ಭಾಲ್ಕಿ: ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆಯಲ್ಲಿಯೇ ದೇಶದ ಅಭಿವೃದ್ಧಿ ಅಡಗಿದೆ ಎಂದು ಭಾರತ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಿಸಿದ್ದಪ್ಪ ಜಲಾದೆ ಹೇಳಿದರು.
ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ, ಭಾರತ ವಿಕಾಸ ಸಂಗಂ, ವಿಕಾಸ ಅಕಾಡೆಮಿ ಕಲಬುರಗಿ ವತಿಯಿಂದ ೨೮ ರಿಂದ ಫೆ.೬ ವರೆಗೆ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವ-೭, ಕೊತ್ತಲ ಸ್ವರ್ಣ ಜಯಂತಿ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕುದ್ರೋಳಿ ಗಣೇಶ ಜಾಗೃತಿ ಜಾದೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಜನರು ಮೂಢನಂಬಿಕೆ, ಅವೈಜ್ಞಾನಿಕ ತತ್ವಗಳ ಆಚರಣೆಗಳಿಂದ ಹಿಂದೆ ಬೀಳುತ್ತಿದ್ದಾರೆ. ಸದಾ ವೈಜ್ಞಾನಿಕ ಚಿಂತನೆಯಿಂದ ಮುನ್ನಡೆಯಬೇಕು ಅಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕೊತ್ತಲ ಬಸವೇಶ್ವರ ಬಾರತೀಯ ಶಿಕ್ಷಣ ಸಂಸ್ಥೆಯು ಜನರನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಇದರ ಅಂಗವಾಗಿ ಭಾರತೀಯ ಸಂಸ್ಕೃತಿ ಉತ್ಸವ ನಡೆಸಲಾಗುತ್ತಿದೆ. ಈ ಉತ್ಸವದಲ್ಲಿ ಸುಮಾರು ೧೦ ಲಕ್ಷ ಜನ ಭಾಗಿಯಾಗುವ ಸಂಭವವಿದೆ ಎಂದು ಹೇಳಿದರು.
ವಿಕಾಸ ಅಕಾಡೆಮಿ ತಾಲೂಕು ಅಧ್ಯಕ್ಷ ಅಕ್ಷಯಕುಮಾರ ಮುದ್ದಾ ಪ್ರಾಸ್ತಾವಿಕ ಮಾತನಾಡಿದರು.
ಮಂಗಳೂರಿನ ಕುದ್ರೋಳಿ ಗಣೇಶ ತಮ್ಮ ಜಾದೂ ಮೂಲಕ ವಿದ್ಯಾರ್ಥಿ ಮತ್ತು ಸಭಿಕರನ್ನು ಮಂತ್ರಮುಗ್ದರನ್ನಾಗಿಸಿದರು.
ರೋಟರಿ ಕ್ಲಬ್ ಸಂಸ್ಥಾಪಕ ಅಮಿತ ಅಷ್ಟೂರೆ ಕಾರ್ಯಕ್ರಮ ಉದ್ಘಾಟಿಸಿದರು. ಸದ್ಗುರು ವಿದ್ಯಾಲಯದ ಸಂಸ್ಥಾಪಕ ಸೋಮನಾಥ ಮುದ್ದಾ ವಿಶೇಷ ಉಪನ್ಯಾಸ ನೀಡಿದರು. ರೋಟರಿ ಕ್ಲಬ್ ಆಫ್ ಭಾಲ್ಕಿ ಫೋಟ್ ಅಧ್ಯಕ್ಷ ಸಂಜೀವಕುಮಾರ ಪಂಡರಗೀರೆ, ಉದ್ಯಮಿ ಚನ್ನಬಸವಣ್ಣ ಬಳತೆ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ, ವಿಕಾಸ ಅಕಾಡೆಮಿಯ ಪ್ರಮುಖ ರೇವಣಸಿದ್ಧ ಜಾಡರ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಸೋಮನಾಥಪ್ಪ ಅಷ್ಟೂರೆ, ಶಿವರಾಜ ಮಲ್ಲೇಶಿ ಇತರರಿದ್ದರು.
ಪ್ರಭುಲಿಂಗ ಪಾಟೀಲ ಸ್ವಾಗತಿಸಿದರು. ಅಭಿಷೇಕ ನಿರೂಪಣೆ ಮಾಡಿದರು. ಸಂಗಮೇಶ ವಂದಿಸಿದರು.