ವೈಜ್ಞಾನಿಕ ಸಂಶೋಧನೆಗೆ ಆದ್ಯತೆ ನೀಡಿ

ಚಿಕ್ಕಬಳ್ಳಾಪುರ:  ಜೀವ ಸಂಕುಲ ಸಂರಕ್ಷಣೆಯ ಕೌಶಲ ಮತ್ತು ತಂತ್ರಜ್ಞಾನ ಬೆಳವಣಿಗೆಯಾಗಬೇಕಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಎಸ್​ಜೆಸಿಐಟಿ ಕಾಲೇಜು ಸಭಾಂಗಣದಲ್ಲಿ ರಾಜ್ಯ ತಂತ್ರಜ್ಞಾನ ಅಕಾಡೆಮಿ ಮಂಗಳವಾರ ಹಮ್ಮಿಕೊಂಡಿದ್ದ ಸಿಪೋಸಿಯಂ ಕಮ್ ಪ್ರಾಜೆಕ್ಟ್ ಎಕ್ಸಿಬಿಷನ್ ಆನ್ ರಿಸೆಂಟ್ ಅಡ್ವಾನ್ಸ್ ಇನ್ ಇಂಜಿನಿಯರಿಂಗ್ ಸೈನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಕೃತಿಯು ವರದಾಯಕ ಹಲವು ಕೊಡುಗೆಗಳನ್ನು ನೀಡಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಆದರೆ, ಮನುಷ್ಯನ ಸ್ವಾರ್ಥ ಹಾಗೂ ದುರಾಸೆಯಿಂದ ವ್ಯವಸ್ಥೆ ಹದಗೆಡುತ್ತಿದ್ದು, ಇಡೀ ಜೀವಸಂಕುಲ ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಯುವಜನತೆ ಸಾಮಾಜಿಕ ಸಮಸ್ಯೆಗಳ ಪರಿಹಾರದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಬೇಕೆಂದು ಸಲಹೆ ನೀಡಿದರು.

ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಕೆಯು ಓದು ಮತ್ತು ವಿಷಯ ಗ್ರಹಿಕೆ ಸೂಚಿಸುತ್ತದೆ. ಆದರೆ, ಉತ್ತಮ ಕೆಲಸಕ್ಕೆ ಇದೊಂದೇ ಸಾಲದು. ಓದಿನ ಜತೆಗೆ ನಿರ್ವಹಣೆ ಸಾಮರ್ಥ್ಯ ಮತ್ತು ಕೌಶಲ ಹೊಂದಿರಬೇಕೆಂದು ಎಸ್​ಜೆಸಿಐಟಿ ಕಾಲೇಜಿನ ಪ್ರಾಚಾರ್ಯ ರವಿಕುಮಾರ್ ಹೇಳಿದರು.ವಿಜ್ಞಾನಿ ರಘೊತ್ತಮ್ ರಾವ್ ಮಾತನಾಡಿ, ಆಧುನಿಕ ವಿಜ್ಞಾನದ ಅವಿಷ್ಕಾರಗಳಿಂದ ಜಗತ್ತು ಚಿಕ್ಕದಾಗುತ್ತಿದೆ. ತ್ವರಿತ ಮಾಹಿತಿ ಸಂಗ್ರಹ, ಸರಳೀಕರಣದ ಕಾರ್ಯನಿರ್ವಹಣೆ, ಸುಲಭ ಪರಿಹಾರ ಸೇರಿ ಹೆಚ್ಚಿನ ಅನುಕೂಲಗಳಾಗುತ್ತಿವೆ ಎಂದರು.

ವಿಜ್ಞಾನಿ ವಿ.ಶುಭಾ, ರಾಜ್ಯ ತಂತ್ರಜ್ಞಾನ ಅಕಾಡೆಮಿ ಕಾರ್ಯದರ್ಶಿ ಎಸ್.ಜಿ.ಶ್ರೀಕಂಠೇಶ್ವರಸ್ವಾಮಿ, ನ್ಯಾಷನಲ್ ರಿಮೋಟ್ ಸೆಕ್ಯುರಿಟಿ ಏಜೆನ್ಸಿ ನಿವೃತ್ತ ನಿರ್ದೇಶಕ ಎ.ಎಸ್.ಮಂಜುನಾಥ್, ಇಂಜಿನಿಯರಿಂಗ್ ಮೆಟಿರಿಯಲ್ಸ್ ವ್ಯವಸ್ಥಾಪಕ ನಿರ್ದೇಶಕಿ ಸುಜಾತಾ ಹರೀಶ್, ಆರ್ಥಿಕ ಅಧಿಕಾರಿ ಹರೀಶ್, ಬಿಜಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಶಿವರಾಮರೆಡ್ಡಿ, ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ.ಜಿ.ವಿ.ಜ್ಞಾನೇಂದ್ರರೆಡ್ಡಿ ಮತ್ತಿತರರಿದ್ದರು.

ವೈಜ್ಞಾನಿಕ ಮಾದರಿ ಪ್ರದರ್ಶನ: ವಿಟಿಯು ಕಾಲೇಜು ವ್ಯಾಪ್ತಿಯ ವಿದ್ಯಾರ್ಥಿಗಳು 110ಕ್ಕೂ ವೈಜ್ಞಾನಿಕ ನಾನಾ ಮಾದರಿ ಪ್ರದರ್ಶಿಸಿ ಗಮನಸೆಳೆದರು. ಸೋಲಾರ್ ವಿದ್ಯುತ್ ಬಳಕೆ, ಜೈವಿಕ ತಂತ್ರಜ್ಞಾನ ಅನುಕೂಲ, ಆಧುನಿಕ ಯಂತ್ರೋಪಕರಣ ಮತ್ತು ನಿರ್ವಹಣೆ ಸೇರಿ ವೈಜ್ಞಾನಿಕ ಮಾದರಿಗಳ ಕುರಿತು ವೀಕ್ಷಕರಿಗೆ ವಿವರಿಸಿದರು.