ಎನ್.ಆರ್.ಪುರ: ಭಾರತ ಕೇವಲ ದೇಶದ ಜನರ ಕಲ್ಯಾಣ ಮಾತ್ರ ಬಯಸುವುದಿಲ್ಲ. ಇಡೀ ವಿಶ್ವದ ಒಳಿತು ಬಯಸುತ್ತದೆ ಎಂದು ವಾಗ್ಮಿ ಪ್ರಕಾಶ ಮಲ್ಪೆ ತಿಳಿಸಿದರು.
ಗುರುವಾರ ಕುದುರೆಗುಂಡಿಯಲ್ಲಿ ಸನಾತನ ಹಿಂದು ಸಮಾಜ ಪರಿಷತ್ ನೇತೃತ್ವದಲ್ಲಿ ನಡೆದ ಹಿಂದು ಸಂಗಮ ಹಾಗೂ ಶ್ರೀಕ್ಷೇತ್ರ ಕಪಿಲ ತೀರ್ಥದ ದೀಪೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಪ್ರಪಂಚದ ಎಲ್ಲ ಕಡೆ ಹಿಂದು ದೇವಾಲಯ, ಹಿಂದು ಸಂಸ್ಕೃತಿ ನೆಲೆಸಿದೆ. ಜರ್ಮನಿಯರು ವೇದಗಳಿಗೆ ಭಾಷ್ಯ ಬರೆದಿದ್ದರು. ಭಾರತಕ್ಕೆ ರಾಜಕೀಯ ಭೀತಿ ಎದುರಾಗಬಹುದು. ಆದರೆ ಸನಾತನ ಧರ್ಮಕ್ಕೆ ಸಣ್ಣ ಚ್ಯುತಿಯೂ ಬರುವುದಿಲ್ಲ. ಹಿಂದು ಧರ್ಮಕ್ಕೆ ಸ್ವಲ್ಪ ಚ್ಯುತಿಯಾದರೂ ವಿಶ್ವವೇ ಭಾರತದ ಬೆಂಬಲಕ್ಕೆ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್ ಮಾತನಾಡಿ, 12ನೇ ಶತಮಾನದಿಂದ 17ನೇ ಶತಮಾನದವರೆಗೆ ಅಯೋಧ್ಯೆ, ಕಾಶಿ, ಮಥುರವನ್ನು ಕಳೆದುಕೊಂಡಿದ್ದೆವು. ಧರ್ಮಕ್ಕೆ ಚ್ಯುತಿ ಬಂದಾಗ ಅಧರ್ಮದ ವಿರುದ್ಧ ಹೋರಾಟ ಮಾಡಿ ಧರ್ಮ ಸ್ಥಾಪನೆಗಾಗಿ ಶ್ರೀಕೃಷ್ಣ ಸಹಾಯಕ್ಕೆ ಬರುತ್ತಾನೆ. ಹಿಂದು ಧರ್ಮಕ್ಕೆ ಅನ್ಯಾಯವಾದರೆ ಹೋರಾಟ ಮಾಡಬೇಕು. ಆಗ ನಿಮ್ಮ ಸಹಾಯಕ್ಕೆ ಶ್ರೀಕೃಷ್ಣ ಬರಲಿದ್ದಾನೆ. ಪ್ರತಿ ಹಿಂದು ಮನೆಯಲ್ಲೂ ಒಬ್ಬೊಬ್ಬ ಧರ್ಮ ಸಂರಕ್ಷಕರು ಹುಟ್ಟಿ ಬರಬೇಕು ಎಂದು ಹೇಳಿದರು.
ಸೀತೂರು ಯಕ್ಷಸಿರಿ ರಾಜ್ಯ ಪ್ರಶಸ್ತಿ ಪುರಸ್ಕೃತ ಅನಂತಪದ್ಮನಾಭರಾವ್ ಮಾತನಾಡಿ, ಹಿಂದು ಎಂದರೆ ವಿಶ್ವಕ್ಕೇ ಗುರು ಸ್ಥಾನವಿದ್ದಂತೆ. ಹಿಂದುಗಳು ಸಂಘಟನೆಯಾದರೆ ವಿಶ್ವವನ್ನೇ ಆಳಬಹುದು. ದೇಶದ ಎಲ್ಲ ಮಠಗಳೂ ಒಂದಾಗಬೇಕು ಎಂದರು.
ಕುದುರೆಗುಂಡಿಯಿಂದ ಕಪಿಲಾ ತೀರ್ಥದವರೆಗೆ ಮೆರವಣಿಗೆ, ದೀಪೋತ್ಸವ ನಡೆಯಿತು. ಕಪಿಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಕೆ.ಕೆ.ಶಿವರಾಜ್, ಹಿಂದು ಕಾರ್ಯಕರ್ತ ಪ್ರಮೋದ್ ಕಾಮತ್, ಚೇತನ್‌ಕುಮಾರ್, ರಂಗಿಣಿ, ಎನ್.ಎಸ್.ವೆಂಕಟರಮಣ, ಕಡೇಗದ್ದೆ ಚಕ್ರಪಾಣಿ, ಅರವಿಂದ ಸೋಮಾಯಾಜಿ, ಜನಾರ್ದನ ಇದ್ದರು.