ವೈದ್ಯರು ಕನ್ನಡಕ್ಕೆ ಕೈ ಎತ್ತಿದರೆ ಕರ್ನಾಟಕವೇ ಕಲ್ಪವೃಕ್ಷ

| ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ

ವೈದ್ಯರು ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸಿದರೆ ಭಾಷೆಯ ಬೆಳವಣಿಗೆ ಜತೆಗೆ ರೋಗಿಗಳಿಗೂ ತುಂಬ ಅನುಕೂಲವಾಗುತ್ತದೆ. ಔಷಧಗಳ ವಿವರ, ಚಿಕಿತ್ಸೆಯ ಮಾಹಿತಿ ಕನ್ನಡದಲ್ಲೇ ನೀಡಿದರೆ ರೋಗಿಗಳು ಆತಂಕದಿಂದ ಹೊರಬಂದು ನಿರಾಳರಾಗುತ್ತಾರೆ. ಈ ನಿಟ್ಟಿನಲ್ಲಿ ವೈದ್ಯರು ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಹತ್ವದ ಬದಲಾವಣೆ ತರಬಹುದು.

ಇತ್ತೀಚೆಗೆ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ’ ಕೂಡ ಒಂದು ಗೋಷ್ಠಿಯಾಗಿತ್ತು. ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವೈದ್ಯರನ್ನು ಕನ್ನಡದ ಕಟ್ಟಾಳುಗಳನ್ನಾಗಿಸುವ ಹೆಜ್ಜೆಯನ್ನು ಮಹಾರಾಜಾ ಕಾಲೇಜು ಶತಮಾನೋತ್ಸವ ಭವನದಲ್ಲಿ ನಾಡೋಜ ಡಾ. ದೇ. ಜವರೇಗೌಡರ ವೇದಿಕೆಯಿಂದ ಇಡಲಾಯಿತು. ಆರು ಕೋಟಿ ಕನ್ನಡಿಗರ ಆರೋಗ್ಯ ಕಾಪಾಡುವ ವೈದ್ಯರು, ಧನ್ವಂತ್ರಿಗಳು ಆಗುವ ಜತೆಗೆ ಕನ್ನಡದ ತೇರು ಎಳೆಯುವ ವ್ಯಕ್ತಿಗಳಲ್ಲ ಶಕ್ತಿಯಾಗಬೇಕು. ವೈದ್ಯವೃತ್ತಿಯಲ್ಲಿ ಕನ್ನಡದ ಬಳಕೆ ಹೆಚ್ಚಿಸಿ ಕನ್ನಡವನ್ನು ಶ್ರೀಮಂತಗೊಳಿಸುವುದರ ಜತೆಗೆ ಕನ್ನಡಿಗರ ಆರೋಗ್ಯ ವೃದ್ಧಿಸಿ ಸಮೃದ್ಧ ಕರ್ನಾಟಕ ಕಟ್ಟುವ ಕೆಚ್ಚಿನ ಕನ್ನಡಿಗರಾಗಬೇಕು. ದೇ.ಜ.ಗೌ. ಅವರು ನನಗೆ ಹೇಳಿದ್ದು- ‘ನೋಡಿ ತಾಯಿ, ನಾವು ಸಾಹಿತಿಗಳು 4 ಗೋಡೆಗಳ ಮಧ್ಯ ಕುಳಿತು ತಲೆ ಓಡಿಸಿ ಏನೋ ಬರೆಯುತ್ತೇವೆ. ಆದರೆ ನೀವು ದಿನಾ ಸಾವು-ನೋವು ನೋಡುವವರು. ಕಷ್ಟಕ್ಕೆ ಸ್ಪಂದಿಸುವ ಹೃದಯದಿಂದ ಬರೆಯುತ್ತೀರಿ. ಇದರಿಂದ ಅದು ಜನರಿಗೆ ಹೃದಯರ್ಸ³ಯಾಗಿರುತ್ತದೆ’. ಪ್ರಾತಃಸ್ಮರಣೀಯರಾದ ದೇ.ಜ.ಗೌ. ಅವರ ಮಾತು ಎಷ್ಟು ಮಾರ್ವಿುಕ. ಕನ್ನಡಿಗರ ಆರೋಗ್ಯದ ರಕ್ಷಕರಾದ ವೈದ್ಯರು ಕನ್ನಡ ನಾಡು ನುಡಿಯ ಸಂರಕ್ಷಕರೂ ಆದರೆ ಉತ್ತಮ.

ಡಾ. ಎಂ. ಶಿವರಾಮ್ ‘ಮನಮಂಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಡಾ. ಅನುಪಮಾ ನಿರಂಜನರ ಹಲವು ಪುಸ್ತಕಗಳು 40 ಮರುಮುದ್ರಣ ಕಂಡು ದಾಖಲೆಮಾಡಿವೆ. ಡಾ. ಜಿ.ಎಸ್. ಶಿವಪ್ಪ 40,000 ಪದಗಳನ್ನು ಅಚ್ಚಕನ್ನಡದಲ್ಲಿ ತರ್ಜುಮೆ ಮಾಡಿ ಪದಕೋಶ ಬರೆದಿದ್ದಾರೆ! ಡಾ. ಸಿ.ಆರ್. ಚಂದ್ರಶೇಖರ್ 200 ಪುಸ್ತಕ ಮತ್ತು ಡಾ. ಪಿ.ಎಸ್. ಶಂಕರ್ 100 ಪುಸ್ತಕಗಳನ್ನು ಕನ್ನಡದಲ್ಲಿ ಬರೆದು ಓದುಗರ ಮನ-ಮನೆ ತಲುಪಿದ್ದಾರೆ. ಇತ್ತೀಚೆಗೆ, ಡಾ. ಗಿರಿಜಾ, ಡಾ. ನಾಗಲೋಟಿಮಠ, ಡಾ. ಲೀಲಾವತಿ ದೇವದಾಸ್, ಡಾ. ಸುನಂದಾ ಕುಲಕರ್ಣಿ, ಡಾ. ವಸುಂಧರಾ ಭೂಪತಿ, ಡಾ. ನಾ. ಸೋಮೇಶ್ವರ, ಡಾ. ವಸಂತ ಕುಲಕರ್ಣಿ ಹೀಗೆ ಹತ್ತು ಹಲವು ಜನ ವೈಯಕ್ತಿಕವಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವ ಸಫಲ ಪ್ರಯತ್ನ ಮಾಡಿದ್ದಾರೆ. ಆದರೆ ಕನ್ನಡದ ಬಳಕೆ ವೈದ್ಯವೃತ್ತಿಯಲ್ಲಿ ಸರ್ವವ್ಯಾಪಿಯಾಗಿ ಪಸರಿಸಬೇಕೆಂದರೆ ಐದು ಸೂತ್ರಗಳನ್ನು ನಾವು ಪಾಲಿಸಬೇಕು-

1) ರೋಗಿಗಳೊಂದಿಗೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಮಾತನಾಡಬೇಕು. 2) ರೋಗಿಗಳಿಗೆ ಕೊಡುವ ಸಲಹೆ-ಸೂಚನೆಗಳನ್ನು ಕನ್ನಡದಲ್ಲಿಯೇ ಬರೆಯಬೇಕು. 3) ಶಸ್ತ್ರಚಿಕಿತ್ಸೆ ಅಥವಾ ತುರ್ತಚಿಕಿತ್ಸೆ ಮಾಡುವ ರೀತಿ ವಿವರಿಸಿ ಅವರಿಂದ ಪಡೆಯುವ ಒಪ್ಪಿಗೆಪತ್ರ ಕಡ್ಡಾಯವಾಗಿ ಕನ್ನಡದಲ್ಲಿರಬೇಕು. 4) ರೋಗಿಯ ಸ್ಥಿತಿಗತಿಯನ್ನು ವೈದ್ಯರು ಕನ್ನಡದಲ್ಲೇ ವಿವರಿಸಬೇಕು. 5) ದೂರದರ್ಶನ, ಆಕಾಶವಾಣಿ, ಅಂತರ್ಜಾಲ, ಪತ್ರಿಕೆಗಳಲ್ಲಿ ಸುಲಭ ಸರಳ ಕನ್ನಡದಲ್ಲಿ ಜನಜಾಗೃತಿ ಮೂಡಿಸಲು ಪ್ರಯತ್ನ ಪಡಬೇಕು.

ಒಂದು ಸಲ ಒಬ್ಬ ದಂಪತಿ 8 ವರ್ಷದ ಮಗುವನ್ನು ಕರೆದುಕೊಂಡು ಬಂದಿದ್ದರು. ಮಗುವಿನ ಹೃದಯದಲ್ಲಿ ರಂಧ್ರ ಇದ್ದು ಅದನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ಡಿವೈಸ್ ಅಳವಡಿಸಿ ನಾನು ಮುಚ್ಚಬೇಕಿತ್ತು. ಮಗುವನ್ನು ಪರೀಕ್ಷಿಸುವಾಗ ಅದರ ಜೀನ್ಸ್ ಮೇಲಿದ್ದ ‘ZOO’ ನೋಡಿದೆ. ‘ಏನಿದು?’ ಎಂದು ಕೇಳಿದ್ದಕ್ಕೆ ಹುಡುಗ ಹುರುಪಿನಿಂದ ‘ZOO’ ಎಂದು ಜೋರಾಗಿ ಹೇಳಿದ. ಆಂಗ್ಲಭಾಷೆಯ ಕೊನೆ ಅಕ್ಷರ ‘ಘ’ನಿಂದ ಇಷ್ಟು ಚೆನ್ನಾಗಿ ಹೇಳುವ ಮಗು ಕನ್ನಡ ಅಕ್ಷರಮಾಲೆಯ ಪ್ರಥಮ ಅಕ್ಷರ ‘ಅ’ನಿಂದ ಏನು ಎಂದು ನಾನು ಕೇಳಿದೆ. ಮಗು ಉತ್ತರ ಕೊಡಲಿಲ್ಲ. ‘ಅ ನಿಂದ ಏನು ಹೇಳು ಪುಟ್ಟಾ’ ಎಂದು ಪುಸಲಾಯಿಸಿದೆ. ಮಗು ಪೆಚ್ಚಾಗಿ ಕುಳಿತಿದ್ದು ನೋಡಿ ತಾಯಿ ‘ಅ ಸೆ ಬೋಲೋ’ ಅಂದಳು. ತಕ್ಷಣ ಮಗು ‘ಅ ಸೆ ಅನಾರ್’ ಅಂತ ಹೇಳಿತು. ನಾನು ಆಶ್ಚರ್ಯದಿಂದ, ‘ನೀವು ಉತ್ತರ ಭಾರತದವರೇ? ಹಾಗೆ ಕಾಣುತ್ತಿಲ್ಲವಲ್ಲ?’ ಅಂತ ಕೇಳಿದಾಗ ಕನ್ನಡ ಕಲಿಸದ ಆ ತಾಯಿ ಹೇಳಿದರು- ‘ನಾವು ಕನ್ನಡದವರೇ. ಆದರೆ ಮಗು ಸಿಬಿಎಸ್​ಸಿ ಶಾಲೆಯಲ್ಲಿ ಓದುತ್ತಿದೆ!’. ಆಗ ನಾನು ‘ಅ’ನಿಂದ ಅಮ್ಮ, ಅಪ್ಪ, ಅವ್ವ, ಅಕ್ಕ, ಅಣ್ಣ, ಅಜ್ಜ, ಅಜ್ಜಿ, ಅತ್ತೆ ಎಷ್ಟೊಂದು ಸುಂದರ ಸುಮಧುರ ಸಂಬಂಧದ ಪದಗಳಿರುವಾಗ ಅವನ್ನು ಹೇಳದೆ ‘ಅನಾರ್’ ಅಂತ ಹೇಳುವ ಅನಾಗರಿಕನನ್ನಾಗಿ ಮಗುವನ್ನು ಬೆಳೆಸುತ್ತಿದ್ದಾರಲ್ಲ! ಎಂದು ಯೋಚಿಸಿದೆ. ಹೃದಯದ ರಂಧ್ರವನ್ನು ನಾನು ಎದೆಮೇಲೆ ಗಾಯವಿಲ್ಲದೆಯೇ ಶಸ್ತ್ರಚಿಕಿತ್ಸೆ ಇಲ್ಲದೆಯೇ ಮುಚ್ಚಬಹುದು. ಆದರೆ ಮಗುವಿನ ಮನದಲ್ಲಿ ಕನ್ನಡ ಅಕ್ಷರ ಹೇಗೆ ಬಿತ್ತುವುದು?

ಆದರೆ ವೈದ್ಯವೃತ್ತಿಯಲ್ಲಿ ನಾವು ರೋಗಿಗಳೊಂದಿಗೆ ಮಾತೃಭಾಷೆಯಲ್ಲಿ ಮಾತನಾಡಿದರೆ ಅವರು ಏನೂ ಮುಚ್ಚಿಡದೆ ಮುಕ್ತ ಮನಸ್ಸಿನಿಂದ ಎಲ್ಲ ಬಿಚ್ಚಿಡುತ್ತಾರೆ. ಇದರಿಂದ ವೈದ್ಯರಿಗೆ ಕಾಯಿಲೆ ಕಂಡುಹಿಡಿಯುವುದು ಸುಲಭವಾಗುತ್ತದೆ. ನಾವು ರೋಗಿಯೊಂದಿಗೆ ಮಾತನಾಡಿ ಅವರ ಗುಣಲಕ್ಷಣಗಳನ್ನು ವಿಶ್ಲೇಷಣೆ ಮಾಡುವುದರಿಂದಲೇ ಕಾಯಿಲೆ ಏನು ಎಂದು ಶೇ. 80ರಷ್ಟು ಕಂಡುಹಿಡಿಯಬಹುದು. ಇನ್ನು ರೋಗಿಯನ್ನು ಮುಟ್ಟಿ ಶರೀರ ಪರೀಕ್ಷಿಸಿ ಶೇ. 18ರಷ್ಟು ರೋಗನಿರ್ಣಯ (Diagnosis) ಮಾಡಬಹುದು. ಕೊನೆಗೆ ಸಂಶಯವಿದ್ದರೆ ರೋಗನಿರ್ಣಯ ಖಚಿತಪಡಿಸಿಕೊಳ್ಳಲು ಪ್ರಯೋಗಾಲಯದ ಕೆಲವು ಪರೀಕ್ಷೆಯನ್ನು ಶೇ. 2ರಷ್ಟು ಮಾಡಬಹುದು. ಹೀಗೆ ಮಾಡಿದಾಗ ರೋಗಿಗಳು, ‘ಡಾಕ್ಟೆ್ರೕ, ನಿಮ್ಮ ಹತ್ತಿರ ಮಾತನಾಡಿದರೆ ಸಾಕು ಅರ್ಧಕಾಯಿಲೆ ಸರಿಯಾಗುತ್ತದೆ’ ಎನ್ನುತ್ತಾರೆ. ಆದರೆ ರೋಗಿಯನ್ನು ಮಾತನಾಡಿಸದೇ, ಕೈಮುಟ್ಟಿ ಪರೀಕ್ಷಿಸದೇ ಇಷ್ಟುದ್ದ ಪರೀಕ್ಷೆ ಬರೆದು ಅವುಗಳ ರಿಪೋರ್ಟ್ ನೋಡಿ ಚಿಕಿತ್ಸೆ ಕೊಡಲು ಹೋದರೆ, ಕತ್ತಲು ಕೋಣೆಯಲ್ಲಿ ಕಪು್ಪಬೆಕ್ಕು ಹುಡುಕಿದಂತಾಗಿ, ರೋಗಿಗೆ ಮಾನಸಿಕ ಆತಂಕ ಮತ್ತು ಖರ್ಚು ಎರಡೂ ದುಬಾರಿಯಾಗಿ ರೋಗಿಯ ಮನೆಯವರು ಪರದಾಡುವಂತಾಗುತ್ತದೆ. ಇದರಿಂದ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧ ಹಾಳಾಗುತ್ತದೆ.

ರೋಗಿಗೆ ಚಿಕಿತ್ಸೆಗೆ ಬರೆದುಕೊಡುವ ಸಲಹೆ-ಸೂಚನೆಗಳನ್ನು ಕೂಡ ಕನ್ನಡದಲ್ಲಿ ಬರೆಯಬೇಕು. ಆಂಗ್ಲಭಾಷೆಯಲ್ಲಿ ಬರೆದರೆ ಪಾಪ ಹೆಸರು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಒಂದು ಸಲ- ‘ಯಜಮಾನರೇ, ಏನು ಮಾತ್ರೆ ತೆಗೆದುಕೊಳ್ಳುತ್ತಿದ್ದೀರಿ?’ ಎಂದು ಕೇಳಿದಾಗ ಅವರು- ‘ಡ್ಯಾನಿಯಲ್ ಮತ್ತು ಆಂಟೋನಿ’ ಅಂದರು! ಬಹುಶಃ ತಮ್ಮ ಹೆಸರು ಹೇಳುತ್ತಿರಬೇಕೆಂದು ಚೀಟಿಯಲ್ಲಿ ಅವರ ಹೆಸರು ನೋಡಿದರೆ ‘ರಾಮಸ್ವಾಮಿ’ ಎಂದಿತ್ತು. ಹಳೇ ಚೀಟಿ ನೋಡಿದಾಗ ಸಕ್ಕರೆ ಕಾಯಿಲೆಗೆ Daonil ಮತ್ತು ಬಿಪಿಗೆ Atenolol ಎಂದು ಬರೆದಿತ್ತು! ಇನ್ನೂ ಕೆಲವರು ಹೆಸರು ತಿಳಿಯದೇ ಹಸಿರು, ನೀಲಿ, ಹಳದಿ, ಗುಲಾಬಿ, ಬಿಳೀ ಬಣ್ಣದ್ದು ಅಂತ ಮಾತ್ರೆ ತೆಗೆದುಕೊಳ್ಳುತ್ತಾರೆ. ಅಕಸ್ಮಾತ್ ಔಷಧ ಅಂಗಡಿಯವರು ಕಂಪನಿ ಬದಲಾಯಿಸಿ ಬೇರೆ ಬಣ್ಣದ್ದು ಕೊಟ್ಟರೆ ಅನಾಹುತ ಖಂಡಿತ. ಆದ್ದರಿಂದ ವೈದ್ಯರು ಕನ್ನಡದಲ್ಲಿ ಬರೆದರೆ ವಾಸಿ. ಅದರಲ್ಲೂ OD, BD, tid, qid ಅಂತ ಬರೆಯದೇ, ದಿನಕ್ಕೆ ಒಂದು, ಎರಡು ಬಾರಿ, ಮೂರು ಸಲ, ಇಲ್ಲ ನಾಲ್ಕು ಸಲ, ಊಟದ ಮೊದಲು, ನಂತರ ಅಂತ ಕನ್ನಡದಲ್ಲಿ ಬರೆದರೆ ರೋಗಿಗೆ ತುಂಬ ಉಪಯೋಗವಾಗುತ್ತದೆ.

ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಮುದ್ರಿಸಬೇಕು. ಶಸ್ತ್ರಚಿಕಿತ್ಸೆ ಅಥವಾ ತುರ್ತಚಿಕಿತ್ಸೆ ವಿವರಿಸಿ ಮನೆಯವರಿಂದ ಪಡೆಯಬೇಕಾದ ಒಪ್ಪಿಗೆ ಪತ್ರ ಕನ್ನಡಲ್ಲಿದ್ದು ಅದನ್ನು ಸರಿಯಾಗಿ ವಿವರಿಸಿ ಸಾಕ್ಷಿ ಸಮೇತ ಸಹಿ ಹಾಕಿಸಿಕೊಂಡರೆ, ಮುಂದೆ ಅಕಸ್ಮಾತ್ ಯಾರಾದರೂ ಕೋರ್ಟಿಗೆ ಹೋದರೆ ಒಪ್ಪಿಗೆ ಪತ್ರ ಸಹಾಯಕ್ಕೆ ಬರುತ್ತದೆ. ಗಂಭೀರ ಪರಿಸ್ಥಿತಿಯನ್ನು ಅಚ್ಚಕನ್ನಡದಲ್ಲಿ ಸರಳವಾಗಿ, ಕರುಣೆ-ಕನಿಕರದಿಂದ ವಿವರಿಸಿದರೆ ಕನ್ನಡ ಅವರನ್ನು ರಕ್ಷಿಸುತ್ತದೆ.

ನಾವು ಕಲಿತಿದ್ದು ಇಂಗ್ಲಿಷ್​ನಲ್ಲಿ, ಕನ್ನಡದಲ್ಲಿ ಹೇಗೆ ವಿವರಿಸುವುದು ಎಂದು ಚಿಂತಿಸಬೇಕಿಲ್ಲ. ಹಾಸ್ಯಬ್ರಹ್ಮರ ಸುಲಭಸೂತ್ರ ಬಳಸಿ ಇಂಗ್ಲಿಷ್ ಪದಕ್ಕೆ ‘ಉ’ ಸೇರಿಸಿದರೆ ಆಯ್ತು! ಯಕೃತ್ ಅಂದರೆ ಲಿವರ್. ತಕ್ಷಣಕ್ಕೆ ಯಕೃತ್ ಬಾಯಿಗೆ ಬರದಿದ್ದರೆ ‘ಲಿವರು’ ಅಂದರೆ ಕನ್ನಡವಾಯ್ತು. ಇನ್ನು, ಕೊಡುವ ಔಷಧಗಳ ಅಡ್ಡಪರಿಣಾಮ ಮತ್ತು ವಿಷಮ ಪರಿಣಾಮಗಳಿಂದ ಜೀವಕ್ಕೆ ಅಪಾಯ. ಇದನ್ನು ಮೊದಲೇ ವಿವರಿಸಿ ಸಹಿ ಪಡೆದಿರಬೇಕು. ಇಲ್ಲದಿದ್ದರೆ ಅತ್ತ ರೋಗಿ ಸತ್ತರೆ, ಇತ್ತ ವೈದ್ಯರ ವೃತ್ತಿಯೇ ಸಾಯುತ್ತದೆ.

ಮಾಧ್ಯಮಗಳ ಮೂಲಕ ಜನರಲ್ಲಿ ಆರೋಗ್ಯಕರ ಜೀವನಶೈಲಿಯ ಜಾಗೃತಿ ಮೂಡಿಸುವುದೂ ಬಹಳ ಮುಖ್ಯ. ನಾವು ಆಸ್ಪತ್ರೆಯಲ್ಲಿ ಕುಳಿತಲ್ಲೇ ನೂರಾರು ರೋಗಿಗಳಿಗೆ ಸಲಹೆ ನೀಡಬಹುದು. ಆದರೆ ಮಾಧ್ಯಮಗಳ ಮೂಲಕ ಲಕ್ಷಾಂತರ ಜನರ ಮನದಲ್ಲಿ ಆರೋಗ್ಯದ ಬೀಜವನ್ನು ಕನ್ನಡ ಭಾಷೆ ಮುಖಾಂತರ ಬಿತ್ತಬಹುದು. ಹಲವು ವರ್ಷಗಳ ಹಿಂದೆ ಕೆನಡಾದ ರಾಜಧಾನಿ ಟೊರೊಂಟೊದಲ್ಲಿ ನನ್ನ ಹೊಸ ವಿಧಾನದ ಮಂಡನೆ ಮಾಡಿದಾಗ ಕಿವಿಗಡಚಿಕ್ಕುವಂತೆ 3 ನಿಮಿಷ ಕರತಾಡನ ಮಾಡಿದರು. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಅನ್ನುವಂತೆ ಸಂತಸಪಟ್ಟುಕೊಂಡು ದೂರವಾಣಿಯಲ್ಲಿ- ‘ಅಪ್ಪ, ವಿಶ್ವ ಸಮ್ಮೇಳನದಲ್ಲಿ 58 ದೇಶದಿಂದ ಬಂದ ಮಕ್ಕಳ ಹೃದ್ರೋಗ ತಜ್ಞರು ಜೋರಾಗಿ ಚಪ್ಪಾಳೆ ತಟ್ಟಿದರಪ್ಪ’ ಅಂತ ಸಂಭ್ರಮದಿಂದ ಹೇಳಿದೆ. ಅದಕ್ಕ ನನ್ನಪ್ಪ ಕೇಳಿದರು- ‘ಅದರಿಂದ ಏನು ಉಪಯೋಗ?’. ನಾನು ಭೂಮಿಗಿಳಿದು ‘ಅಂದರೆ ಉಪಯೋಗ ಆಗಲು ಏನು ಮಾಡಬೇಕು?’ ಎಂದು ಕೇಳಿದಾಗ, ನನ್ನಪ್ಪ ನನಗೆ ಮಾಡಿದ ಉಪದೇಶ ಸಮಸ್ತ ವೈದ್ಯರಿಗೆ ತಲುಪಬೇಕು. ನನ್ನಪ್ಪ ಹೇಳಿದ್ದು- ‘ಕನ್ನಡದಲ್ಲಿ ಬರಿ, ಕನ್ನಡದಲ್ಲಿ ಭಾಷಣ ಮಾಡು. ನಿನ್ನ ವಿದ್ಯೆ, ಬುದ್ಧಿ, ವಿಚಾರದಿಂದ ನಮ್ಮ ಜನಸಾಮಾನ್ಯರ ಬದುಕು ಬಂಗಾರವಾದರೆ ನನ್ನ ಮಗಳು ಭೇಷ್ ಅನ್ನುತ್ತೇನೆ’ ಎಂದರು!

ನನ್ನಪ್ಪನ ಉಪದೇಶದಂತೆ ‘ಧೂಮಲೀಲೆಯಿಂದ ದೂರವಿರಿ’, ‘ಹಣಕೊಟ್ಟು ಸಾರಾಯಿಯಿಂದ ಸಾವಿನ ಖರೀದಿ’ ಅಂಕಣ ಬರೆಯಲು ಪ್ರಾರಂಭಿಸಿದೆ. ಆ ಒಂದು ಲೇಖನದ 40 ಸಾವಿರ ಪ್ರತಿಯನ್ನು ಜನ ಹಂಚಿದರು. 175ಕ್ಕೂ ಹೆಚ್ಚು ದೂರವಾಣಿ ಕರೆಗಳು ಬಂದವು. ಕುಡುಕರು, ಅವರ ಮನೆಯವರು, ಅಬಕಾರಿ ಇಲಾಖೆಯವರಿಂದ. ಕೊನೆಗೆ ಒಂದು ತಿಂಗಳ ನಂತರ ಒಂದು ಕರೆ ಬಂತು- ‘ಡಾಕ್ಟರೇನ್ರೀ? ನಾನು ಇಲ್ಲಿ ಮೈತ್ರಿ ನರ್ಸಿಂಗ್ ಹೋಮ್ಲ್ಲಿ ದಾಖಲಾಗಿದ್ದೇನೆ. ಡಾಕ್ಟರು ನಿಮ್ಮ ಲೇಖನ ಕಟ್ಟುಹಾಕಿಸಿ ಹಾಕಿದ್ದಾರ್ರೀ. ನಾನು ಓದಿ ಇವತ್ತಿನಿಂದ ಕುಡಿಯೋದನ್ನು ಬಿಡಬೇಕಂತ ನಿರ್ಧಾರ ಮಾಡಿದ್ದೀನ್ರೀ’ ಅಂತ ಆ ಕಡೆ ಧ್ವನಿ ಕೇಳಿ ನನ್ನಪ್ಪನ ಉಪದೇಶ ಎಷ್ಟು ಸತ್ಯ ಅಂತ ಅರ್ಥವಾಯಿತು. ಕನ್ನಡ ಭಾಷೆಗೆ ಅಮಾಯಕರಲ್ಲಿ ಜಾಗೃತಿ ಮೂಡಿಸಿ ಅವರ ಬದುಕು ಬಂಗಾರ ಮಾಡಿ ಭವಿಷ್ಯ ಭದ್ರಪಡಿಸುವ ಅಗಾಧ ಶಕ್ತಿಯಿದೆ. ಕುವೆಂಪು ಹೇಳಿದರು- ‘ಕನ್ನಡಕ್ಕೆ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದು. ಆದರೆ ವೈದ್ಯರು ಕನ್ನಡಕ್ಕೆ ಕೈಎತ್ತಿದರೆ ಇಡೀ ಕರ್ನಾಟಕವೇ ಕಲ್ಪವೃಕ್ಷವಾಗುವುದರಲ್ಲಿ ಸಂಶಯವಿಲ್ಲ! ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *