More

  ವೈಝಾಗ್ ನೂತನ ರೈಲ್ವೆ ವಲಯ ಸ್ಥಾಪನೆ

   ಕಲಬುರಗಿ: ನೂತನ ರೈಲ್ವೆ ವಲಯಗಳು, ವಿಭಾಗೀಯ ಕಚೇರಿಗಳು ದೇಶದ ನಾನಾ ಕಡೆಗಳಲ್ಲಿ ಆರಂಭವಾಗುತ್ತಿದ್ದರೂ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಗೆ ಮಾತ್ರ ಗ್ರಹಣ ಹಿಡಿದಿದೆ. ಆಂಧ್ರದ ವೈಝಾಗ್ನಲ್ಲಿ ಪ್ರಾರಂಭವಾಗಲಿರುವ ನೂತನ ರೈಲ್ವೆ ವಲಯಕ್ಕೆ ಕಲಬುರಗಿ ವಿಭಾಗದ ಕೆಲ ಜಿಲ್ಲೆಗಳು ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಕಲಬುರಗಿ ವಿಭಾಗೀಯ ಕಚೇರಿಗೆ ಹೊಡೆತ ಬೀಳಲಿದೆ. ಆದರೂ ಜನನಾಯಕರು ಕ್ಯಾರೆ ಎನ್ನದಿರುವುದು ಅಚ್ಚರಿ ಮೂಡಿಸಿದೆ.
  ಆಂಧ್ರದ ವೈಝಾಗ್ನಲ್ಲಿ ನೂತನ ರೈಲ್ವೆ ವಲಯ ಸ್ಥಾಪನೆಯಾಗುತ್ತಿದ್ದು, ಏಪ್ರಿಲ್ನಲ್ಲಿ ಕಾರ್ಯಾರಂಭ ಮಾಡಲಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಆದರೆ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಮುಹೂರ್ತ ಕೂಡಿ ಬಾರದಿರುವುದು ಈ ಭಾಗದ ಜನರ ಆಕ್ರೋಶಕ್ಕೆ ಗುರಿಯಾಗಿದೆ.
  ವೈಝಾಗ್ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಕಲಬುರಗಿ ವಿಭಾಗದ ಕೆಲ ರೈಲು ಮಾರ್ಗಗಳು ಸೇರಿವೆ. ಜತೆಗೆ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಈ ವಲಯದ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಹೀಗಾಗಿ ಕಲಬುರಗಿ ವಿಭಾಗೀಯ ರೈಲ್ವೆ ಕಚೇರಿ ಸ್ಥಾಪನೆ ಕನಸಾಗಿ ಉಳಿಯುವ ಸಾಧ್ಯತೆಗಳು ಗೋಚರಿಸಿವೆ. ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೆಲ್ಲಾ ಬೆಳವಣಿಗೆ ನಡೆದರೂ ರಾಜ್ಯ ಜನಪ್ರತಿನಿಧಿಗಳು ಚಕಾರ ಎತ್ತದಿರುವುದು ಅಚ್ಚರಿ ಮೂಡಿಸಿದೆ.
  2014ನೇ ಸಾಲಿನಲ್ಲಿ ಕೇಂದ್ರ ಯುಪಿಎ ಸರ್ಕಾರ  ಕಲಬುರಗಿ ವಿಭಾಗೀಯ ಕಚೇರಿ ಸ್ಥಾಪನೆಗೆ ಗ್ರೀನ್ಸಿಗ್ನಲ್ ನೀಡಿತ್ತು. ಆಗಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಮುತುವರ್ಜಿವಹಿಸಿ ಆರಂಭಿಕವಾಗಿ 5 ಕೋಟಿ ರೂ. ಅನುದಾನ ಒದಗಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಎನ್ಡಿಎ ಸರ್ಕಾರ ಈ ಕುರಿತು ಪ್ರಸ್ತಾವನೆಗೆ ಕೈಗೆತ್ತಿಕೊಳ್ಳಲೇ ಇಲ್ಲ. ಈವರೆಗೂ ನಿರಂತರ ಹೋರಾಟ ನಡೆಯುತ್ತಿವೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಿರಂತರ ಪ್ರಯತ್ನ ನಡೆಸಿದೆ. ಆದರೂ ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿ ತೋರದಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ತೀವ್ರ ನಿರಾಸೆ ಮೂಡಿಸಿದೆ.
  ಪ್ರಸಕ್ತ ಸೊಲ್ಲಾಪುರ ರೈಲ್ವೆ ವಿಭಾಗೀಯ ಕಚೇರಿ ವ್ಯಾಪ್ತಿಗೆ ಬರುವ ಕಲಬುರಗಿ ವಿಭಾಗದ ಒಟ್ಟು ಆದಾಯದ ಶೇ.60ರಷ್ಟು ಕಲಬುರಗಿ ವಿಭಾಗದಿಂದ ಹೋಗುತ್ತಿದೆ. ಹಾಗೊಂದು ವೇಳೆ ಕಲಬುರಗಿ ವಿಭಾಗೀಯ ಕಚೇರಿ ಸ್ಥಾಪನೆಗೆ ಮುಂದಾದರೆ ಸೊಲ್ಲಾಪುರ ರೈಲ್ವೆ ವಿಭಾಗ ಕಚೇರಿ ಆದಾಯ ಗಣನೀಯವಾಗಿ ಕುಂಠಿತಗೊಳ್ಳಲಿದೆ. ಈ ಕಾರಣದಿಂದಾಗಿ ಕಲಬುರಗಿ ಕಚೇರಿ ಸ್ಥಾಪನೆಗೆ ಹಿಂದೇಟು ಹಾಕುತ್ತಿದ್ದು, ಜತೆಗೆ ಈ ವಿಳಂಬದ ಹಿಂದೆ ರಾಜಕೀಯವೂ ಬೆರೆತಿದೆ ಎನ್ನಲಾಗುತ್ತಿದೆ.
  ವಿಭಾಗೀಯ ಕಚೇರಿ ಸ್ಥಾಪನೆಗೆ ಕಲಬುರಗಿಯ ಐವಾನ್ಇ ಶಾಹಿ ಪ್ರದೇಶದಲ್ಲಿ ಸ್ಥಳ ಗುರುತಿಸಿ ಬೇಲಿಯನ್ನೂ ಹಾಕಲಾಗಿದೆ. ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಎಂಬ ನಾಮಫಲಕ ಹೊರತುಪಡಿಸಿ ಇನ್ನಾವ ಚಟುವಟಿಕೆಗಳೂ ನಡೆಯುತ್ತಿಲ್ಲ. ರಾಜ್ಯ ನಾಯಕರು, ಅದರಲ್ಲೂ ವಿಶೇಷವಾಗಿ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ರಾಜ್ಯ ಸರ್ಕಾರದ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಮುಂದಾಗಬೇಕಿದೆ. 

  ವೈಝಾಗ್ ರೈಲ್ವೆ ವಲಯ ಸ್ಥಾಪನೆಯಾಗಿ ಕಲಬುರಗಿ ವಿಭಾಗದ ಯಾದಗಿರಿ, ರಾಯಚೂರು ಜಿಲ್ಲೆಗಳು ಸೇರ್ಪಡೆಯಾಗಲಿವೆ. ಈ ಮೂಲಕ ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಇನ್ನೂ ವಿಳಂಬವಾಗುವ ಸಾಧ್ಯತೆಗಳು ಗೋಚರಿಸಿವೆ. ಇನ್ನಾದರೂ ಶಾಸಕರು, ಸಂಸದರು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವ ಅಗತ್ಯವಿದೆ.
  ಸುನಿಲಕುಮಾರ ಕುಲಕರ್ಣಿ, ಕಲಬುರಗಿ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts