ವಿಷಯ ರಹಿತ ಆನಂದವೇ ಜೀವನ್ಮುಕ್ತಿ

ಗದಗ: ವಿಷಯ ರಹಿತ ಆನಂದವನ್ನು ಅನುಭವಿಸುವುದೇ ಜೀವನ್ಮುಕ್ತಿ ಸ್ಥಿತಿ ಆಗಿದೆ ಎಂದು ಕಾಶೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಆಷಾಢ ಮಾಸದ ನಿಮಿತ್ತ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘ ಬುಧವಾರ ಜರುಗಿದ ಇಷ್ಟಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಮಾತನಾಡಿದರು.

ಸುಖವನ್ನು ಅನುಭವಿಸಬೇಕಾದರೆ ಶಬ್ಧ ಸ್ಪರ್ಶಾದಿ ವಿಷಯ ಆಶ್ರಯಿಸಬೇಕಾಗುತ್ತದೆ. ಅಂತೆಯೇ ಪ್ರತಿಯೊಂದು ಜೀವಿಗಳು ಶಬ್ಧ, ಸ್ಪರ್ಶ, ರೂಪ, ರಸ, ಗಂಧ ಎಂಬ ಪಂಚ ವಿಷಯಗಳನ್ನು ತನ್ನ ಪಂಚ ಜ್ಞಾನೇಂದ್ರಿಯಗಳ ಮೂಲಕ ಸದಾ ಅನುಭವಿಸುತ್ತ ಸುಖವನ್ನು ಪಡೆಯುತ್ತಿರುತ್ತಾನೆ. ವಿಷಯಗಳಿಂದ ದೊರೆಯುವ ಈ ಸುಖವು ಕ್ಷಣಿಕವಾದುದು. ಶರೀರದಲ್ಲಿಯ ಇಂದ್ರಿಯಗಳ ಶಕ್ತಿಯು ಕ್ಷೀಣಿಸಿದ ಬಳಿಕ ವಿಷಯಗಳು ಎದುರಿನಲ್ಲಿದ್ದರೂ ಅದರ ಸುಖವನ್ನು ಜೀವಾತ್ಮನು ಪಡೆಯಲಾರ. ಅಂತೆ ಎಲ್ಲ ವಿಷಯ ಸುಖಕ್ಕೆ ಕಾರಣವಾದದ್ದೇ ಆತ್ಮಾನಂದ. ಈ ಆನಂದವನ್ನು ಪಡೆಯಲು ವಿಷಯ ಹಾಗೂ ಇಂದ್ರಿಯಗಳ ಅವಶ್ಯಕತೆ ಇರುವುದಿಲ್ಲ ಎಂದರು.

ನಿದ್ರಾವಸ್ಥೆಯಲ್ಲಿ ಹೇಗೆ ಯಾವುದೇ ವಿಷಯಗಳಿಲ್ಲದಿದ್ದರೂ ಪ್ರತಿಯೊಂದು ಜೀವಿಯು ತನ್ನ ಆತ್ಮದ ಆನಂದವನ್ನೇ ಅನುಭವಿಸುತ್ತಿರುತ್ತದೆಯೋ ಹಾಗೆ ಸಾಧನೆಯ ಬಲದಿಂದ ಅಂತಮುಖವಾದ ಸಾಧಕನು ತನ್ನ ಆತ್ಮದ ಆನಂದ ಅನುಭವಿಸುತ್ತ ಜೀವನ್ಮುಕ್ತಿಯ ವಿಲಕ್ಷಣವಾದ ಆನಂದವನ್ನು ಸವಿಯುತ್ತಿರುತ್ತಾನೆ. ಇಂತಹ ಜೀವನ್ಮುಕ್ತಿಯ ವಿಲಕ್ಷಣವಾದ ಆನಂದ ಅನುಭವಿಸುವ ಸ್ಥಿತಿಯನ್ನು ಹೇಳುವ ಸ್ಥಲಗಳೇ ಲಿಂಗ ಸ್ಥಲಗಳು ಎಂದರು.

ಸಿದ್ದಾಂತ ಶಿಖಾಮಣಿಯಲ್ಲಿ 57 ಸ್ಥಲಗಳಲ್ಲಿ ಈ ಜೀವನ್ಮುಕ್ತಿಯ ಸ್ಥಿತಿಯನ್ನು ವರ್ಣಿಸಲಾಗಿದೆ. ಸಿದ್ಧಾಂತ ಶಿಖಾಮಣಿಯಲ್ಲಿ ಬರುವ 101 ಸ್ಥಲಗಳಲ್ಲಿ 44 ಅಂಗ ಸ್ಥಲಗಳು ಉಳಿದ 57 ಸ್ಥಲಗಳು ಲಿಂಗ ಸ್ಥಳಗಳು. ಈ ವರ್ಷದ ಆಷಾಢ ಮಾಸದ ಆಶೀರ್ವಚನದಲ್ಲಿ ಲಿಂಗ ಸ್ಥಲಗಳನ್ನು ವಿವರಿಸಲಾಗುವುದು ಎಂದರು.

ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಲಿಂಗ ಸ್ಥಲದಲ್ಲಿ ಬರುವ ಮೊದಲನೇ ಅವಾಂತರ ಸ್ಥಳವಾದ ದೀಕ್ಷಾಗುರು ಸ್ಥಲ ಕುರಿತು ಮಾತನಾಡಿದರು.

ರಮೇಶ ಅಬ್ಬಿಗೇರಿ, ವಿ.ಕೆ.ಗುರುಮಠ, ರಾಜು ಮಲ್ಲಾಡದ, ಶಿವಾನಂದಯ್ಯ ಹಿರೇಮಠ, ವೀರೇಶ ಕೂಗು, ಸಂಗಮ್ಮ ಹಿರೇಮಠ, ಸುನೀಲ ಅಬ್ಬಿಗೇರಿ, ಚಂದ್ರು ಬಾಳಿಹಳ್ಳಿಮಠ, ಶಿವಪ್ರಭು ನೀಲಗುಂದ, ಶಿವಾಚಾರ್ಯ ಹೊಸಳ್ಳಿಮಠ, ಡಾ.ಹೀರಾಲಾಲ ಜಿನಗಿ, ಬಾಬಣ್ಣ ಶಾಬಾದಿಮಠ, ಕಾಶೀನಾಥ ಹಂಜಗಿ, ಸದಾಶಿವಯ್ಯ ಮದರಿಮಠ, ವ್ಹಿ.ಎಸ್.ಶಿವಕಾಳಿಮಠ, ಪಂಚಾಕ್ಷರಯ್ಯ ಹಿರೇಮಠ ಇತರರಿದ್ದರು.

ಮಂಜುನಾಥ ಬೇಲೇರಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಐಲಿ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *