ವೈದ್ಯಕೀಯ ವೃತ್ತಿಯಲ್ಲಿ ಮೌಲ್ಯಗಳಿರಲಿ

ಹುಬ್ಬಳ್ಳಿ: ವೈದ್ಯಕೀಯ ವೃತ್ತಿಯಲ್ಲಿ ಮೌಲ್ಯಗಳು ಜೀವಂತವಾಗಿಡಬೇಕು. ಪ್ರಾಮಾಣಿಕತೆ, ವಿಶ್ವಾಸ ಇದ್ದರೆ ಸಂಪತ್ತು, ಸಂಪದಗಳೆಲ್ಲ ತಾನಾಗಿಯೇ ಹರಿದು ಬರಲಿವೆ ಎಂದು ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಕೆ. ರಮೇಶ ಹೇಳಿದರು.

ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್್ಸ) ಸಭಾಂಗಣದಲ್ಲಿ ಶನಿವಾರ ನಡೆದ 56ನೇ ಎಂಬಿಬಿಎಸ್ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ರೋಗಿಗಳು ವೈದ್ಯರ ವಿಶ್ವಾಸ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. ತಮ್ಮಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗದಿದ್ದರೂ ಪರವಾಗಿಲ್ಲ. ಬೇರೆಯವರ ಹತ್ತಿರ ಕಳುಹಿಸಿಕೊಡಿ. ಇದರಿಂದ ವೈದ್ಯರ ಮೇಲೆ ನಂಬಿಕೆ ಗೌರವವೂ ಹೆಚ್ಚಾಗಲಿದೆ ಎಂದರು.

ಕಿಮ್್ಸ ಹಳೆಯ ವಿದ್ಯಾರ್ಥಿ, ಐಎಎಸ್ ಅಧಿಕಾರಿ ಡಾ. ರವಿಕುಮಾರ ಸುರಪುರ ಮಾತನಾಡಿ, ಬದುಕಿನಲ್ಲಿ ಸುಂದರ ಪಯಣ ಸಾಗಿಸಬೇಕೆಂದರೆ, ಜೀವನದಲ್ಲಿ ಕೆಲವೊಂದು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಬೇರೆಯವರನ್ನು ನೋಡಿ ಏನು ಕಲಿಯಬೇಕು, ಕಲಿಯಬಾರದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಭಾಷೆಗಿಂತ ಭಾವನೆ ಮುಖ್ಯವೆಂಬುದನ್ನು ಮೊದಲು ಅರಿಯಬೇಕು. ಯಾವುದೇ ಸಂದರ್ಭದಲ್ಲಿ ಮುಖವಾಡ ಧರಿಸಬೇಡಿ. ಇದು ಜೀವನದ ಮೌಲ್ಯಗಳನ್ನು ಅಧಃಪತನಕ್ಕೆ ತಳ್ಳುತ್ತದೆ ಎಂದರು.

ಕಿಮ್್ಸ ಪ್ರಭಾರಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರಲ್ಲಿ ಮೌನವೀಯ ಗುಣ, ಪ್ರಾಮಾಣಿಕತೆ, ಶ್ರದ್ಧೆ ಇದ್ದರೆ ಯಶಸ್ಸು ತಾನಾಗಿಯೇ ಅರಸಿ ಬರುತ್ತದೆ ಎಂದರು.

ಡಾ. ವಿನಯ ಕೌಲಗಿ ಐದು ಚಿನ್ನದ ಪದಕ, ಡಾ. ನಿಷ್ಕಲಾ ರಾವ್ ನಾಲ್ಕು, ಡಾ. ಅಂಕಿತಾ ತ್ಯಾಗಿ ತಲಾ ಮೂರು ಚಿನ್ನದ ಪದಕ ಮುಡಿಗೇರಿಸಿಕೊಂಡರು. ಕೆಲವರು ವಿವಿಧ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಇದೇ ವೇಳೆ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.

ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಪ್ರಭಾರಿ ಪ್ರಾಚಾರ್ಯ ಡಾ. ಎಂ.ಸಿ. ಚಂದ್ರು, ಕಾರ್ಯಕ್ರಮದ ಚೇರ್ಮನ್ ಡಾ. ಕೆ.ಎಫ್. ಕಮ್ಮಾರ, ವೈಸ್ ಚೇರ್ಮನ್ ಡಾ. ಈಶ್ವರ ಹೊಸಮನಿ, ಡಾ. ಶಿಲ್ಪಾ, ಆಡಳಿತಾಧಿಕಾರಿ ಬಸವರಾಜ ಸೋಮಣ್ಣವರ, ಡಾ. ಪ್ರಕಾಶ ವಾರಿ, ಡಾ. ರಾಜೇಶ್ವರಿ ಯಲಿಗಾರ, ಡಾ. ಗಜಾನನ ನಾಯಕ, ಡಾ. ಸೂರ್ಯಕಾಂತ ಕಲ್ಲೂರಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚಿನ್ನದ ಪದಕ ಬಂದಿರುವುದು ಖುಷಿ ತರಿಸಿದೆ. ನಮ್ಮ ಮಾವ ವೈದ್ಯರಿದ್ದರು. ಅವರೇ ನನಗೆ ಸ್ಪೂರ್ತಿ. ನಾನು, ನನ್ನ ಸಹೋದರ ಇಬ್ಬರೂ ಎಂಬಿಬಿಎಸ್ ಮಾಡಿದ್ದೆವು. ಮುಂದೆ ಮಕ್ಕಳ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಆಸೆ ಇದೆ. | ಡಾ. ವಿನಯ ಕೌಲಗಿ, ಚಿನ್ನದ ಪದಕ ಪಡೆದವರು

ನಮ್ಮ ಮನೆಯಲ್ಲಿ ಯಾರೂ ಡಾಕ್ಟರ್ ಇರಲಿಲ್ಲ. ನಮ್ಮ ಕುಟುಂಬದಲ್ಲಿ ನಾನೇ ಫಸ್ಟ್. ನನ್ನ ಸಹೋದರರು ಇಂಜಿನಿಯರ್ ಆಗಿದ್ದಾರೆ. ಸ್ನಾತಕೋತ್ತರ ಅಧ್ಯಯನ ಮಾಡುವ ಬಯಕೆ ಇದೆ. ಅದಕ್ಕೆ ತಂದೆ-ತಾಯಿ ಪ್ರೋತ್ಸಾಹವೂ ಇದೆ. | ಡಾ. ನಿಷ್ಕಲಾ ರಾವ್, ಚಿನ್ನದ ಪದಕ ಪಡೆದವರು