ವೇತನ ಬಡ್ತಿಯಲ್ಲಿನ ಲೋಪ ಸರಿಪಡಿಸಿ

ರಾಮನಗರ: ವೇತನ ಬಡ್ತಿಯಲ್ಲಿನ ಲೋಪಗಳನ್ನು ಸರಿಪಡಿಸಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಮನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮೂಲಕ ಶನಿವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಸಿ.ರಾಜಶೇಖರ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಆರ್.ಪ್ರಶಾಂತ್​ಗೆ ಮನವಿ ಸಲ್ಲಿಸಲಾಯಿತು.

ಸಿ.ರಾಜಶೇಖರ್ ಮಾತನಾಡಿ, ಪ್ರೌಢಾಶಾಲಾ ಸಹ ಶಿಕ್ಷಕರ ವೇತನ ತಾರತಮ್ಯ ನಿವಾರಣೆಗಾಗಿ ಕುಮಾರ ನಾಯಕ್ ವರದಿ ಆಧಾರದಲ್ಲಿ 2016ರ ಜೂ. 1ರಿಂದ ಅನ್ವಯವಾಗುವಂತೆ ನೀಡಲಾಗಿದ್ದ ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನ ಎಂದು ಪರಿಗಣಿಸಿ ಹಿಂಬಾಗಿಲ ಮೂಲಕ ಸವಲತ್ತು ಕಡಿತಗೊಳಿಸುತ್ತಿರುವುದನ್ನು ಕೈ ಬಿಡಬೇಕು. 2008, ಆ. 1ರ ನಂತರ ಪ್ರಾಥಮಿಕ ಶಾಲೆಯಿಂದ ಮುಂಬಡ್ತಿ ಹಾಗೂ ನೇರ ನೇಮಕಾತಿಯ ಮೂಲಕ ಆಯ್ಕೆಯಾಗಿ ಪ್ರೌಢಶಾಲೆ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ 400 ರೂ. ವಿಶೇಷ ಭತ್ಯೆ ಮಂಜೂರು ಮಾಡಬೇಕು. ಜತೆಗೆ 6ನೇ ವೇತನ ಆಯೋಗದ ಶಿಫಾರಸಿನಂತೆ 2018ರ ಏಪ್ರಿಲ್​ನಿಂದ ವಿಶೇಷ ವಾರ್ಷಿಕ ಬಡ್ತಿ ಮಂಜೂರು ಮಾಡಬೇಕು. ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ತರಗತಿಗಳ ವಿದ್ಯಾರ್ಥಿ-ಶಿಕ್ಷಕರ ಅನುಪಾತವನ್ನು 70:1ರ ಬದಲಾಗಿ 50:1ಕ್ಕೆ ನಿಗದಿಪಡಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬೇಕು ಎಂದರು.

ಅನುದಾನಿತ ಶಾಲಾ ಶಿಕ್ಷಕರ ಕಾಲ್ಪನಿಕ ವೇತನಕ್ಕೆ ಸಂಬಂಧಿಸಿದಂತೆ ರಚನೆಗೊಂಡಿರುವ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಪ್ರೌಢಶಾಲಾ ಸಹ ಶಿಕ್ಷಕರಿಂದ ಮುಖ್ಯಶಿಕ್ಷಕರ ಹುದ್ದೆಗಳಿಗೆ ಬೆಂಗಳೂರು, ಗುಲ್ಬರ್ಗಾ, ಧಾರವಾಡ ಆಯುಕ್ತಾಲಯಗಳಲ್ಲಿ ಕೂಡಲೇ ಮುಂಬಡ್ತಿ ನೀಡಬೇಕು. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಿ, ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಖಜಾಂಚಿ ಎ.ಎನ್.ಜಗದೀಶ್, ಕಾರ್ಯದರ್ಶಿ ಎಂ.ಎನ್.ದೇವರಾಜು, ಉಪಾಧ್ಯಕ್ಷ ರುದ್ರೇಶಯ್ಯ, ಸಂಘಟನಾ ಕಾರ್ಯದರ್ಶಿ ಭಾಸ್ಕರ್ ರಾವ್, ಸಹ ಕಾರ್ಯದರ್ಶಿ ರುದ್ರಸ್ವಾಮಿ, ರಾಜ್ಯ ಪದಾಧಿಕಾರಿ ಟಿ.ಸಿ.ಕೆ.ರಾಜು, ಚನ್ನಪಟ್ಟಣ ಅಧ್ಯಕ್ಷ ಟಿ.ಆರ್.ರಂಗಸ್ವಾಮಿ, ಕನಕಪುರ ಅಧ್ಯಕ್ಷ ಆರ್.ವಿ.ನಾರಾಯಣ್, ರಾಮನಗರ ಅಧ್ಯಕ್ಷ ಎಸ್.ಬಿ.ಬಸವರಾಜು, ಮಾಗಡಿ ಅಧ್ಯಕ್ಷ ಟಿ.ವೆಂಕಟೇಶ್, ತಾಲೂಕು ಕಾರ್ಯದರ್ಶಿಗಳಾದ ಟಿ.ಸ್ವಾಮಿ, ವೆಂಕಟೇಶ್​ವುೂರ್ತಿ, ವಿಜಯ್ಕುಮಾರ್, ಎಂ.ಗಂಗಮಾರಯ್ಯ ಮುಂತಾದವರು ಇದ್ದರು.

ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಕರಾಗಿ ಹಿಂದಿನ ನಿಯಮದಂತೆ ಶೇ.50:50 ಅನುಪಾತದಲ್ಲಿ ನಿಬಂಧನೆಗಳಿಗೆ ಒಳಪಡಿಸದೇ ಮುಂಬಡ್ತಿ ನೀಡಬೇಕು. ರಜಾ ಅವಧಿಯಲ್ಲಿ ತರಗತಿ, ಗಣತಿ ಕಾರ್ಯ, ಬೋಧಕೇತರ ಕರ್ತವ್ಯಗಳಿಗೆ ಶಿಕ್ಷಕರನ್ನು ನಿಯೋಜಿಸುವುದನ್ನು ರದ್ದುಗೊಳಿಸಬೇಕು. ಪ್ರೌಢಶಾಲಾ ಸಹ ಶಿಕ್ಷಕರನ್ನು ರಜಾ ರಹಿತ ಶಿಕ್ಷಕರೆಂದು ಪರಿಗಣಿಸಬೇಕು. ಶಿಕ್ಷಕರಿಗೆ ನೀಡುತ್ತಿರುವ ಬೋಧಕೇತರ ಕಾರ್ಯಗಳನ್ನು ರದ್ದುಪಡಿಸಿ, ಹೊರಗುತ್ತಿಗೆ ಆಧಾರದ ಮೇಲೆ ಬೋಧಕೇತರ ಸಿಬ್ಬಂದಿಯನ್ನು ನೇಮಿಸಬೇಕು

|ಸಿ.ರಾಜಶೇಖರ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ