ವೈದ್ಯಾಧಿಕಾರಿಗೂ ತಗುಲಿದ ಕೆಎಫ್​ಡಿ ವೈರಸ್

ಶಿವಮೊಗ್ಗ: ಕೆಎಫ್​ಡಿ ವೈರಾಣುವಿಗೆ ತುತ್ತಾಗುವವರನ್ನು ಪರೀಕ್ಷಿಸುವ ಬರದಲ್ಲಿ ತಮ್ಮ ಸುರಕ್ಷತೆ ಮರೆಯುವ ವೈದ್ಯರು, ಸಿಬ್ಬಂದಿ ಕೂಡ ಇದಕ್ಕೆ ತುತ್ತಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯೊಬ್ಬರು ಮಂಗನ ಕಾಯಿಲೆಗೆ ತುತ್ತಾಗಿದ್ದರು. ಇದೀಗ ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಶ್​ಗೂ ಕೆಎಫ್​ಡಿ ವೈರಸ್ ತಗುಲಿದೆ.

ಮಂಡಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ತೋಟದಕೊಪ್ಪ ಗ್ರಾಮದಲ್ಲಿ ಕೆಎಫ್​ಡಿ ವೈರಸ್ ಪತ್ತೆಯಾಗಿತ್ತು. ಈ ಭಾಗದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಸತತವಾಗಿ ಓಡಾಡಿದ್ದರು. ಈ ವೇಳೆ ಡಾ. ಸುರೇಶ್​ಗೆ ಉಣ್ಣೆ ಕಚ್ಚಿದ ಪರಿಣಾಮ ಅವರು ಜ್ವರಕ್ಕೆ ತುತ್ತಾಗಿದ್ದರು.

ಕೂಡಲೇ ಅವರು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ವ್ಯಾಪಕ ಪರಿಣಾಮ ಉಂಟು ಮಾಡಿರುವ ಕೆಎಫ್​ಡಿ ವೈರಸ್ ವಿರುದ್ಧ ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ಹೆದ್ದೂರಲ್ಲಿ ವೈರಸ್: ಕೆಲ ದಿನಗಳ ಹಿಂದೆ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಭಾಗದಲ್ಲಿ ಮೃತಪಟ್ಟಿದ್ದ ಮಂಗಗಳಲ್ಲಿ ಕೆಎಫ್​ಡಿ ವೈರಸ್ ಪತ್ತೆಯಾಗಿತ್ತು. ಇದೀಗ ಈ ವೈರಾಣು ಪಕ್ಕದ ಗ್ರಾಮಕ್ಕೂ ಹರಡಿದೆ. ಹೆದ್ದೂರು ಗ್ರಾಮದಲ್ಲಿ ಮೃತಪಟ್ಟಿದ್ದ ಮಂಗದಲ್ಲಿ ಕೆಎಫ್​ಡಿ ವೈರಸ್ ಕಾಣಿಸಿಕೊಂಡಿದ್ದು ಆ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಡಿಎಂಪಿ ತೈಲ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.