ವೈಜ್ಞಾನಿಕ ಕ್ರಿಯಾಯೋಜನೆ ಅಳವಡಿಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹೈದರಾಬಾದ್ ಕರ್ನಾಟಕ ಪ್ರದೇಶದ ಜ್ವಲಂತ ಸಮಸ್ಯೆಗಳ ಶಾಶ್ವತ ನಿವಾರಣೆಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವೈಜ್ಞಾನಿಕ ಕ್ರಿಯಾಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಪದಾಧಿಕಾರಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ಹೈಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಕುರಿತಂತೆ ಸಾರ್ವಜನಿಕ ಅಭಿಪ್ರಾಯದ ಅನುಸಾರ ವಿಷಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧಪಡಿಸಿ, ಅದನ್ನು ರಾಜಕೀಯ ಪಕ್ಷಗಳು ಅನುಷ್ಠಾನ ತರುವಂತೆ ಒತ್ತಾಯಿಸಲು ನಗರದ ಗೋಲ್ಡ್ ಹಬ್ ಸಮೀಪದ ಅಂಜುಮನ್ ಉರ್ದು ಎ ಹಿಂದ್ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು, ಪ್ರಣಾಳಿಕೆ ರಚನೆಯ ಜವಾಬ್ದಾರಿಯನ್ನು ಹೈಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರಿಗೆ ಸರ್ವಾನುಮತದಿಂದ ಒಪ್ಪಿಸಲಾಯಿತು.

ದಸ್ತಿ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಣಾಳಿಕೆ ಸಿದ್ಧತಾ ಸಮಾಲೋಚನಾ ಸಭೆಯಲ್ಲಿ ಅಮ್ಜದ್ ಜಾವೀದ್, ಮನೀಷ್ ಜಾಜು, ಡಾ.ಮಜೀದ ದಾಗಿ, ಶಿವಲಿಂಗಪ್ಪ ಬಂಡಕ, ವಿಜಯಕುಮಾರ ಪಾಟೀಲ ರಾಯಚೂರ, ಜ್ಞಾನಮಿತ್ರ ಶಾಮ್ಯುಲ್ ವಿಷಯ ಪ್ರಸ್ತಾಪನೆ ಮಾಡಿದರು.

ಸಮಿತಿ ಸದಸ್ಯರಾದ ಎಚ್.ಎಂ.ಹಾಜಿ, ವಿರೇಶ ಪುರಾಣಿಕ, ಶಿವಕುಮಾರ ಬಿರಾದಾರ, ವಿಶಾಲದೇವ ಧನ್ನೆಕರ, ಅಸ್ಲಾಂ ಚೌಂಗೆ, ಅಬ್ದುಲ್ ರಹೀಮ್, ಆಕಾಶ ರಾಠೋಡ, ಗುರುರಾಜ ಬಂಡಾರಿ, ಮುನ್ನಿಬೇಗಂ, ಅನ್ನಪೂರ್ಣ, ಸಾಲುಮನ ದಿವಾಕರ, ಅಶೋಕ ಜಾಧವ, ಬಾಬುರಾವ ಗಂವ್ಹಾರ, ಮಹ್ಮದ್ ಅಯ್ಯೂಬ್, ಬಾಬಾ ಫಕ್ರೋದ್ದಿನ್, ಮಲ್ಲಿನಾಥ ಸಂಗಶೆಟ್ಟಿ, ಮಯ್ಯೊದ್ದಿನ್, ಮಕಬೂಲ್ ಪಟೇಲ್, ಸಂಧ್ಯಾರಾಜ, ಡೊನಾಲ್ಡ್ ದಯಾನಂದ, ಮಹ್ಮದ್ ಸಿರಾಜುದ್ದಿನ್, ಉಮೇಶ ಜಾಧವ, ಮೋಹನ, ನೂರಾರು ಜನರು ಭಾಗವಹಿಸಿದ್ದರು.

ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆ

ಹೈಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಲಹೆ ನೀಡಲು ಡಾ.ನಂಜುಂಡಪ್ಪ ಸಮಿತಿ ರಚಿಸಲಾಯಿತು. ನಂತರ ಎಚ್ಕೆಆರ್ಡಿ ಅಸ್ತಿತ್ವಕ್ಕೆ ತರಲಾಯಿತು. ಕೊನೆಗೆ 371ಜೆ ವಿಧಿ ಜಾರಿಗೊಳಿಸಲಾಯಿತು. ಇಷ್ಟಾದರೂ ಹೈಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಯಾಗಲಿಲ್ಲ. ಈ ಪ್ರದೇಶದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಇನ್ನು ಮುಂದಾದರೂ ಈ ಲೋಕಸಭೆ ಚುನಾವಣೆ ನಂತರ 5 ವರ್ಷಗಳ ಕಾಲಮಿತಿಯಲ್ಲಿ ಎಲ್ಲ ಕೆಲಸಕಾರ್ಯಗಳು ಸಂಪೂರ್ಣಗೊಳಿಸುವ ಜವಾಬ್ದಾರಿ ಪಕ್ಷಗಳು ಹೊರಬೇಕು. ವಿವಿಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿ ಮಾಡಬೇಕು. ರೈಲ್ವೆ ವಿಭಾಗ, ವಿಮಾನ ನಿಲ್ದಾಣ ಇತರೆ ಕೆಲಸಗಳನ್ನು ಸಂಪೂರ್ಣಗೊಳಿಸಬೇಕು. ಇದಕ್ಕಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಮುಂದಿನ ಚುನಾವಣೆ ಬರುವುದರೊಳಗೆ ಅನುಷ್ಠಾನ ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಎಚ್ಕೆಆರ್ಡಿ ಹೆಸರೇ ಈ ಭಾಗ ಹಿಂದುಳಿದಿರುವುದರ ಸಂಕೇತ. ಆದಷ್ಟು ಬೇಗ, ಕಾಲಮಿತಿಯೊಳಗೆ ಸರ್ವಾಂಗೀಣ ಅಭಿವೃದ್ಧಿಗೊಳಿಸಿ, ಹಣೆ ಪಟ್ಟಿ ಕಳಚಬೇಕು ಎಂದು ನಿರ್ಧರಿಸಲಾಯಿತು.