ಚಿತ್ರದುರ್ಗ: ಕಣ್ಣಿಗೆ ಕಾಣುವ ಪ್ರತಿ ಭವ್ಯತೆಯಲ್ಲೂ ವಿಶ್ವಕರ್ಮರ ಪ್ರಯತ್ನವಿದೆ. ವಿಶ್ವವೇ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ವೈವಿಧ್ಯಮಯ ಶಿಲ್ಪಗಳಿಗೆ ಜೀವಕಳೆ ತುಂಬಿದ ಮಹಾನ್ ಚೇತನ ಎಂದು ಹಿರಿಯೂರು ತಾಲೂಕು ಗನ್ನಾಯಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಾಘವೇಂದ್ರಾಚಾರ್ ಬಣ್ಣಿಸಿದರು.
ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.
ವಿಶ್ವಕರ್ಮ ಅಂದರೆ ಎಲ್ಲವನ್ನೂ ಸಾಧಿಸಿದವನು. ಯಾವ ವಸ್ತುವಾಗಲಿ ಬಳಸದಿದ್ದರೆ, ಕಾಲಕ್ರಮೇಣ ನಶಿಸಿ ಹೋಗುತ್ತದೆ. ನಾವೆಲ್ಲರೂ ವಿಶ್ವಕರ್ಮನ ಅಸ್ತಿತ್ವ ಅರ್ಥ ಮಾಡಿಕೊಳ್ಳದಿದ್ದರೆ, ಆ ಪದ ಕೇವಲ ಜಾತಿಗೆ ಸೀಮಿತವಾಗಲಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಅಮೂರ್ತ ರೂಪಕ್ಕೆ ಜೀವಕಳೆ ತುಂಬುವ ಕಾಯಕ ಮಾಡಿ ಅದಕ್ಕೆ ಮೌಲ್ಯ, ಬೇಡಿಕೆ ಬರುವುದಕ್ಕೆ ಈ ಸಮಾಜವೇ ಕಾರಣ ಎಂಬುದನ್ನು ಮರೆಯಬಾರದು ಎಂದರು.
ವಿಶ್ವಕರ್ಮನ 5 ಮುಖಗಳು ವಿಶ್ವದ ಸೃಷ್ಟಿಗೆ ಕಾರಣವಾದ ಅಗ್ನಿ, ನೀರು, ಆಕಾಶ, ಭೂಮಿ, ವಾಯು ಈ ಪಂಚಭೂತಗಳನ್ನು ಸದಾ ನೆನಪಿಸುತ್ತದೆ ಎಂದು ಹೇಳಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಸಂಸದರಿಂದ ಮೆರವಣಿಗೆಗೆ ಚಾಲನೆ: ಜಯಂತಿ ಅಂಗವಾಗಿ ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಬುರುಜನಹಟ್ಟಿಯ ಕೋಟೆ ಆಂಜನೇಯ ದೇಗುಲದಿಂದ ಆರಂಭವಾದ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆಗೆ ಸಂಸದ ಗೋವಿಂದ ಎಂ ಕಾರಜೋಳ ಚಾಲನೆ ನೀಡಿದರು. ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಂಗಮಂದಿರ ತಲುಪಿತು. ವಿವಿಧ ಜನಪದ ಕಲಾತಂಡಗಳು ಮೆರುಗು ನೀಡಿದವು. ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಇತರರಿದ್ದರು.
ತಹಸೀಲ್ದಾರ್ ಡಾ.ನಾಗವೇಣಿ, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಟಿ.ಸುರೇಶಾಚಾರ್ಯ, ಉಪಾಧ್ಯಕ್ಷ ಎಸ್.ಕೃಷ್ಣಾಚಾರ್, ಪ್ರಧಾನ ಕಾರ್ಯದರ್ಶಿ ಎ.ಗೋವರ್ಧನಾಚಾರ್, ಮುಖಂಡರಾದ ಶಿವಣ್ಣಾಚಾರ್, ಮಲ್ಲಿಕಾರ್ಜುನಾಚಾರ್, ಸುರೇಶಾಚಾರ್, ಷಣ್ಮುಖಾಚಾರ್, ಪದ್ಮಾಕಾಳಾಚಾರ್, ನಗರಸಭೆ ಸದಸ್ಯ ಶ್ರೀನಿವಾಸ್, ಮಾಜಿ ಸದಸ್ಯ ಶ್ರೀರಾಮ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇತರರಿದ್ದರು.