ವೇಮನರ ಆದರ್ಶ ಜೀವನ ತ್ಯಾಗದ ಸಂಕೇತ

ಚಿಕ್ಕಬಳ್ಳಾಪುರ : ಮಹಾಯೋಗಿ ವೇಮನರ ಆದರ್ಶ ಜೀವನ ತ್ಯಾಗದ ಸಂಕೇತ ಎಂದು ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಎಂ.ಎನ್.ರಘು ಬಣ್ಣಿಸಿದರು.

ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಮಹಾಯೋಗಿ ವೇಮನ ಶ್ರೇಷ್ಠ ದಾರ್ಶನಿಕ. ರಾಜ ಕುಟುಂಬದಲ್ಲಿ ಜನಿಸಿದರೂ ವೈಭೋಗದ ಜೀವನ ತ್ಯಾಗ ಮಾಡಿ ಸಮಾಜದ ಸುಧಾರಣೆಯಲ್ಲಿ ತೊಡಗಿಸಿಕೊಂಡರು. ಅಸ್ಪೃಶ್ಯತೆ, ಜಾತಿ ಪದ್ಧತಿ, ಅಸಮಾನತೆ ವಿರೋಧಿಸಿದರು. ಅವರ ಆತ್ಮ, ಮನಸ್ಸು, ಆಚಾರ ವಿಚಾರ, ಕಾಯಕ ಮತ್ತು ನಿಷ್ಠತೆಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅನಾಗರಿಕತೆ, ಅಸತ್ಯ, ಅಧರ್ಮ ಹೆಚ್ಚಾದಾಗ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಲು ಜ್ಞಾನಿಗಳು ಬರುತ್ತಾರೆ. ಇದಕ್ಕೆ ವೇಮನ ಒಂದು ನಿದರ್ಶನ ಎಂದು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಚೇತನಾ, ನಂದಿನಿ, ನಿಹಾರಿಕಾ, ಮಂಜುಳಾ, ಎಸ್.ಸ್ವಾತಿ ಅವರಿಗೆ ಪುರಸ್ಕಾರ ನೀಡಲಾಯಿತು. ತಾಪಂ ಅಧ್ಯಕ್ಷ ರಾಮಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ತಹಸೀಲ್ದಾರ್ ಕೆ.ನರಸಿಂಹಮೂರ್ತಿ, ಪೌರಾಯುಕ್ತ ಉಮಾಕಾಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ ಮತ್ತಿತರರಿದ್ದರು.