ವಿಶ್ವಾಸವೇ ವಿಜಯದ ಮೆಟ್ಟಿಲು

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇನ್ನೇನು ಮಾರ್ಚ್​ನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಹಿನ್ನೆಲೆಯಲ್ಲಿ ಮನೋವೈದ್ಯ ಡಾ. ಸಿ. ಆರ್. ಚಂದ್ರಶೇಖರ ಅವರ ಸಂವಾದ ಭಾನುವಾರ ಆಯೋಜಿಸುವ ಮೂಲಕ ಮತ್ತೊಂದು ಮಹಾತ್ವಾಕಾಂಕ್ಷಿ ಹೆಜ್ಜೆ ಇರಿಸಿತು.
ಸಂವಾದದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿ ಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅವರಲ್ಲಿರುವ ಮಾನಸಿಕ ತುಮುಲ, ಸಂಕೋಚ ತೊಡೆದು ಹಾಕುವಂಥ ಅನೇಕ ಸಲಹೆಗಳನ್ನು ಡಾ. ಚಂದ್ರಶೇಖರ ನೀಡಿದರು.
ಒಂದೂವರೆ ತಾಸು ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ದಿಶಾ, ಶ್ರೀ ಗುರು ವಿದ್ಯಾಪೀಠ, ಸರ್ವಜ್ಞ ಮತ್ತು ಗ್ಲೋಬಲ್ ಎಜುಕೇಶನ್ ಟ್ರಸ್ಟ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮೂಲಕ ತಮ್ಮಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡರು.
ಹೇಗೆ ಓದಬೇಕು, ಓದಿದ್ದನ್ನು ನೆನೆಪಿನಲ್ಲಿಟ್ಟುಕೊಳ್ಳುವುದು ಹೇಗೆ? ಪರೀಕ್ಷೆ ಭಯ ದೂರಾಗಿಸುವುದು ಹೇಗೆ? ಎಂದು ಸೇರಿ ಹತ್ತಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು.
ಮೆದುಳು ಎಲ್ಲರಲ್ಲೂ ಅಷ್ಟೇ ಇರುತ್ತದೆ. ಒಬ್ಬರಲ್ಲಿ ಸಣ್ಣದು, ದೊಡ್ಡದು ಇರುವುದಿಲ್ಲ. ಅದನ್ನು ಬಳಸಿಕೊಳ್ಳುವ ರೀತಿ ತಿಳಿದುಕೊಳ್ಳಬೇಕು. ಕೇಳುವುದರಿಂದ, ನೋಡುವುದರಿಂದ. ಮತ್ತು ಇನ್ನೊಬ್ಬರು ಮಾಡುವ ಕಾರ್ಯದಿಂದ ಸ್ಮರಣ ಶಕ್ತಿ ವೃದ್ಧಿಸಿಕೊಳ್ಳಬಹುದು. ರಾತ್ರಿ ಬೇಗ ಮಲಗಿ ನಸುಕಿನ ಜಾವದಲ್ಲಿ ಓದಬೇಕು. ನಸುಕಿನ ಜಾವದಲ್ಲಿ ಮೆದುಳಿಗೆ ಕೆಲಸ ಇರುವುದಿಲ್ಲ. ಆಗ ಓದಿದರೆ ಅದು ರಿಕಾರ್ಡ್​ ಮಾಡಿಕೊಳ್ಳುತ್ತದೆ. ರಾತ್ರಿಯಿಡಿ ನಿದ್ದೆಗೆಟ್ಟು ಓದುವುದರಿಂದ ಪ್ರಯೋಜನವಿಲ್ಲ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಕಾಶಕ ಮತ್ತು ಲೇಖಕ ಎಸ್.ಎಸ್. ಹಿರೇಮಠ, ವಿಜಯವಾಣಿ ಪತ್ರಿಕೆ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ, ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಬುರಾವ ಶೇರಿಕಾರ, ದಿಶಾ ಕಾಲೇಜಿನ ಮುಖ್ಯಸ್ಥ ಶಿವಾನಂದ ಖಜೂರಿ, ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ, ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಬಿ.ಎಂ. ಪಾಟೀಲ್ ಕಲ್ಲೂರ, ವಿಜಯವಾಣಿ ಅಕೌಂಟ್ಸ್ ವಿಭಾಗದ ವಿಜಯಕುಮಾರ ಮರಗೋಳ ಸೇರಿ, ವಿದ್ಯಾಥರ್ಿಗಳು, ವಿಜಯವಾಣಿ ಸಿಬ್ಬಂದಿ ಉಪಸ್ಥಿತರಿದ್ದರು.

(ಬಸವರೆಡ್ಡಿ , ಶ್ರೀಗುರು ವಿದ್ಯಾಪೀಠ ಕಾಲೇಜ್): ಪ್ರ: ಎಷ್ಟು ಸಲ ಓದಿದರೂ ಪರೀಕ್ಷೆ ಹತ್ತಿರ ಬಂದಾಗ ಜ್ಞಾಪಕ ಶಕ್ತಿ ಕಳೆದುಕೊಳ್ಳುತ್ತೇವೆ ಏಕೆ?. ಉ: ನನಗೆ ಎಲ್ಲ ಗೊತ್ತಿದೆ ಎಂದು ಕಡೆಗಣಿಸಬಾರದು. ಎಷ್ಟೇ ಗೊತ್ತಿದ್ದರೂ ಮತ್ತೆ ಮತ್ತೇ ಓದಬೇಕು. ಅಂದಾಗ ನೆನೆಪಿನಲ್ಲಿ ಉಳಿಯುತ್ತದೆ. ಮೊದಲು ಓದಬೇಕು, ಓದಿದ್ದನ್ನು ಮೆಲಕು ಹಾಕಬೇಕು, ನಂತರ ಬರೆಯುತ್ತ ಓದಬೇಕು.

(ಭಾಗ್ಯಶ್ರೀ, ಗೆಟ್ ಕಾಲೇಜ್) ಪ್ರ: ಓದುವಾಗ ಹೆಚ್ಚು ಸಮಯ ಏಕಾಗ್ರತೆ ಇರಲ್ಲ ಯಾಕೆ? ಉ: ಅರ್ಧತಾಸು ಏಕಚಿತ್ತದಿಂದ ಓದಿದರೆ ಸಾಕು. ಏಕಾಗ್ರತೆಗೆ ಧ್ಯಾನ ಅಗತ್ಯ. ಓದಬೇಕು ಎಂದು ಪಣ ತೊಟ್ಟು ಓದಲು ಆರಂಭಿಸಬೇಕು. ಏಕಾಗ್ರತೆಯಿಂದ ಓದಿದಷ್ಟು ನೆನಪಿನ ಶಕ್ತಿ ವೃದ್ಧಿಸುತ್ತದೆ. ನಾಲ್ಕೈದು ಬಾರಿ ಓದಬೇಕು. ನಂತರ ಪುಸ್ತಕ ಮುಚ್ಚಿಟ್ಟು ಓದಬೇಕು. ಅಂದಾಗ ಓದಿದ್ದು ನೆನಪಿನಲ್ಲಿರುತ್ತದೆ.

(ಬಸವಣ್ಣಪ್ಪ ದಿಶಾ ಕಾಲೇಜ್): ಪ್ರ: ಮೊದಲು ಹೆಚ್ಚು ಅಂಕ ಪಡೆಯಬೇಕು ಎಂದಿರುತ್ತದೆ. ಪರೀಕ್ಷೆ ಹತ್ತಿರ ಬಂದಾಗ ಪಾಸಾದರೆ ಸಾಕು ಎನ್ನುವಂತಾಗುತ್ತದೆ ಯಾಕೆ?: ಉ: ಪ್ರಾರಂಭದ ದಿನದಂದು ಇಟ್ಟುಕೊಂಡ ಗುರಿ ಪರೀಕ್ಷ್ಷೆ ಬರೆಯುವವರೆಗೂ ಹಾಗೆ ಇರಬೇಕು. ನನ್ನಿಂದ ಆಗಲ್ಲ ಎಂಬ ಭಾವನೆ ಬಂದರೆ ಅಲ್ಲಿ ಸಾಧನೆ ಮಾಡಲು ಆಗದು. ಎಷ್ಟೇ ತೊಂದರೆಯಾಗಲಿ ನಾನು ರ್ಯಾಂಕ್ ಪಡೆಯುತ್ತೇನೆ ಎಂಬ ಆತ್ಮವಿಶ್ವಾಸ ಸದಾ ಇರಲಿ.

(ಸ್ವರ್ಣಗೌರಿ, ಶ್ರೀಗುರು ವಿದ್ಯಾಪೀಠ) ಪ್ರ: ಕೆಲ ವಿಷಯಗಳು ಎಷ್ಟು ಓದಿದರೂ ತಲೆಗೆ ಹೋಗಲ್ಲ ಯಾಕೆ ?: ಉ: ಯಾವ ವಿಷಯದಲ್ಲಿ ಆಸಕ್ತಿ ಕಡಿಮೆ ಇರುತ್ತದೆಯೋ ಆ ವಿಷಯ ಓದಿದರೆ ತಲೆಗೆ ಹತ್ತುವುದಿಲ್ಲ. ಅಂಥ ವಿಷಯಗಳನ್ನು ಮೇಲಿಂದ ಮೇಲೆ ಓದಬೇಕು. ಯಾವ ವಿಷಯಕ್ಕೆ ಎಷ್ಟು ಓದಬೇಕು ಎಂದು ಸಮಯ ನಿಗದಿಪಡಿಸಬೇಕು.

ಡಾ. ಚಂದ್ರಶೇಖರ ಅವರು ನೀಡಿದ ಸಲಹೆ
*ಬೆಳಗ್ಗೆ ಅಭ್ಯಾಸ ಮಾಡಿರಿ. ರಾತ್ರಿ ಆರು ತಾಸು ನಿದ್ದೆ ಅವಶ್ಯ
*ಝಂಕ್ಫುಡ್ (ಕರಿದ, ಮಸಾಲಾ ಮಿಶ್ರಿತ) ಬಳಸುವುದು ಬೇಡ
*ವೇಗವಾಗಿ ಮತ್ತು ಶುದ್ಧವಾಗಿ ದೊಡ್ಡ ದೊಡ್ಡ ಅಕ್ಷರ ಬರೆಯುವುದನ್ನು ರೂಢಿಸಿಕೊಳ್ಳಿ
*ಓದುವ ಸಮಯದಲ್ಲಿ ಕೋಪ, ದ್ವೇಷ, ಹೊಟ್ಟೆ ಕಿಚ್ಚು ಬೇಡ.
*ಪರೀಕ್ಷಾ ಸಮಯದಲ್ಲಿ ಜೀರ್ಣವಾಗುವ ಆಹಾರ ಸೇವಿಸಿರಿ
*ಪರೀಕ್ಷಾ ಕೋಣೆಯಲ್ಲಿ ಮೊದಲು ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಓದಿ ನಂತರ ನಿಮಗೆ ಬರುವ ಉತ್ತರಗಳನ್ನು ಮೊದಲು ಬರೆಯಿರಿ
*ಪರೀಕ್ಷಾ ಸಮಯದಲ್ಲಿ ಮನಸ್ಸು ಮತ್ತು ದೇಹವನ್ನು ಚಿಂತೆಗೆ ಅವಕಾಶ ಕೊಡಬೇಡಿ.
*ಆತ್ಮಸ್ಥೈರ್ಯ ಮತ್ತು ಸಕಾರಾತ್ಮಕ ಚಿಂತನೆ ಇರಲಿ
*ಪರೀಕ್ಷೆಗೆ ಹೋಗುವಾಗ ಹೆಚ್ಚು ಅಂಕ ಗಳಿಸುತ್ತೇವೆ ಎಂದು ನಿರ್ಧಾರ ಮಾಡಿಕೊಂಡೆ ಹೋಗಿ
*ಇನ್ನೊಬ್ಬರು ಪಡೆಯುವ ಅಂಕಗಳ ಬಗ್ಗೆ ತಲೆಬಿಸಿ ಮಾಡಿಕೊಳ್ಳಬೇಡಿ ವಿದ್ಯಾರ್ಥಿ ದಿಸೆಯಲ್ಲಿ ನಿಮ್ಮದೇ ಗುರಿ ಇರಲಿ