ವೈದ್ಯರ ಮುಷ್ಕರ, ರೋಗಿಗಳ ಪರದಾಟ

ಚಿಕ್ಕಬಳ್ಳಾಪುರ:  ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆಗೆ ಜಿಲ್ಲೆಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್​ಗಳು ಸೋಮವಾರ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸುವ ಮೂಲಕ ಬೆಂಬಲ ಸೂಚಿಸಿದವು. ಮತ್ತೊಂದೆಡೆ ಮುಷ್ಕರದ ಹಿನ್ನೆಲೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಪರದಾಡಿದರು.

ವೈದ್ಯರ ಮೇಲೆ ಹಲ್ಲೆ ನಡೆಸಿರುವವರ ಬಂಧನ ಮತ್ತು ವೈದ್ಯರಿಗೆ ರಕ್ಷಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ವೈದ್ಯರ ಸಂಘ ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಬೆಳಗ್ಗೆ 6ರವರೆಗೆ ಮುಷ್ಕರಕ್ಕೆ ಕರೆ ನೀಡಿದ್ದು, ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್​ಗಳು ಬಾಗಿಲು ತೆರೆದಿದ್ದರೂ ಹೊರ ರೋಗಿಗಳ ನೋಂದಣಿ ಮಾಡಿಕೊಳ್ಳಲಿಲ್ಲ. ನಾಮ್ೇವಾಸ್ತೆಗೆ ಸಿಬ್ಬಂದಿ ಕೆಲಸದಲ್ಲಿ ನಿರತರಾಗಿದ್ದರು. ಆಸ್ಪತ್ರೆಗೆ ಬಂದ ರೋಗಿಗಳನ್ನು ಮಾರನೇ ದಿನ ಬರುವಂತೆ ವಾಪಸ್ ಕಳುಹಿಸಿದರು.

ಮೊದಲೇ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ ಚಿಕಿತ್ಸೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಆದರೆ, ಹೆಚ್ಚಿನ ರೋಗಿಗಳ ಆಗಮನದಿಂದ ಒತ್ತಡಕ್ಕೆ ಸಿಲುಕಿದರು.

ತುಂಬಿದ ಜಿಲ್ಲಾಸ್ಪತ್ರೆ: ಮುಷ್ಕರದ ಎಫೆಕ್ಟ್ ಜಿಲ್ಲಾಸ್ಪತ್ರೆಯಲ್ಲಿ ಕಂಡು ಬಂತು. ಸಾಮಾನ್ಯವಾಗಿ ಪ್ರತಿದಿನ 500ರಿಂದ 800 ಹೊರ ರೋಗಿಗಳು ಚಿಕಿತ್ಸೆ ಆಗಮಿಸುತ್ತಿದ್ದರು. ಆದರೆ, ಸೋಮವಾರ ಶೇ.40 ಹೆಚ್ಚಾಗಿತ್ತು. ಬಹುತೇಕ ಮಂದಿ ಮುಷ್ಕರದ ಮಾಹಿತಿ ಕೊರತೆ ಹಿನ್ನೆಲ ಖಾಸಗಿ ಆಸ್ಪತ್ರೆಗೆ ಹೋಗಿ, ಬಳಿಕ ಜಿಲ್ಲಾಸ್ಪತ್ರೆಗೆ ಬಂದಿದ್ದರು. ನೋಂದಣಿ ಕೌಂಟರ್, ರಕ್ತ ಪರೀಕ್ಷೆ, ವೈದ್ಯರು ಮತ್ತು ಔಷಧ ಕೊಠಡಿ ಎದುರು ಸರದಿಯಲ್ಲಿ ನಿಂತು ಸೇವೆ ಪಡೆದುಕೊಂಡರು.

ವೈದ್ಯರ ರಕ್ಷಣೆಗೆ ಒತ್ತಾಯ: ಜನರ ಪ್ರಾಣ ರಕ್ಷಿಸುವ ವೈದ್ಯರು ಮತ್ತು ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ವೆಂಕಟಾಚಲಪತಿ ಒತ್ತಾಯಿಸಿದರು. ಮುಷ್ಕರ ಕುರಿತು ಪದಾಧಿಕಾರಿಗಳೊಂದಿಗೆ ರ್ಚಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವಿವಿಧ ಬೇಡಿಕೆ ಈಡೇರಿಕೆಗೆ ಪಶ್ಚಿಮ ಬಂಗಾಳದಲ್ಲಿ ಆರಂಭವಾದ ವೈದ್ಯರ ಮುಷ್ಕರವು ದೇಶಾದ್ಯಂತ ನಡೆಯುತ್ತಿದೆ. ಇದಕ್ಕೆ ಸರ್ಕಾರ ಈಗಲಾದರೂ ಸ್ಪಂದಿಸಬೇಕು. ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷರಾದ ಎಸ್.ವಿಜಯಾ, ಪ್ರಶಾಂತಮೂರ್ತಿ, ಕಾರ್ಯದರ್ಶಿ ವೈ.ಜೆ.ಸೌಮ್ಯಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *