ವಿಶ್ವಧರ್ಮದತ್ತ ಕೊಂಡೊಯ್ಯುವ ಕಾರ್ಯ ಶ್ಲಾಘನೀಯ

ಶಿರಹಟ್ಟಿ:ಜಗದ್ಗುರು ರೇಣುಕಾದಿ ಪಂಚಾಚಾರ್ಯರು, ಬಸವಾದಿ ಶಿವಶರಣರು ಪ್ರತಿಪಾದಿಸಿದ ಸನಾತನ ಪರಂಪರೆಯ ವೀರಶೈವ ಧರ್ಮದ ಆಚಾರ, ವಿಚಾರ, ಸಂಸ್ಕಾರವನ್ನು ಉಳಿಸಿ ಬೆಳೆಸುವ ಮೂಲಕ ವೀರಶೈವ ಧರ್ಮವನ್ನು ವಿಶ್ವ ಧರ್ಮದತ್ತ ಕೊಂಡೊಯ್ಯುತ್ತಿರುವ ಶ್ರೇಯಸ್ಸು ಆಸ್ಟ್ರೇಲಿಯಾದ ವೀರಶೈವ ಸಮಾಜಕ್ಕೆ ಸಲ್ಲುತ್ತದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ವೀರಶೈವ ಸಮಾಜ ಆಫ್ ಏಷಿಯಾ ಫೆಸಿಫಿಕ್​ನ 11ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿಂದುಗಳು ್ಲ ಆಸ್ಟ್ರೇಲಿಯಾಕ್ಕೆ ಆಗಮಿಸಿ ಕೇವಲ ತಮ್ಮ ಉದ್ಯೋಗಕ್ಕೆ ಸೀಮಿತರಾಗದೆ ವೀರಶೈವ ಧರ್ಮದ ಕಹಳೆ ಮೊಳಗಿಸುವ ನಿಟ್ಟಿನಲ್ಲಿ ಸಂಘ ಸ್ಥಾಪಿಸಿ ವರ್ಷವಿಡಿ ಕನ್ನಡ ಪರ ಚಟುವಟಿಕೆ ಹಾಗೂ ಧಾರ್ವಿುಕ ಕಾರ್ಯಕ್ರಮ ನಡೆಸುತ್ತಿರುವುದು ಪ್ರಶಂಸನೀಯ ಎಂದರು.

ಸಮಾರಂಭ ಉದ್ಘಾಟಿಸಿದ ಬೆಂಗಳೂರು ವಿಭೂತಿಪುರ ವೀರಸಂಸ್ಥಾನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ವಿುಯರ ಆಹ್ವಾನದ ಮೇರೆಗೆ 10 ವರ್ಷದ ಹಿಂದೆ ಆಸ್ಟ್ರೇಲಿಯಾಕ್ಕೆ ಆಗಮಿಸಿ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿಕೊಂಡರು. ಈ ಧರ್ಮದ ಪರಂಪರೆ, ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಹತ್ತು ವರ್ಷದಿಂದ ಸಮಾಜ ಕಟ್ಟುವ ಕಾರ್ಯದ ಜೊತೆಗೆ ಧರ್ಮ ಚಿಂತನೆ ಹಾಗೂ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯವನ್ನು ಮನೆ, ಮನಕ್ಕೆ ಮುಟ್ಟಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೇಬಿಮಠ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಜನರಲ್ಲಿ ಧರ್ಮ ಸಂಸ್ಕಾರದ ಅರಿವು ಮೂಡಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಠಾಧೀಶರ ಪಾತ್ರ ಮುಖ್ಯವಾಗಿದೆ. ವೀರಶೈವ ಧರ್ಮದಲ್ಲಿ ಎರಡು ಕಣ್ಣುಗಳಂತಿರುವ ಗುರು-ವಿರಕ್ತರು ಒಂದಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ ಎಂದರು.

ವೀರಶೈವ ಸಮಾಜ ಆಫ್ ಏಷಿಯಾ ಫೆಸಿಫಿಕ್​ನ ಅಧ್ಯಕ್ಷ ಡಾ. ಸಿದ್ದಲಿಂಗೇಶ್ವರ ಒರೆಕೊಂಡೆ ಮಾತನಾಡಿ, ನಮ್ಮ ಸಮಾಜದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಅವಶ್ಯಕತೆಯಿದೆ. ಗುರು-ವಿರಕ್ತ ಪರಂಪರೆಯ ನಾಲ್ವರು ಮಠಾಧೀಶರು ಭಾರತದ ಬೆಳಕಾಗಿ ಆಸ್ಟ್ರೇಲಿಯಾ ದೇಶಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರು.

ಇದೇ ವೇಳೆ ಸಮಾರಂಭದಲ್ಲಿ ಪಾಲ್ಗೊಂಡ ನಾಲ್ವರು ಮಠಾಧೀಶರಿಗೆ ವೀರಶೈವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಗಂಗಾ ಕ್ಷೇತ್ರದ ಶ್ರೀ ಮಲ್ಲಯ್ಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಿಡ್ನಿಯ ಕೌನ್ಸಿಲರ್ ಸಮೀರ್ ಪಾಂಡೆ, ಆಸ್ಟ್ರೇಲಿಯಾ ವಿಶ್ವ ಹಿಂದು ಪರಿಷತ್​ನ ಸುರೇಂದ್ರ ಜೈನ್, ಹಾಗೂ ವೀ.ಶ.ಸ.ಆ. ಫೆಸಿಫಿಕ್​ನ ಪದಾಧಿಕಾರಿ ಓಂಕಾರ ಸ್ವಾಮಿ, ಬೆಳ್ಳಟ್ಟಿ ಮೂಲದ ವಿಜಯಕುಮಾರ ಹಲಗಲಿ, ಶಿವಾಂದ ಮರಿಗುದ್ದಿ, ಸುರೇಶ ಭಾಗ್ಯಶಂಕರ ಇತರರು ಇದ್ದರು.

Leave a Reply

Your email address will not be published. Required fields are marked *