ವೈಜಿ ಗುಡ್ಡ ಜಲಾಶಯಕ್ಕೆ ಕಾವೇರಿ

ಮಾಗಡಿ: ರಾಮನಗರ ಜಿಲ್ಲೆಯಲ್ಲಿ ನೀರಿನ ಬವಣೆ ತೋರದಂತೆ 500 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನದಿಯಿಂದ ಚನ್ನಪಟ್ಟಣದ ಕಣ್ವ ನದಿ ಮೂಲಕ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯಕ್ಕೆ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಈಗಾಗಲೇ ಟೆಂಡರ್ ಕರೆದಿದ್ದು, 3 ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಇಂದಿರಾ ಕ್ಯಾಂಟೀನ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಎತ್ತಿನಹೊಳೆ ಮೂಲಕ 3ನೇ ಹಂತದ ಯೋಜನೆಯಲ್ಲಿ ತಿಪ್ಪ ಗೊಂಡನಹಳ್ಳಿ ಜಲಾಶಯದಿಂದ ಮಂಚನಬೆಲೆ ಜಲಾಶಯಕ್ಕೆ ನೀರು ತರುವ ಕೆಲಸ ಮಾಡಲಾಗುತ್ತಿದೆ. ಹೇಮಾವತಿ ಕಾಮಗಾರಿ ಪ್ರಗತಿಯಲ್ಲಿದೆ. 260 ಕಿ.ಮೀ. ಪೈಪ್​ಲೈನ್ ಕಾಮಗಾರಿ ರೂಪುರೇಷೆ ಬದಲಾಗಿದ್ದು, ರಸ್ತೆ ಪಕ್ಕದಲ್ಲೇ ಅಳವಡಿಸಲಾಗುವುದು. ಶೀಘ್ರ ಕುಣಿಗಲ್ ಹಾಗೂ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಲಾಗುತ್ತದೆ ಎಂದು ತಿಳಿಸಿದರು.

ರಾಮನಗರಕ್ಕೆ ಹರಿಯಲ್ಲ ಹೇಮೆ: ಯಾವುದೇ ಕಾರಣಕ್ಕೂ ರಾಮನಗರಕ್ಕೆ ಹೇಮಾವತಿ ನೀರು ಹರಿಸುವುದಿಲ್ಲ. ಮಾಗಡಿಗೆ ಮಾತ್ರ ಸೀಮಿತವಾಗಿದ್ದು, ಇದಕ್ಕೂ ಪ್ರತಿಭಟಿಸಿದರೆ ನೀರು ಕೊಡಿಸುವ ನಿಟ್ಟಿನಲ್ಲಿ ಮಾಗಡಿ ಜನತೆಯೊಂದಿಗೆ ಪ್ರತಿಭಟಿಸಬೇಕಾದೀತು ಎಂದು ತಿಳಿಸಿದರು.

ಶಾಸಕ ಎ.ಮಂಜುನಾಥ್ ಮಾತನಾಡಿ, ಮಾಗಡಿ ಯೋಜನಾ ಪ್ರಾಧಿಕಾರ ಹಾಗೂ ಸಂಸದರ ಅನುದಾನದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಸುಸಜ್ಜಿತ ವಿದ್ಯುತ್ ಚಿತಾಗಾರ ನಿರ್ವಣವಾಗುತ್ತಿದೆ. ಜತೆಗೆ 30 ಲಕ್ಷ ರೂ. ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ವಣವಾಗುತ್ತಿದ್ದು, ಟೊಯೋಟಾ ವತಿಯಿಂದ ಡಿಜಿಟಲ್ ಉಪಕರಣ ಕೊಡಿಸಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಮಾಗಡಿ ಮತ್ತು ಕುದೂರಿನಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಯುಜಿ ಕೇಬಲ್, ಎಲ್​ಇಡಿ ದೀಪ ಅಳವಡಿಸಲಾಗುವುದು. ಸ್ಲಂ ಬೋರ್ಡ್​ನಿಂದ 500 ಮನೆ ನಿರ್ವಣ, ಹೈಟೆಕ್ ಮಾರುಕಟ್ಟೆ, ಈಜುಕೊಳ, ಆಡಿಟೋರಿಯಂ ನಿರ್ಮಾಣ ಆಗಲಿದೆ. ಬಡವರ ಬಂಧು ಯೋಜನೆಯ ಫಲಾನುಭವಿಗಳನ್ನು ಪುರಸಭೆ ಅಧಿಕಾರಿಗಳು ಗುರುತಿಸಬೇಕೆಂದು ಮಂಜುನಾಥ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಪುರಸಭೆ ಅಧ್ಯಕ್ಷ ಎಚ್.ಆರ್.ಮಂಜುನಾಥ್, ಉಪಾಧ್ಯಕ್ಷ ನಾಗೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್, ಸದಸ್ಯರಾದ ಎಂ.ಎನ್.ಮಂಜು, ಕೆ.ವಿ.ಬಾಲು, ಮಹೇಶ್, ಮಹದೇವ್, ಗುರು, ರಘು, ಬಸವರಾಜು, ಮುಖ್ಯಾಧಿಕಾರಿ ನಟರಾಜು, ಜಿಪಂ ಸದಸ್ಯೆ ದಿವ್ಯಾ ಗಂಗಾಧರ್, ಕಸಾಪ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಮುಖಂಡರಾದ ಪೊಲೀಸ್ ರಾಮಣ್ಣ, ಗುಡ್ಡೇಗೌಡ, ಕಲ್ಕಕೆರೆ ಶಿವಣ್ಣ, ನರಸಿಂಹಮೂರ್ತಿ, ಡೂಂ ಲೈಟ್ ಅನಿಲ್, ಐಯ್ಯಂಡಹಳ್ಳಿ ರಂಗಸ್ವಾಮಿ, ದಂಡಿಗೆಪುರ ಕುಮಾರ್, ಚಿಗಳೂರು ಗಂಗಾಧರ್, ಗ್ರಂಥಾಲಯ ಜಿಲ್ಲಾ ನಿರ್ದೇಶಕರಾದ ಡಾ.ಸತೀಶ್ ಹೊಸಮುನಿ, ಇನಾಯಿತ್, ಬಿಇಒ ರಂಗಸ್ವಾಮಿ ಮತ್ತಿತರು ಇದ್ದರು.

ಶಂಕುಸ್ಥಾಪನೆಗೊಂಡ ಕಾಮಗಾರಿಗಳು: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕಟ್ಟಡ ನಿರ್ವಣ, 3 ಕೋಟಿ ರೂ. ವೆಚ್ಚದಲ್ಲಿ ತಟವಾಳ ಮುಖ್ಯರಸ್ತೆಯಲ್ಲಿರುವ ಹಿಂದು ರುದ್ರಭೂಮಿಯಲ್ಲಿ ವಿದ್ಯುತ್ ಚಿತಾಗಾರ, ಹಳೇ ಬಸ್ ನಿಲ್ದಾಣದ ಹತ್ತಿರ 10 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಗೃಹ, 30 ಲಕ್ಷ ರೂ. ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು

ಇಂದಿರಾ ಕ್ಯಾಟಿನ್​ನಲ್ಲಿ ಉತ್ತಮ ಊಟದ ವ್ಯವಸ್ಥೆ ಮಾಡಲಾಗಿದ್ದು ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ, ರಾತ್ರಿ ಊಟಕ್ಕೆ ಸಾರ್ವಜನಿಕರು 25 ರೂಪಾಯಿ ನೀಡಿದರೆ ಸರ್ಕಾರದ ವತಿಯಿಂದ ಇಂದಿರಾ ಕ್ಯಾಂಟಿನ್​ಗೆ 25 ರೂ. ಕೊಡುತ್ತಾರೆ, ಒಟ್ಟು 50 ರೂಪಾಯಿನಲ್ಲಿ ಒಂದು ದಿನದ ಊಟ ಸಿಗಲಿದೆ. ಪುರಸಭೆ ಅಧಿಕಾರಿಗಳು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.

| ಡಿ.ಕೆ.ಸುರೇಶ್ ಸಂಸದ

Leave a Reply

Your email address will not be published. Required fields are marked *