ವಿಶ್ವದ ದೃಷ್ಟಿ ಭಾರತದ ಚುನಾವಣೆಯತ್ತ

ಹುಬ್ಬಳ್ಳಿ: ಭಾರತದ ಚುನಾವಣೆಯತ್ತ ಇಡೀ ವಿಶ್ವವೇ ಕುತೂಹಲದಿಂದ ನೋಡುತ್ತಿದೆ. ಹಾಗಾಗಿ ನರೇಂದ್ರ ಮೋದಿ ಅವರು ಐತಿಹಾಸಿಕ ಗೆಲುವು ಸಾಧಿಸಿ ಪ್ರಧಾನಿಯಾಗುವರು ಎಂದು ಮಾಜಿ ಸಂಸದ ಡಾ. ವಿಜಯ ಸಂಕೇಶ್ವರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜವಳಿ ಸಾಲಿನ ರಮೇಶ ಬಟ್ಟೆ ಅಂಗಡಿ, ಮಂಗಳವಾರ ಪೇಟದ ಜಾಬಿನ್ ಅವರ ನಿವಾಸ, ಯಲ್ಲಾಪುರ ಓಣಿಯ ಪಾಲಿಕೆ ಸದಸ್ಯೆ ಶಾಂತಕ್ಕ ಚನ್ನೋಜಿ ಅವರ ನಿವಾಸದಲ್ಲಿ ಗುರುವಾರ ಪ್ರತ್ಯೇಕವಾಗಿ ನಡೆದ ವಿವಿಧ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ವಿಶ್ವವೇ ಬಲಿಷ್ಠ ಹಾಗೂ ಪ್ರಭಾವಿ ಪ್ರಧಾನಿ ಎಂದು ಮೋದಿಯವರನ್ನು ಕೊಂಡಾಡುತ್ತಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರನ್ನು ಕೊಟ್ಟರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವರು. ಅವರು ಆಯ್ಕೆಯಾದರೆ ಭಾರತ ಮತ್ತಷ್ಟು ಬಲಿಷ್ಠವಾಗಲಿದೆ ಎಂದರು.

ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಕಾಂಗ್ರೆಸ್ ಸರ್ಕಾರ ರೈಲು, ವಿಮಾನ ನಿಲ್ದಾಣ ಕೊಟ್ಟಿದೆ ಎನ್ನುತ್ತಿದ್ದಾರೆ. ಆದರೆ ಇತಿಹಾಸವನ್ನು ಅವರು ಓದಬೇಕು. ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ಇದ್ದಾಗ ಈ ಭಾಗದಲ್ಲಿ ರೈಲ್ವೆ, ವಿಮಾನ ನಿಲ್ದಾಣ ಬಂದವು. ಮೋದಿ ಸರ್ಕಾರ ಇಲ್ಲಿಗೆ ಐಐಟಿ, ರಸ್ತೆಗಳ ಅಭಿವೃದ್ಧಿಗೆ ಅನುದಾನ, ಸ್ಮಾರ್ಟ್​ಸಿಟಿ ಪ್ರಾಜೆಕ್ಟ್ ಕೊಟ್ಟಿದೆ. ಪ್ರಲ್ಹಾದ ಜೋಶಿ ಅವರು ಒಟ್ಟು ಹದಿನೈದು ಸಾವಿರ ಕೋಟಿಗಿಂತ ಅಧಿಕ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಪಡಿಸಿದ್ದಾರೆ. ಈ ಬಾರಿ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾದರೆ ಕೇಂದ್ರ ಸಚಿವರಾಗುವರು. ಇದರಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಹಾಗಾಗಿ ತಾವು ತಮ್ಮ ಮತವನ್ನಷ್ಟೇ ನೀಡದೇ, ತಮ್ಮ ದೂರದ ಸಂಬಂಧಿಗಳು, ನೆರೆಹೊರೆಯವರಿಗೂ ಬಿಜೆಪಿ ಬೆಂಬಲಿಸುವಂತೆ ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಚಂದ್ರಶೇಖರ ಗೋಕಾಕ, ವೀರೇಶ ಸಂಗಳದ, ಬಸವರಾಜ ಚನ್ನೋಜಿ, ಮಲ್ಲಿಕಾರ್ಜುನ ಸಿರಗುಪ್ಪಿ, ರವಿ ಕೊಪ್ಪಳ, ಜಗದೀಶ ಬುಳ್ಳಾನವರ, ಅಶೋಕ ಜೈನ್, ಎಸ್.ಪಿ. ಚೌಧರಿ, ಭರತ್ ಜೈನ್, ಬಾಬುಲಾಲ್ ಜೈನ್, ರವಿ ಇಚಗೇರಿ, ಕೆಎಲ್​ಇ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಜೆ.ಪಿ. ಜಾಬಿನ್, ಇತರರು ಇದ್ದರು.

ವಿವಿಧೆಡೆ ಪ್ರಚಾರ: ಪ್ರಲ್ಹಾದ ಜೋಶಿ ಪರ ಡಾ. ವಿಜಯ ಸಂಕೇಶ್ವರ ನೇತೃತ್ವದಲ್ಲಿ ತಾಲೂಕಿನ ಅಂಚಟಗೇರಿ, ವರೂರ ಹಾಗೂ ಛಬ್ಬಿ ಗ್ರಾಮಗಳಲ್ಲಿ ಇತ್ತೀಚೆಗೆ ಪ್ರಚಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಕೇಶ್ವರ ಅವರು, ಹಿಂದೆ ಆಡಳಿತ ದೇಶದ್ರೋಹಿಗಳ ಕೈಯಲ್ಲಿತ್ತು. ನೆರೆಯ ಪಾಕಿಸ್ತಾನ ಹಾಗೂ ಚೀನಾದ ಹಿತಾಸಕ್ತಿಯನ್ನು ಅಂದಿನ ಸರ್ಕಾರ ಕಾಪಾಡುತ್ತಿತ್ತು. ಬಡವರ ಹೆಸರಿನಲ್ಲಿ ಕಾಂಗ್ರೆಸ್ ಬಹಳಷ್ಟು ಭ್ರಷ್ಟಾಚಾರ ನಡೆಸಿದೆ. ಆದ್ದರಿಂದ, ದೇಶದ ಅಭಿವೃದ್ಧಿ ಹಾಗೂ ಯುವ ಪೀಳಿಗೆಯ ಪ್ರಗತಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಕೋರಿದರು.

ಗ್ರಾಮೀಣ ಜನರು ಜಾಗೃತರಗಿರುವುದನ್ನು ಗಮನಿಸಿದ್ದೇನೆ. ನರೇಂದ್ರ ಮೋದಿ ಕನಿಷ್ಠ ಇನ್ನೂ 2 ಬಾರಿಯಾದರೂ ಪ್ರಧಾನಿಯಾಗಬೇಕು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿಧಾನವಾಗಿದ್ದವು. ಆದರೆ ಕಳೆದ 5 ವರ್ಷಗಳಲ್ಲಿ ಸಂಸದ ಪ್ರಲ್ಹಾದ ಜೋಶಿ ಉತ್ತಮ ಕಾರ್ಯ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಎಂ.ಆರ್. ಪಾಟೀಲ, ವೀರೇಶ ಸಂಗಳದ, ನೇಮಚಂದ ಬಸಾಪುರ, ಪ್ರೇಮಕ್ಕ ಕಡಪಟ್ಟಿ, ಟಿ.ಜಿ. ಬಾಳಣ್ಣವರ, ಉಮೇಶ ಕುಸುಗಲ್ಲ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *