ವೀರಶೈವ ಲಿಂಗಾಯತ ಸಮಾಜ ಒಡೆಯುವವರ ಠೇವಣಿ ಜಪ್ತಿ ಮಾಡಿ

ಗದಗ: ವೀರಶೈವ- ಲಿಂಗಾಯತ ಸಮಾವನ್ನು ಒಡೆದು ರಾಜಕೀಯ ಲಾಭ ಮಾಡಿಕೊಳ್ಳಲು ಕೆಲ ರಾಜಕೀಯ ಪಕ್ಷಗಳು ಮುಂದಾಗಿವೆ. ಇಂತಹ ಕುತಂತ್ರಕ್ಕೆ ಸಮಾಜ ಬಾಂಧವರು ಅವಕಾಶ ಮಾಡಿಕೊಡಬಾರದು. ಇಂತಹ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಈಗ ಸಕಾಲವಾಗಿದೆ ಎಂಬ ಒಕ್ಕೊರಲಿನ ಅಭಿಪ್ರಾಯ ನಗರದಲ್ಲಿ ಜರುಗಿದ ಪಂಚಮಸಾಲಿ ಸಮಾಜದ ಸಭೆಯಲ್ಲಿ ವ್ಯಕ್ತವಾಯಿತು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಗುರುವಾರ ಜರುಗಿದ ಪಂಚಮಸಾಲಿ ಸಮಾಜದ ಪ್ರಮುಖರ ಹಾಗೂ ಗಣ್ಯರ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ ಮಂಜುನಾಥ ಕುನ್ನೂರ ಅವರು, ‘ವೀರಶೈವ ಲಿಂಗಾಯತ ಸಮಾಜ ಒಡೆದು, ರಾಜಕೀಯ ಲಾಭ ಮಾಡಿಕೊಳ್ಳಲು ಹೊಂಚು ಹಾಕಿರುವವರಿಗೆ ಪಾಠ ಕಲಿಸಬೇಕು. ಇಂತಹ ಅಭ್ಯರ್ಥಿಯ ಡಿಪಾಜಿಟ್ ಕಳೆಯಬೇಕು’ ಎಂದು ಕರೆ ನೀಡಿದರು.

‘ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಪಾಟೀಲ ಹಾಗೂ ಡಿ.ಆರ್. ಪಾಟೀಲ ಅವರಿಂದಾಗಿ ನನ್ನ ರಾಜಕೀಯ ಜೀವನ ಹಾಳಾಯಿತು. ಏಳ್ಗೆಯನ್ನು ಸಹಿಸದೇ ನನ್ನ ರಾಜಕೀಯ ಬದುಕಿಗೆ ಕೊಡಲಿ ಏಟು ನೀಡಿರುವ ಡಿ.ಆರ್. ಪಾಟೀಲರ ಠೇವಣಿ ಜಪ್ತಿ ಮಾಡಬೇಕು’ ಎಂದೂ ಅವರು ಹೇಳಿದರು.

ಡಿ.ಆರ್. ಪಾಟೀಲ ಸಂತ ರಾಜಕಾರಣಿ, ದೇವರಿದ್ದಂತೆ ಎಂದು ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ ಭಾಷಣ ಮಾಡುತ್ತಾರೆ. ಆದರೆ, ಇವರು ಸಂತರಾಗಿದ್ದರೆ ಕಾವಿ ಬಟ್ಟೆ ಧರಿಸಿ ದೇವಸ್ಥಾನದಲ್ಲಿ ಕೂಡಲಿ, ರಾಜಕೀಯ ಇವರಿಗೆ ಏಕೆ ಬೇಕು? ಸಹೋದರಿ ಲಕ್ಷ್ಮೀ ತಮ್ಮ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು ಎಂದರು.

ಶಿವಕುಮಾರ ಉದಾಸಿ ಕಳೆದ ಎರಡು ಅವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. 3ನೇ ಅವಧಿಗೂ ಸಮಾಜ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಮುರಗೇಶ ನಿರಾಣಿ ಮಾತನಾಡಿ, 45 ವರ್ಷದಿಂದ ಒಂದೇ ಕುಟುಂಬದವರು ಶಾಸಕರಾಗಿ, ಸಚಿವರಾಗಿ, ರಾಜ್ಯ ಮಟ್ಟದ ನಾಯಕರಾಗಿ ಬೆಳೆದರೂ ಜಿಲ್ಲೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಅರೋಪಿಸಿದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗದಗ ಜಿಲ್ಲೆಗೆ ಪೋಸ್ಕೊ ಕೈಗಾರಿಕೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿತ್ತು. ಅದರೆ, ಎಚ್.ಕೆ. ಪಾಟೀಲ ಮತ್ತು ಡಿ.ಆರ್. ಪಾಟೀಲರ ವಿರೋಧದಿಂದಾಗಿ ಇಲ್ಲಿ ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ. ಪೋಸ್ಕೊ ಸ್ಥಾಪನೆಯಾಗಿದ್ದರೆ ಇಲ್ಲಿನ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತಿತ್ತು ಹಾಗೂ ಆ ಮೂಲಕ ಇತರೆ ಕ್ಷೇತ್ರದ ವ್ಯಾಪಾರ ವಹಿವಾಟಿಗೆ ಉತ್ತೇಜನವಾಗುತ್ತಿತ್ತು. ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡಿದವರಿಗೆ ಮತ ನೀಡಬಾರದು ಎಂದು ಅವರು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ವಿಜಯಕುಮಾರ ಗಡ್ಡಿ ಮಾತನಾಡಿ, ಸಮಾಜ ಬಾಂಧವರು ಶಿವಕುಮಾರ ಉದಾಸಿ ಅವರಿಗೆ ಮತವನ್ನು ನೀಡುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಸವಣ್ಣೆಪ್ಪ ಚಿಂಚಲಿ, ಸಿ.ಆರ್. ಬಳ್ಳಾರಿ, ಎಂ.ಎಸ್.ಕರಿಗೌಡರ, ರಾಜು ಗುಡಿಮನಿ ಮತ್ತಿತರರು ಮಾತನಾಡಿದರು. ಶಿವರಾಜ ಹಿರೇಮನಿಪಾಟೀಲ ನಿರೂಪಿಸಿದರು.