ವಿಶ್ವ ನಂ.1 ಹಲೆಪ್​ಗೆ ಆಘಾತ

ಸಿಡ್ನಿ: ವಿಶ್ವ ನಂ.1 ಆಟಗಾರ್ತಿ ಸಿಮೋನಾ ಹಲೆಪ್ ಸಿಡ್ನಿ ಇಂಟರ್​ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ಸೋಲಿನ ಆಘಾತ ಕಂಡಿದ್ದಾರೆ. ಆ ಮೂಲಕ ಮುಂದಿನ ವಾರದಿಂದ ಆರಂಭವಾಗಲಿರುವ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಸಿದ್ಧತೆಗೆ ಹಿನ್ನಡೆ ಕಂಡಿದ್ದಾರೆ.

ಕಳೆದ ಅಕ್ಟೋಬರ್​ನಲ್ಲಿ ಗಾಯದ ಕಾರಣದಿಂದಾಗಿ ಡಬ್ಲ್ಯುಟಿಎ ಫೈನಲ್ಸ್​ನಿಂದ ಹಿಂದೆ ಸರಿದಿದ್ದ ರೊಮೆನಿಯಾದ ಹಲೆಪ್ ಆ ಬಳಿಕ ಯಾವ ಟೂರ್ನಿಯಲ್ಲೂ ಆಡಿರಲಿಲ್ಲ. ಸಿಡ್ನಿ ಟೂರ್ನಿಗೆ ಮೊದಲ ಸುತ್ತಿನ ಬೈ ಪಡೆದಿದ್ದ ಹಲೆಪ್ ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ವಿರುದ್ಧ 4-6, 4-6 ರಿಂದ ಸೋಲು ಕಂಡರು. ಇದು ಆಶ್ಲೆಗ್​ಗೆ ಅವರ ಕ್ರೀಡಾ ಜೀವನದ ದೊಡ್ಡ ಗೆಲುವು ಎನಿಸಿದ್ದರೆ, ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಹಾಗೂ ಆಸ್ಟ್ರೇಲಿಯನ್ ಓಪನ್ ರನ್ನರ್​ಅಪ್ ಹಲೆಪ್​ಗೆ ಅನಿರೀಕ್ಷಿತ ಸೋಲು. ಅದರೊಂದಿಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯನ್ನು ಕೇವಲ ಒಂದು ಪಂದ್ಯದ ಅಭ್ಯಾಸದೊಂದಿಗೆ ಹಲೆಪ್ ಆರಂಭಿಸಲಿದ್ದಾರೆ.

ಮೊದಲ ಸುತ್ತಿನಲ್ಲಿ ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ತಾಪೆಂಕೊರನ್ನು ಸೋಲಿಸಿದ್ದ ಬಾರ್ಟಿ, ಕ್ವಾರ್ಟರ್​ಫೈನಲ್​ನಲ್ಲಿ ಬೆಲ್ಜಿಯಂನ 10ನೇ ಶ್ರೇಯಾಂಕದ ಆಟಗಾರ್ತಿ ಎಲಿಸ್ ಮೆರ್ಟೆನ್ಸ್ ಅಥವಾ ಈಸ್ಟೋನಿಯಾದ ಅನೆಟ್ ಕೊಂಟಾವೆಟ್​ರನ್ನು ಎದುರಿಸಲಿದ್ದಾರೆ.

Leave a Reply

Your email address will not be published. Required fields are marked *