ವಿಶ್ವಾಸದಿಂದಲೇ ಆತ್ಮಸ್ವರೂಪದ ಅರಿವು

‘ವಿಶ್ವಾಸ’ ಎಂಬ ಪದಕ್ಕೆ ಅದ್ಭುತ ಶಕ್ತಿಯಿದೆ. ಇದು ಮಾನವನ ಜೀವನದ ಬಹು ಮುಖ್ಯ ಸುಭದ್ರ ಬುನಾದಿ ಎಂದೇ ಹೇಳಬೇಕು. ‘ವಿಶ್ವಾಸ’ ಎನ್ನುವ ಪದ ಬಹಳ ಆಳವಾದದ್ದು. ಕೆಲವೊಮ್ಮೆ ವಿಜಯದಶಮಿಯಂದು ಸಾಮಾನ್ಯವಾಗಿ ಜನರು ಹಿರಿಯರಿಗೆ, ಸಂಬಂಧಿಕರಿಗೆ, ಜೊತೆಗಾರರಿಗೆ, ಸಹಪಾಠಿಗಳಿಗೆ ಶಮೀಪತ್ರೆಯನ್ನು ನೀಡುತ್ತ, ‘ನಮ್ಮ ಶ್ವಾಸವಿರುವವರೆಗೆ ನಮ್ಮಲ್ಲಿ ವಿಶ್ವಾಸವಿರಲಿ’ ಎಂದು ಪ್ರಾರ್ಥಿಸುವ ಪರಂಪರೆ ಇದೆ. ಹಾಗಾಗಿ ‘ವಿಶ್ವಾಸ’ ಎಂದರೆ ಕೇವಲ ವ್ಯಕ್ತಿ-ವ್ಯಕ್ತಿಯ ಮೇಲಿರುವ ವಿಶ್ವಾಸ ಎನ್ನುವ ಬದಲು ಸಿದ್ಧಾಂತ, ವಿಚಾರ, ಆಚಾರಗಳಂತಹ ಮೌಲ್ಯಾಧಾರಿತ ಅಂಶಗಳ ಮೇಲೆ ಹೃದಯಾಂತರಾಳದಿಂದ ಹೊರಬರುವ ‘ವಿಶ್ವಾಸ’ ಎನ್ನಬಹುದು.

ಶ್ರೀ ರಾಮಕೃಷ್ಣ ಪರಮಹಂಸರು; ಸಾಧಕಜೀವನದಲ್ಲಿ ಮೂಲಭೂತವಾದ ವಿಚಾರಗಳು ಬಂದಾಗ ‘ವಿಶ್ವಾಸ’ವಿಡಬೇಕು ಎಂದು ಒತ್ತು ನೀಡಿ ಮಾತನಾಡುತ್ತಿದ್ದರು. ಉದಾಹರಣೆಗೆ, ಗುರುವಿನಲ್ಲಿ ‘ವಿಶ್ವಾಸ’, ಗುರುವಾಕ್ಯದಲ್ಲಿ ‘ವಿಶ್ವಾಸ’. ಸಾಧನಾವಿಚಾರಗಳನ್ನು ತಿಳಿಯುವ ಹಂಬಲದಿಂದ ತಮ್ಮಲ್ಲಿಗೆ ಬರುತ್ತಿದ್ದ ಭಕ್ತರಿಗೆ ಪರಮಹಂಸರು, ‘ಗುರುವಾಕ್ಯದಲ್ಲಿ ವಿಶ್ವಾಸವಿಡು, ಗುರುವಿನ ಉಪದೇಶದಲ್ಲಿ ಸಂಪೂರ್ಣ ವಿಶ್ವಾಸ ಇರಬೇಕು. ಗುರುವಿನ ಮಂತ್ರೋಪದೇಶಗಳಲ್ಲಿ ಪೂರ್ಣ ವಿಶ್ವಾಸವಿಟ್ಟಲ್ಲಿ ಖಂಡಿತ ಗುರಿ ಮುಟ್ಟಲು ಸಾಧ್ಯ’ ಎನ್ನುತ್ತಿದ್ದರು.

ಗುರುವೆಂದರೆ ನಿಜವಾಗಿಯೂ ಅಂಧಕಾರದಿಂದ ಜ್ಞಾನಸೂರ್ಯದತ್ತ ಕರೆದೊಯ್ಯುವವ. ತನ್ನ ಸುಪ್ತಚೈತನ್ಯದ ಅರಿವು ಮೂಡಿಸುವ ಗುರುವಿನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟಲ್ಲಿ ತಮ್ಮನ್ನು ತಾವು ಅರಿಯಲು ಸಾಧ್ಯ ಎನ್ನುತ್ತಿದ್ದರು ಪರಮಹಂಸರು. ಅಂದರೆ ಗುರುವಿನಲ್ಲಿ ಪೂರ್ಣ ವಿಶ್ವಾಸವನ್ನಿಡಬೇಕು. ಆಗಲೇ ತನ್ನ ನಿಜಸ್ವರೂಪವನ್ನು ಅರಿಯಲು ಸಾಧ್ಯ! ಇಲ್ಲಿ ಬಹು ಮುಖ್ಯವಾದ ಅಂಶವೆಂದರೆ ಶಿಷ್ಯನು ಗುರುವಾಕ್ಯದಲ್ಲಿ ಇಡಬೇಕಾದ ಅಚಲ ವಿಶ್ವಾಸ. ಈ ವಿಚಾರವನ್ನು ಸಾಮಾನ್ಯನೂ ಅರಿಯುವಂತೆ ಭಗವಾನ್ ಶ್ರೀರಾಮಕೃಷ್ಣರು ಉದಾಹರಣೆಗಳ ಮೂಲಕ ತಿಳಿಸುತ್ತಿದ್ದರು.

ತುಂಬು ಗರ್ಭವನ್ನು ಧರಿಸಿದ್ದ ಹುಲಿಯೊಂದು ಆಹಾರಕ್ಕಾಗಿ ದಿಢೀರ್ ಎಂದು ಕುರಿಮಂದೆಯೊಂದರ ಮೇಲೆ ಎರಗಿತು. ಒಂದು ಕುರಿಯನ್ನು ಹಿಡಿಯಲು ಪ್ರಯತ್ನಿಸಿ ಛಂಗನೆ ಎರಗಿದ ಕಂಪನದಿಂದ ಪ್ರಕೃತಿನಿಯಮದಂತೆ ಆ ಹುಲಿಯು ಅಲ್ಲಿಯೇ ಮರಿಯನ್ನು ಹೆತ್ತು ಪ್ರಾಣ ಬಿಟ್ಟಿತು. ಸರಿ, ಎಲ್ಲಾ ಕುರಿಗಳು ಈ ಅನಾಥ ಹುಲಿಮರಿಯನ್ನು ಸುತ್ತುವರಿದು ತಮ್ಮದೇ ಒಂದು ಮರಿ ಎಂದು ಭಾವಿಸಿ ಸಾಕಿದವು. ಕ್ರಮೇಣ ಹುಲಿಮರಿಗೆ ಹುಲ್ಲನ್ನು ತಿನ್ನಿಸಿ ಅಭ್ಯಾಸ ಮಾಡಿಸಿದವು. ಕಾಲಕ್ರಮೇಣ ಹುಲಿಮರಿ ದೊಡ್ಡ ಹುಲಿಯಾಗಿ ಬೆಳೆಯಿತು. ಆದಾಗ್ಯೂ ಗರ್ಜಿಸದೆ ಕುರಿಮಂದೆಯೊಂದಿಗೆ ಬ್ಯಾ ಬ್ಯಾ ಎಂದು ಅರಚುತ್ತಿತ್ತು.

ಅದೊಂದು ದಿನ ಕಾಡಿನಲ್ಲಿದ್ದ ಮತ್ತೊಂದು ಹುಲಿಗೆ ಈ ಕುರಿಮಂದೆಯ ಮಧ್ಯೆ ಬ್ಯಾ ಬ್ಯಾ ಎಂದು ಅರಚುತ್ತ ಓಡುತ್ತಿದ್ದ ಹುಲಿಯನ್ನು ಕಂಡು ಆಶ್ಚರ್ಯವಾಯಿತು. ತಕ್ಷಣ ನೆಗೆದು ಈ ಹುಲಿಯನ್ನು ಹಿಡಿದು ಅರಣ್ಯದ ಮಧ್ಯೆ ಎಳೆದುಕೊಂಡು ಹೋಯಿತು. ‘ನೋಡು, ನೀನು ನಮ್ಮ ಹುಲಿ ಸಂತಾನಕ್ಕೆ ಅವಮಾನ ಮಾಡುತ್ತಿದ್ದೀಯಾ. ನೀನೂ ನನ್ನಂತೆಯೇ ಹುಲಿ’ ಎಂದು ಗರ್ಜಿಸಿದಾಗ ಕುರಿಮಂದೆಯ ಮಧ್ಯೆ ಹುಟ್ಟಿದ ಹುಲಿ ಬ್ಯಾ ಬ್ಯಾ ಎಂದು ಕಿರುಚಿತು. ಆಗ ಅರಣ್ಯದ ಹುಲಿಯು ಕುರಿಮಂದೆಯ ಹುಲಿಯನ್ನು ಎಳೆದೊಯ್ದು ಒಂದು ಕೊಳದ ಮುಂದೆ ನಿಲ್ಲಿಸಿತು. ‘ನೋಡು, ನೀನು ನನ್ನಂತೆಯೇ ಹುಲಿ. ನೋಡು, ಈ ಪಟ್ಟಿಗಳು’ ಎಂದು ಹುಲಿಯ ಸ್ವರೂಪವನ್ನು ಪ್ರತಿಬಿಂಬದಲ್ಲಿ ತೋರಿಸಿದಾಗ ಸ್ವಲ್ಪ ವಿಶ್ವಾಸ ಮೂಡಿತು. ಕ್ರಮೇಣ ಅರಣ್ಯದ ಹುಲಿ ಸ್ವಲ್ಪ ಮಾಂಸದ ರುಚಿಯನ್ನು ತೋರಿಸಿದಾಗ ಈ ಮರಿ, ‘ನಾನು ಹುಲ್ಲನ್ನು ತಿನ್ನುವೆ’ ಎಂದಿತು. ಆಗ ಹುಲಿಯು ಅದರ ಬಾಯಿಗೆ ಸ್ವಲ್ಪ ರಕ್ತ-ಮಾಂಸದ ರುಚಿಯನ್ನು ತೋರಿಸಿತು. ‘ನೋಡು, ನೀನೂ ನನ್ನಂತೆಯೇ ಹುಲಿ. ನೀನು ಅರಚಬಾರದು, ಗರ್ಜಿಸಬೇಕು’ ಎಂದು ಒಮ್ಮೆಲೇ ಗರ್ಜಿಸಿದಾಗ ಮಂದೆಯ ಮಧ್ಯೆ ಬೆಳೆದ ಹುಲಿಗೆ ಈ ಅರಣ್ಯದ ಹುಲಿಯ ಮೇಲೆ ಕ್ರಮೇಣ ವಿಶ್ವಾಸ ಮೂಡಲಾರಂಭಿಸಿತು. ನಂತರ ಸನಿಹದಲ್ಲಿಯೇ ಬರುತ್ತಿದ್ದ ಒಂದು ಹರಿಣವನ್ನು ಬೇಟೆಯಾಡಿ ಎರಡೂ ಹುಲಿಗಳು ರುಚಿಯನ್ನು ಅನುಭವಿಸಿದವು. ಕುರಿ ಮಧ್ಯೆ ಇದ್ದಂತಹ ಹುಲಿಗೆ, ‘ಇನ್ನು ನಾನು ಕುರಿಯಲ್ಲ! ಹುಲಿ’ ಎಂದು ಪೂರ್ಣ ವಿಶ್ವಾಸ ಬಂದಿತು. ನಂತರ ಸಹಜ ಗುಣದಂತೆ ಬೇಟೆಯಾಡಲು ಗರ್ಜಿಸುತ್ತಾ ಅರಣ್ಯದ ಮಧ್ಯೆ ಹೊರಟುಹೋಯಿತು.

ಗುರುವಿನ ಜವಾಬ್ದಾರಿ ಹಾಗೂ ಆತನ ಮೇಲೆ ಶಿಷ್ಯನು ಇಡುವ ದೃಢವಿಶ್ವಾಸದ ಕಾರಣ ತನ್ನ ನಿಜಸ್ವರೂಪವನ್ನು ಅರಿಯುವಂತಾದ ಬಗೆಯನ್ನು ಇಲ್ಲಿ ಶ್ರೀರಾಮಕೃಷ್ಣ ಪರಮಹಂಸರು ಅತ್ಯಂತ ಸೊಗಸಾಗಿ ಉಪದೇಶಿಸುತ್ತಾರೆ. ಹಾಗೆಯೇ ನಮ್ಮ ನಿಜಸ್ವರೂಪವನ್ನು ಕಳೆದುಕೊಂಡು; ಈ ಜಗತ್ತಿನಲ್ಲಿ ನಾನೇನು ಮಾಡಬಲ್ಲೆ? ನಾನು ಅಲ್ಪ, ನನಗೇನು ಶಕ್ತಿಯಿದೆ?’ ಎಂದೆಲ್ಲ ಯೋಚಿಸುತ್ತ ಬದುಕುವಾತನಿಗೆ ಸರಿಯಾದ ಸಂದರ್ಭದಲ್ಲಿ ಗುರುವು ದೊರಕಿದರೆ ಜೀವನದ ಚಿತ್ರವೇ ಬದಲಾಗುತ್ತದೆ. ತನ್ನ ಸುಪ್ತಶಕ್ತಿಯನ್ನು ಅರಿಯುತ್ತಾನೆ. ಇದಕ್ಕೆಲ್ಲ ಗುರುವಿನಲ್ಲಿಟ್ಟಿರುವ ದೃಢವಿಶ್ವಾಸವಲ್ಲದೆ ಮತ್ತೇನೂ ಕಾರಣವಿಲ್ಲ. ಗುರುವಾಕ್ಯದಲ್ಲಿ, ಗುರುಮಂತ್ರದಲ್ಲಿ, ಗುರುವಿನಲ್ಲಿ ವಿಶ್ವಾಸವಿಟ್ಟಲ್ಲಿ ತಮ್ಮ ತಮ್ಮ ನಿಜಸ್ವರೂಪವಾದ, ಆತ್ಮಸ್ವರೂಪವನ್ನು ಅರಿತಂತೆಯೇ ಸರಿ!

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *