧಿಕಾರಿ ದೂರು

Monday, 15.10.2018, 3:02 AM       No Comments

ಬೆಂಗಳೂರು: ನವಜಾತ ಶಿಶುವಿಗೆ ಅವಧಿ ಮೀರಿದ ಮತ್ತು ನಿಷೇಧಿತ ಪೋಲಿಯೋ ಲಸಿಕೆ ಹಾಕಿದ್ದಾರೆ ಎಂದು ಆರೋಪಿಸಿ ವೈದ್ಯ ಮತ್ತು ದಾದಿ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ದೂರು ದಾಖಲಿಸಿದ್ದಾರೆ.

ಇಂದಿರಾ ನಗರದ ಸಿಎಂಎಚ್ ಆಸ್ಪತ್ರೆ ವೈದ್ಯ ಡಾ. ಸುರೇಶ್ ಮತ್ತು ದಾದಿ ಕೃಷ್ಣಮ್ಮ ವಿರುದ್ಧ ದೂರು ದಾಖಲಾಗಿದೆ. ಕೆಲ ದಿನಗಳ ಹಿಂದೆ ಪಲ್ಲವಿ ಅಕುರಾತಿ ತಮ್ಮ 10 ವಾರದ ಮಗುವಿಗೆ ಪೋಲಿಯೋ ಲಸಿಕೆ ಹಾಕಲು ಮುಂದಾಗಿದ್ದರು. ಉಪ ಔಷಧ ನಿಯಂತ್ರಕ ಮಲ್ಲಿಕಾರ್ಜುನ ನಾಗೂರ ಬಳಿ ವಿಚಾರಿಸಿದಾಗ, ಸಿಎಂಎಚ್ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಬಹುದು ಎಂದು ಸಲಹೆ ನೀಡಿದ್ದರು. ಈ ಬಗ್ಗೆ ನೆರವು ನೀಡಲು ಫಾರ್ಮಸಿಸ್ಟ್ ನಾಗರಾಜ್​ಗೆ ಸೂಚಿಸಿದ್ದರು. ಅದರಂತೆ ಪಲ್ಲವಿ ಸಿಎಂಎಚ್ ಆಸ್ಪತ್ರೆಗೆ ಹೋಗಿ ನಾಗರಾಜ್​ಗೆ ಕರೆ ಮಾಡಿದ್ದರು. ಮಕ್ಕಳ ತಜ್ಞ ಡಾ. ಸುರೇಶ್ ಬಳಿ ನಾಗರಾಜ್ ಕರೆದುಕೊಂಡು ಹೋಗಿದ್ದರು. ಸುರೇಶ್ 4 ಬಗೆಯ ಲಸಿಕೆ ತರಲು ಚೀಟಿ ಬರೆದು ಕೊಟ್ಟಿದ್ದರು. ಒಪಿವಿ ಲಸಿಕೆ ಆಸ್ಪತ್ರೆಯಲ್ಲೇ ಲಭ್ಯವಿದ್ದ ಹಿನ್ನೆಲೆಯಲ್ಲಿ ಉಳಿದ ಮೂರು ಲಸಿಕೆಗಳನ್ನು ಪಲ್ಲವಿ ತಂದಿದ್ದರು.

ದಾದಿ ಕೃಷ್ಣಮ್ಮ 3 ಲಸಿಕೆಗಳನ್ನು ಪಲ್ಲವಿ ಅವರ ಮಗುವಿಗೆ ಹಾಕಿದ್ದರು. ಮಗುವಿಗೆ ಹಾಕಿದ ಗುಲಾಬಿ ಬಣ್ಣದ ಲಸಿಕೆಯನ್ನು ಪಲ್ಲವಿ ಪರಿಶೀಲಿಸಿದಾಗ ಅದರ ಅವಧಿ ಮೀರಿರುವುದು ಮತ್ತು ಉತ್ಪಾದನೆ ನಿಷೇಧಿಸಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದಾದಿಯನ್ನು ಪ್ರಶ್ನಿಸಿದಾಗ, ವೈದ್ಯರ ಸಲಹೆ ಮೇರೆಗೆ ಲಸಿಕೆ ಹಾಕಿದ್ದೇನೆ ಎಂದು ತಿಳಿಸಿದ್ದರು.

ಇಲಾಖೆ ಗಮನಕ್ಕೆ ತಂದಿದ್ದರು

ಲಸಿಕೆ ಹಾಕುವುದಕ್ಕಿಂತ ಮೊದಲು ಕೆಲ ವೈದ್ಯಕೀಯ ಸೂಚನೆ ಪಾಲಿಸಿಲ್ಲ. ಮಗುವಿಗೆ ಚುಚ್ಚುಮದ್ದು ಹಾಕುವ ವೇಳೆಯೂ ದಾದಿ ನಿರ್ಲಕ್ಷ್ಯ ವಹಿಸಿದ್ದಾರೆ. ಅವಧಿ ಮೀರಿದ ಲಸಿಕೆಗಳನ್ನು ಮಗುವಿಗೆ ನೀಡಿದ ಹಿನ್ನೆಲೆಯಲ್ಲಿ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಪಲ್ಲವಿ ಉಲ್ಲೇಖಿಸಿದ್ದಾರೆ. ಠಾಣೆಯಲ್ಲಿ ದೂರು ದಾಖಲಿಸುವ ಮೊದಲು ನಗರ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಔಷಧ ನಿಯಂತ್ರಕರಿಗೆ ಈ ಕುರಿತು ದೂರು ನೀಡಿದ್ದರು.

Leave a Reply

Your email address will not be published. Required fields are marked *

Back To Top