ವೃತ್ತಿ ಯಾವುದೇ ಇರಲಿ, ಬದ್ಧತೆಯಿರಲಿ

ಗದಗ:ಯುವಕರು ದೊಡ್ಡ ದೊಡ್ಡ ಅಧಿಕಾರಿಗಳೇ ಆಗಬೇಕೆಂದಿಲ್ಲ. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ರವಿ ಚನ್ನಣ್ಣವರ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಯುವಜನ ಸಬಲೀಕರಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸ 125ನೇ ವರ್ಷಾಚರಣೆ ಸಮಿತಿ ಸಹಯೋಗದಲ್ಲಿ ಶನಿವಾರ ಜರುಗಿದ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಮೀನು, ಮನೆ, ಕಾರು, ಎಫ್​ಡಿ ನಿಜವಾದ ಆಸ್ತಿಯಲ್ಲ. ಗ್ರಂಥಾಲಯಗಳು, ಉಪನಿಷತ್ತುಗಳು, ಮಹಾನ್ ಸಾಧಕರ ಬದುಕು-ಬರಹ ನಮ್ಮ ನಿಜವಾದ ಆಸ್ತಿಯಾಗಬೇಕು. ಬಲಹೀನನ್ನಾಗಿಸುವ ವಸ್ತುಗಳನ್ನು ದೂರವಿಟ್ಟು, ಗಟ್ಟಿಕೊಳಿಸುವುದನ್ನು ಅಪ್ಪಿಕೊಳ್ಳಬೇಕು. ಅಂದಾಗ ಮಾತ್ರ ಬದುಕನ್ನು ಸಾರ್ಥಕಪಡಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಉನ್ನತ ಸ್ಥಾನಕ್ಕೆ ಹೊರಟವರನ್ನು ಕಾಲೆಳೆಯುವವರು, ಕಿಚಾಯಿಸುವವರು, ಸಂಕಟ ಪಡುವವರು ಇದ್ದೇ ಇರುತ್ತಾರೆ. ಬದುಕನ್ನು ರೂಪಿಸಿಕೊಳ್ಳಲು ಕೆಲ ಮಾನದಂಡಗಳನ್ನು ಹಾಕಿಕೊಳ್ಳಬೇಕು. ಸಾಧಕರ ಬಾಲ್ಯ, ಅವರು ಜಗತ್ತನ್ನು ನೋಡಿದ ಬಗೆ ಹೇಗೆ, ಎದುರಿಸಿದ ಸವಾಲುಗಳು ಯಾವವು ಎಂಬುದನ್ನು ಅರಿತುಕೊಳ್ಳಬೇಕು. ಓದಬೇಕಾಗಿರುವ ಪುಸ್ತಕಗಳನ್ನು ಪಟ್ಟಿ ಮಾಡಿ ಕ್ರಮಾನುಗತವಾಗಿ ಓದಿ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿಸಿಪಿ ರವಿ ಚನ್ನಣ್ಣವರ ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಉದ್ಘಾಟಿಸಿದರು. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಎಚ್.ಕೆ. ಪಾಟೀಲ, ಗಾಂಧಿ ಭವನದ ಉಪಾಧ್ಯಕ್ಷ ಜಿ.ಬಿ. ಶಿವರಾಜು ಮಾತನಾಡಿದರು. ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿಪಂ ಸದಸ್ಯ ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಪಂ ಸಿಇಒ ಮಂಜುನಾಥ ಚವ್ಹಾಣ ಉಪಸ್ಥಿತರಿದ್ದರು.