More

  ವೃತ್ತಿನಿಷ್ಠೆಯಿಂದ ಉತ್ತುಂಗಕ್ಕೆ ಏರಲು ಸಾಧ್ಯ

  ಬಳ್ಳಾರಿ : ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ನಮಗೆಲ್ಲ ದಾರಿದೀಪವಾಗಿದ್ದಾರೆ. ಸವಿತಾ ಸಮುದಾಯ ತಾರತಮ್ಯವಿಲ್ಲದೆ ಎಲ್ಲ ವರ್ಗದ ಜನರಿಗೂ ಸೇವೆ ನೀಡುತ್ತಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತಾ ಹೇಳಿದರು.

  ನಗರದ ಡಾ.ರಾಜಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ-ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಶುಕ್ರವಾರ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಡಿಮೆ ಜನಸಂಖ್ಯೆ ಹೊಂದಿರುವ ಈ ಸಮುದಾಯದವರು ಸಂಘಟಿತರಾದರೆ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯ. ವೃತ್ತಿ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯ. ಸವಿತಾ ಮಹರ್ಷಿ ಅವರ ಆಚಾರ-ವಿಚಾರ ಮೈಗೂಡಿಸಿಕೊಂಡರೆ ಸತ್ಪ್ರಜೆಗಳಾಗಬಹುದು ಎಂದು ತಿಳಿಸಿದರು.

  ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಮಾತನಾಡಿ, ಶಿವನ ಬಲಗಣ್ಣಿನಿಂದ ಜನಿಸಿದವರೇ ಸವಿತಾ ಮಹರ್ಷಿ ಎಂದು ಪ್ರತೀತಿ ಇದೆ. ಸವಿತಾ ಸಮಾಜದವರನ್ನು ಸೂರ್ಯ ವಂಶಕ್ಕೆ ಸೇರಿದವರೆಂದು ಹೇಳಬಹುದು ಎಂದರು. ಕಾರ್ಯಕ್ರಮದಲ್ಲಿ ಕೆ.ಕಲ್ಯಾಣಿ ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು. ಪಾಲಿಕೆಯ ಉಪ ಮೇಯರ್ ಬಿ.ಜಾನಕಿ, ಮಾಜಿ ಮೇಯರ್ ಎಂ.ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಜಿಲ್ಲಾ ಸವಿತಾ ಸಮಾಜ ಸಂಘದ ಅಧ್ಯಕ್ಷ ಸಣ್ಣಗೊಂಡ್ಲ ರಾಕೇಶ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts