ಶಿರಸಿ: ಮಹಾಮಾರಿ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದ ತಿರುಪತಿ ಖ್ಯಾತಿಯ ತಾಲೂಕಿನ ಮಂಜುಗುಣಿ ವೆಂಕಟರಮಣ ದೇವಸ್ಥಾನದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಏ. 2ರಿಂದ 9ರವರೆಗೆ ನಡೆಯಲಿದ್ದ ದೇವರ ರಥೋತ್ಸವ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ಕರೊನಾ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಭಕ್ತರಿಗೆ ಈಗಾಗಲೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ ಹಾಗೂ ಸೇವೆಗಳಿಗೆ ಅವಕಾಶವಿರುವದಿಲ್ಲ. ನಿತ್ಯ ನಡೆಸಲಾಗುತ್ತಿದ್ದ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನೂ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಏ. 2ರಿಂದ ಆರಂಭಗೊಂಡು 9ರವರೆಗೆ ನಡೆಯಲಿದ್ದ ರಥೋತ್ಸವ ಕಾರ್ಯಕ್ರಮಗಳನ್ನು ಮುಂದೂಡಿರುವ ಪರಿಣಾಮ ಏ. 8ರ ಬ್ರಹ್ಮರಥೋತ್ಸವ ವೇಳೆಗೆ ಹರಕೆ ರೂಪದಲ್ಲಿ ಭಕ್ತರು ಸಲ್ಲಿಸುತ್ತಿದ್ದ ಸೇವೆಗಳಾದ ಮಹಾರಥಕ್ಕೆ ಸಲ್ಲಿಸುವ ಕಾಯಿ, ಕಬ್ಬು, ಅಡಕೆ ಕೊನೆಗಳು, ತರಕಾರಿ ಹಾಗೂ ನಾರಾಯಣ ಭೂತರಾಜನಿಗೆ ನೀಡುತ್ತಿದ್ದ ಕಾಯಿ, ರಥಾರೂಢ ವೆಂಕಟರಮಣ ದೇವರ ಪಾದದಡಿಯಲ್ಲಿ ಶಿಶುಗಳನ್ನು ಮಲಗಿಸುವುದು, ದೇವಸ್ಥಾನಕ್ಕೆ ಸಮರ್ಪಿಸುವ ರಥಗಾಣಿಕೆ ಹಾಗೂ ಇತರ ಸೇವೆಗಳಿಗೆ ಕೆಲ ದಿನಗಳ ನಂತರ ಅವಕಾಶ ಮಾಡಿಕೊಡಲಾಗುತ್ತದೆ. ಲೋಕದ ಒಳಿತಿಗಾಗಿ ಭಕ್ತರು ಅನಿವಾರ್ಯ ಸನ್ನಿವೇಶವನ್ನು ಅರ್ಥೈಸಿಕೊಂಡು ಸಹಕರಿಸಬೇಕು. ಸರ್ಕಾರದ ಮುಂದಿನ ಆದೇಶದವರೆಗೂ ಈ ಎಲ್ಲ ನಿಬಂಧನೆಗಳು ಜಾರಿಯಲ್ಲಿರುತ್ತವೆ ಎಂದು ದೇವಸ್ಥಾನದ ಪ್ರಮುಖರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಮುಂಡಗೋಡದಲ್ಲಿ ನಾಳೆ ಸಂತೆ ರದ್ದು
ಮುಂಡಗೋಡ: ಪಟ್ಟಣದ ವಾರದ ಸಂತೆ ಪ್ರತಿ ಸೋಮವಾರ ಜರುಗುತ್ತಿದ್ದು, ಮಾ. 23ರಂದು ಸಂತೆಯನ್ನು ರದ್ದುಗೊಳಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 23ರಂದು ಸಂತೆಯನ್ನು ರದ್ದುಗೊಳಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.