ಬೇಲೂರು: ಪೂರ್ಣಚಂದ್ರ ತೇಜಸ್ವಿ ಅವರು ಕೇವಲ ಸಾಹಿತಿಯಾಗಿರದೆ ವೈಜ್ಞಾನಿಕ ಚಿಂತನೆಗಳೊಂದಿಗೆ ಪರಿಸರ ಪ್ರೇಮಿಯಾಗಿ, ನಿಸರ್ಗದೊಂದಿಗೆ ಜೀವಿಸುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಎಂದು ವಿದ್ಯಾವಿಕಾಸ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಂ.ರಮೇಶ್ ಬಣ್ಣಿಸಿದರು.
ಸಾಹಿತಿ, ಪರಿಸರ ಪ್ರೇಮಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೇಲೂರು ಪಟ್ಟಣದ ವಿದ್ಯಾವಿಕಾಸ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪರಿಸರ ನಮಗೇನು ಕೊಟ್ಟಿದೆ ಎಂಬುದಕ್ಕಿಂತ ಪರಿಸರಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತೋರಿಸಿ ಕೊಡುವ ಮೂಲಕ ತಾವೊಬ್ಬ ವಿಶಿಷ್ಟ ವ್ಯಕ್ತಿ ಎಂಬುದನ್ನು ಸಾರಿದ್ದಾರೆ. ಅವರು ಕೇವಲ ಸಾಹಿತಿಯಾಗಿರದೆ, ಪರಿಸರ ಪ್ರೇಮಿಯಾಗಿ, ಪಕ್ಷಿಗಳ ತಜ್ಞನಾಗಿ, ಛಾಯಾಗ್ರಾಹಕರಾಗಿ, ಸಮಾಜವಾದಿ ಚಿಂತನೆಗಳೊಂದಿಗೆ ವೈಜ್ಞಾನಿಕ ಮನೋಭಾವ ಅಳವಡಿಸಿಕೊಂಡು ತಮ್ಮ ಬರಹಗಳಲ್ಲಿಯೂ ವೈಜ್ಞಾನಿಕ ಚಿಂತನೆಗಳನ್ನು ತುಂಬಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಅವರು ತಮ್ಮ ಜೀವನವನ್ನು ಸಂಪೂರ್ಣವಾಗಿ ನಿಸರ್ಗದ ಮಡಿಲಲ್ಲೆ ಕಳೆದಿದ್ದು ವಿಶೇಷವಾಗಿತ್ತು. ಅವರಂತೆ ವಿದ್ಯಾರ್ಥಿಗಳು ಸಹ ಬದುಕಿ ಸಾಧಿಸಬೇಕು ಎಂದರು.
ಸಾಹಿತಿ ಹಾಗೂ ಸಂಶೋಧಕ ಶ್ರೀವತ್ಸ.ಎಸ್.ವಟಿ ಮಾತನಾಡಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ತಂದೆ ಕುವೆಂಪು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದಲ್ಲದೆ ತಮ್ಮದೆ ಆದ ರೀತಿ ರಿವಾಜುಗಳನ್ನು ಹೊಂದಿದ್ದರು. ಅವರು ಯೋಚಿಸಿದ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗುತ್ತಿದ್ದರು. ಪರಿಸರಕ್ಕೆ ಹೆಚ್ಚು ಒತ್ತು ಕೊಡುವುದರ ಜೊತೆಗೆ ಸ್ವತಃ ಸಾಹಿತಿಗಳಾಗಿ ಉತ್ತಮ ಪುಸ್ತಕಗಳನ್ನು ಬರೆದಿದ್ದಾರೆ. ಅವರು ವಿವಾಹದ ಸೂತ್ರ ಕಂಡು ಹಿಡಿದು ಮಂತ್ರ ಮಾಂಗಲ್ಯದಂತೆ ವಿವಾಹವಾದರು. ಪರಿಸರವನ್ನು ಬಿಡಿಬಿಡಿಯಾಗಿ ವರ್ಣನೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇಂದಿನ ಯುವ ಪೀಳಿಗೆ ತೇಜಸ್ವಿ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಕಸಾಪ ಅಧ್ಯಕ್ಷ ರಾಜೇಗೌಡ, ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಕರವೇ ತಾಲೂಕು ಅಧ್ಯಕ್ಷ ಭೋಜೇಗೌಡ, ಶಿಕ್ಷಕಿ ಹಾಗೂ ಸಾಹಿತಿ ಮಧು ಮಾಲತಿ, ಕಸಾಪದ ಕುಮಾರಸ್ವಾಮಿ, ಮಾ.ಶಿವಮೂರ್ತಿ, ನಿವೃತ್ತ ಶಿಕ್ಷಕ ತಮ್ಮಣ್ಣಗೌಡ ಇದ್ದರು.