Wednesday, 14th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ವಿಶ್ವಕ್ಕೇ ಮಾದರಿ ಆಗಿದೆ ತೈಪೆ ನಗರ

Friday, 17.02.2017, 7:30 AM       No Comments

ಅಮೆರಿಕದ ಪೆನ್ಸಿಲ್ವೇನಿಯಾ ನಿವಾಸಿ ಹಾಗೂ ವಿಜಯವಾಣಿ ಓದುಗರಾದ ಅನುಪಮಾ ವೇಣುಗೋಪಾಲ ಅವರು ತ್ಯಾಜ್ಯ ನಿರ್ವಹಣೆ ಕುರಿತಾಗಿ ಬರೆದ ವಿಶೇಷ ಲೇಖನವಿದು

ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯೇನಲ್ಲ. ಆದರೆ, ಈ ನಿಟ್ಟಿನಲ್ಲಿ ಸೂಕ್ತ ಅರಿವು, ಜಾಗೃತಿ ಮೂಡಿಸಬೇಕು. ಅಮೆರಿಕ, ತೈವಾನ್ ಸೇರಿದಂತೆ ಹಲವು ರಾಷ್ಟ್ರಗಳು ಇಂಥ ಪ್ರಯತ್ನಗಳಿಂದಲೇ ಸ್ವಚ್ಛತೆಯ ಗರಿಯನ್ನು ತಮ್ಮದಾಗಿಸಿಕೊಂಡಿವೆ. ಭಾರತದಲ್ಲೂ ತ್ಯಾಜ್ಯ ಸಮಸ್ಯೆ ಬೃಹತ್ತಾಗಿ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಜನಜಾಗೃತಿಗೆ ಇದು ಸಕಾಲ.

| ಅನುಪಮಾ ವೇಣುಗೋಪಾಲ

ಒಂದೇ ಸಲ ಬಳಸಿ ಬಿಸಾಡುವ ಪ್ಲಾಸ್ಟಿಕ್ ಲೋಟ-ತಟ್ಟೆಗಳು, ಪ್ಯಾಕ್ ಮಾಡಲಾದ ಆಹಾರ ತಿಂಡಿಗಳನ್ನು ಬಳಸುವುದು ಆಧುನಿಕ ಆರಾಮ ಜೀವನಶೈಲಿಯ ವೈಶಿಷ್ಟ್ಯಾಗಿಬಿಟ್ಟಿದೆ. ಇಂಥವರು, ಅದರಿಂದ ಹುಟ್ಟುವ ಕಸದ ವಿಲೇವಾರಿಯ ಕುರಿತು ಆಸ್ಥೆ ವಹಿಸದಿರುವುದು ಇಂದಿನ ಕಸದರಾಶಿಯ ದೃಶ್ಯಕ್ಕೆ ಬಹುತೇಕ ಕಾರಣ ಎಂದರೆ ತಪ್ಪಾಗಲಾರದು. ಉಣ್ಣಲು ಬಾಳೆ ಎಲೆ/ದೊನ್ನೆ ಬಳಸಿದರೆ ಅವು ಕೆಲವೇ ದಿನಗಳಲ್ಲಿ ಮಣ್ಣಲ್ಲಿ ಕೊಳೆತು ಅದರ ಫಲವತ್ತತೆಯನ್ನು ಹೆಚ್ಚಿಸುತ್ತವೆ; ಆದರೆ ಪ್ಲಾಸ್ಟಿಕ್ ತಟ್ಟೆ-ಲೋಟಗಳಿಗೆ ಇಂಥ ಗುಣವಿಲ್ಲ. ಹೀಗಾಗಿ ಮೂಲದಲ್ಲೇ ಕಸದ ವಿಂಗಡಣೆ ಮಾಡಬೇಕಿರುವುದು ಇಂದಿನ ಅನಿವಾರ್ಯತೆ. ಏಕೆಂದರೆ, ಕಸದ ತೊಟ್ಟಿಯಲ್ಲಿರಬಹುದಾದ ಪ್ಲಾಸ್ಟಿಕ್ ಮತ್ತು ಇತರ ಮರುಬಳಕೆ ಸಾಮಗ್ರಿಗಳನ್ನು ಹೆಕ್ಕಲು/ಮಾರಲು ಅಥವಾ ಕಸದ ರಾಶಿ ಕುಗ್ಗಿಸಲು ಕೆಲವರು ಕಸದರಾಶಿಗೆ ಕಿಡಿಹಚ್ಚುವುದರಿಂದ ಈ ವಿಷಮಿಶ್ರಿತ ಹೊಗೆ ಜನರ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಅಮೆರಿಕ, ಇಂಗ್ಲೆಂಡ್​ನಂಥ ದೇಶಗಳಲ್ಲೂ ಒಂದಾನೊಂದು ಕಾಲದಲ್ಲಿ ಹಂದಿಗಳು ರಸ್ತೆ ಸ್ವಚ್ಛತೆಯನ್ನು ನಿರ್ವಹಿಸುತ್ತಿದ್ದವು; ಮನೆಯ ಮತ್ತು ಕಾರ್ಖಾನೆಗಳ ಕಸವನ್ನು ನದಿಗಳಿಗೆ ಹಾಕಲಾಗುತ್ತಿತ್ತು. ಜನಸಂಖ್ಯೆ ಬೆಳೆದಂತೆ ತ್ಯಾಜ್ಯದ ಪ್ರಮಾಣವೂ ಹೆಚ್ಚಿ, ಕಾಲರಾ, ರಕ್ತಾತಿಸಾರ ಹಾಗೂ ಇತರ ಸಾಂಕ್ರಾಮಿಕ ರೋಗಗಳು ಹರಡಿ ಸಾವಿರಾರು ಜನ ಪ್ರಾಣ ಕಳಕೊಂಡ ಮೇಲೆಯೇ ಕಸ, ಕೊಳೆ, ನಿಂತನೀರಿನಿಂದಲೂ ಕಾಯಿಲೆ ಬರುತ್ತದೆಂಬ ಜ್ಞಾನೋದಯ ಅವರಿಗಾದದ್ದು! 1860ರ ನಂತರದಲ್ಲಿ ತ್ಯಾಜ್ಯ ಹಾಗೂ ಚರಂಡಿಗಳ ನಿರ್ವಹಣೆಗೆ ಅವರು ವಿನೂತನ ಕ್ರಮ ಕೈಗೊಂಡಿದ್ದರಿಂದಲೇ, ಇಂದಿನವರು ಅಲ್ಲಿ ಶುದ್ಧಗಾಳಿ, ನೀರು ಸೇವಿಸಲು ಸಾಧ್ಯವಾಗುತ್ತಿದೆ.

ತೈವಾನ್​ನ ಸ್ವಚ್ಛತೆ ಪಾಠ

ನಾವು ತೈವಾನ್​ನ ತೈಪೆ ನಗರದಲ್ಲಿ ಕೆಲಕಾಲ ಇದ್ದೆವು. ಅದು ಪುಟ್ಟ ಸುಂದರ ದ್ವೀಪ, ಅಲ್ಲಿನವರು ಅಕ್ಕರೆಯ ಜನ. ಮಗನಿಗೆ ಕುರುಕಲು ತಿಂಡಿ ಕೊಡಿಸಿ, ನಾವು ‘ಪ್ಯಾಷನ್ ಫ್ರೂಟ್’ನ ಗ್ರೀನ್ ಟೀ ತಗೊಂಡರೂ, ಖಾಲಿ ಪಪೊಟ್ಟಣ, ಚಾಕಲೇಟ್ ಪೇಪರ್ ಇತ್ಯಾದಿ ಕಸಗಳನ್ನು ಮನೆಗೆ ತಂದು ಒಗೀತಿದ್ವಿ; ಕಾರಣ ಸಿಕ್ಕಸಿಕ್ಕಲ್ಲಿ ಕಸದ ಡಬ್ಬ ಇಡೋಲ್ಲ ಅಲ್ಲಿನವರು! ನಮ್ಮಲ್ಲಾದರೋ ಕಸಹಾಕಲು ಮಾವಳ್ಳಿಪುರ, ಅದಾದ ಮೇಲೆ ಮಂಡೂರು, ಈಗ ಕೋಲಾರ/ತುಮಕೂರು ಹೀಗೆ 3-4 ವರ್ಷಕ್ಕೆ ಒಂದೊಂದೂರನ್ನು ಬಲಿಕೊಡುವಂತೆ, ತೈವಾನ್​ನಲ್ಲಿ ಅಷ್ಟೊಂದು ಜಾಗವಿಲ್ಲ. ಹಾಗಾಗಿ ಅವರು ’ಘಛ್ಟಿಟ ಗಚಠಠಿಛಿ Mಚ್ಞಚಜಛಿಞಛ್ಞಿಠಿ’ ಕಡೆಗೆ ಹೆಜ್ಜೆಹಾಕಿದ್ದಾರೆ.

ತೈವಾನ್​ನಲ್ಲಿ ನಾವು ಬಾಡಿಗೆಮನೆ ಮಾಡಿ 5 ದಿನಗಳಾದರೂ, ನಮ್ಮ ಮನೆಯ ಕಸವನ್ನು ಅಲ್ಲಿನ ಪೌರಕಾರ್ವಿುಕರು ನಿರಾಕರಿಸುತ್ತಿದ್ದರು. ಕಸದ ಚೀಲವನ್ನು ವಾಪಸ್ ತಂದ ನನ್ನ ಪತಿ, ‘ಇವತ್ತೂ ಬೈದು ಕಳಿಸಿಬಿಟ್ಟ ಕಣೆ!’ ಅಂತ ಅಲವತ್ತುಕೊಂಡರು. ರಾತ್ರಿ 9 ಗಂಟೆಗೆ ನಮ್ಮ ಬೀದಿಯಲ್ಲಿ ಒಂಥರಾ ಸಡಗರ! ಕಾರಣ ಅದು ‘ಕಸದ ವ್ಯಾನ್’ ಬರೋ ಸಮಯ. ವ್ಯಾನ್ ಹಿಂದಿನ ಬೀದಿಗೆ ಬಂದಿದ್ದು ಗೊತ್ತಾಗುತ್ತಿದ್ದಂತೆ, ಜನರೆಲ್ಲ ಮನೆಯ ಕಸದಡಬ್ಬ ತಗೊಂಡು ಸರದಿಯಲ್ಲಿ ನಿಲ್ತಾರೆ. ಬಸ್ ಸ್ಟಾಪ್​ಗಳ ಥರ ನಿಗದಿತ ಸ್ಥಳಗಳಲ್ಲಿ ವಾಹನ ನಿಲ್ಲಿಸ್ತಾರೆ. ಕಸ ತಗೊಂಡು ಹೋಗೋದು ತಡವಾದ್ರೆ ಮುಂದಿನ ನಿಲ್ದಾಣಕ್ಕೆ ಓಡಬೇಕು, ಇಲ್ಲವೇ ಮರುದಿನವೇ ಅದಕ್ಕೆ ಮುಕ್ತಿ!

ನಾವು ಒಣತ್ಯಾಜ್ಯ ಮತ್ತು ಹಸಿತ್ಯಾಜ್ಯವನ್ನು ವಿಂಗಡಿಸಿಕೊಟ್ಟರೂ, ಊಹೂಂ ಸ್ವೀಕರಿಸಲಿಲ್ಲ. ಆಮೇಲೆ ಗೊತ್ತಾಯಿತು- ವಾರದಲ್ಲಿ 5 ರಾತ್ರಿ ಕಸದ ವ್ಯಾನುಗಳು ಬರುತ್ತವೆ, ನಾವು ನಾನಾ ರೀತಿಯಲ್ಲಿ ಕಸವನ್ನು ವಿಂಗಡಿಸಬೇಕು ಅಂತ. ಅಡುಗೆಮನೆಯ ತ್ಯಾಜ್ಯವನ್ನು ಬೇಯಿಸಿದ್ದು ಹಾಗೂ ಬೇಯಿಸದಂಥದ್ದು ಎಂದು ಎರಡು ಬಗೆಯಲ್ಲಿ ವಿಂಗಡಿಸಬೇಕು. ಅಲ್ಲಿನವರು ಬೇಯಿಸಿದ ತ್ಯಾಜ್ಯವನ್ನು ಸಂಸ್ಕರಿಸಿ ಪಶುಆಹಾರವನ್ನು ತಯಾರಿಸುತ್ತಾರೆ. ಬೇಯದ್ದನ್ನು ಕೃಷಿಗೊಬ್ಬರಕ್ಕಾಗಿ ಉಪಯೋಗಿಸುತ್ತಾರೆ. ಪ್ಲಾಸ್ಟಿಕ್ ಪದಾರ್ಥ, ಕ್ಯಾನ್​ಗಳು, ಪುಸ್ತಕಗಳು, ಮರುಬಳಕೆಗೆ ಅರ್ಹವಾಗಿಸಬಹುದಾದ ಇತರ ವಸ್ತುಗಳು ಮತ್ತು ಬ್ಯಾಟರಿಗಳು ಈ ವರ್ಗದವು. ಕೊನೆಯದು ನಿಜವಾದ ಕಸ- ಯಾವ ಗುಂಪಿಗೂ ಸೇರದ ನಿಷ್ಪ್ರಯೋಜಕ ಕಸ- ನೆಲಭರ್ತಿಗೆ/ದಹನಪಾತ್ರೆಗೆ ಹೋಗುವ ಕಸ. ಸರ್ಕಾರ ನಿಗದಿಪಡಿಸಿರುವ ‘ಪಿಂಕ್ ಕವರ್’ನಲ್ಲೇ (ಈ ಕವರ್ ಅನ್ನು ಮುಂಚಿತವಾಗಿಯೇ ಖರೀದಿಸಿರಬೇಕು. ಶಿಸ್ತಾಗಿ ವಿಂಗಡಣೆ ಮಾಡಿದರೆ, ಈ ಕವರ್​ನಲ್ಲಿ ಹೆಚ್ಚು ಕಸವೇ ತುಂಬುತ್ತಿರಲಿಲ್ಲ. ಹಾಗಾಗಿ ಅಲ್ಲಿನ ಜನ ಇಂಥ ಕಸ ಮಾಡಿಕೊಳ್ಳುವುದೂ ಕಮ್ಮಿ, ‘ಪಿಂಕ್ ಕವರ್’ ಖರೀದಿಯೂ ಕಮ್ಮಿ!) ಈ ಕಸವನ್ನು ತುಂಬಿ ಎಸೆಯಬೇಕು.

ಹಳ್ಳಿಗಳಿಂದ ಕಲಿಯುವುದು ಸಾಕಷ್ಟಿದೆ

’ಛ್ಟಿಟ ಡಿಚಠಠಿಛಿ’ ಅಥವಾ ‘ಶೂನ್ಯ ತ್ಯಾಜ್ಯ’ ಎಂಬ ಪರಿಕಲ್ಪನೆಯು ‘ಕ್ಷಿಪಣಿ ವಿಜ್ಞಾನ’ ಅಲ್ಲವೇ ಅಲ್ಲ; ಅದು ನಮ್ಮ ಹಳ್ಳಿಗಳನ್ನು ನೋಡಿ ತಿಳಿಯುವಂಥದ್ದು. ಹಸುವಿನ ಹಾಲು ಕರೆಯುತ್ತಾರೆ- ಹಾಲಿನ ಪ್ಯಾಕೆಟ್ ಕಸ ಹುಟ್ಟಲ್ಲ; ಅಲ್ಲೇ ತರಕಾರಿ ಬೆಳೆಯುವುದರಿಂದ ಪ್ಯಾಕೇಜಿಂಗ್ ಕಸ ಹುಟ್ಟಲ್ಲ. ಇನ್ನು, ದಿನಪತ್ರಿಕೆಗಳನ್ನು ಕೊಂಡರೂ ಕೂಡಿಟ್ಟು ತೂಕಕ್ಕೆ ಹಾಕುತ್ತಾರೆ, ಅಡುಗೆಮನೆಯ ತ್ಯಾಜ್ಯವನ್ನು ಹಸು-ಎಮ್ಮೆಗಳಿಗೆ, ಇಲ್ಲವೇ ತಿಪ್ಪೆಗೆ ಹಾಕುತ್ತಾರೆ, ಗೊಬ್ಬರವಾಗಿ ಬಳಸುತ್ತಾರೆ. ‘ಛ್ಟಿಟ ಡಿಚಠಠಿಛಿ ಜಛ್ಞಿಛ್ಟಿಚಠಿಜಿಟ್ಞ’ ಅಂದ್ರೆ ಇಷ್ಟೇ! ಒಂದು ವಸ್ತುವಿನ ಉಪಯುಕ್ತತೆ ಆದಮೇಲೂ, ಬೇರೊಂದು ಪ್ರಯೋಜನಕ್ಕೆ ಅದು ಸಂಪನ್ಮೂಲವಾಗುವುದು.

ಕಸದ ಸಮಸ್ಯೆ ಕಂಗಾಲು ಆಗಿಸದಿರಲಿ

1990ರ ಕಾಲಾವಧಿಯಲ್ಲಿ ಬೆಂಗಳೂರಿನಂತೆಯೇ ಅಕ್ಷರಶಃ ಕಸಮಯವಾಗಿದ್ದ ತೈಪೆ ನಗರವಿಂದು, ಕಸ ವಿಲೇವಾರಿ ಬಗ್ಗೆ ಸರ್ಕಾರ ಹಾಗೂ ಜನತೆ ತಳೆದಿರುವ ದೃಢಸಂಕಲ್ಪದಿಂದಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆರಂಭಿಕ ವರ್ಷಗಳಲ್ಲಿ ಈ ಸಂಬಂಧದ ಕಟ್ಟುನಿಟ್ಟು ಜಾರಿಯಾಗುವಾಗ, ‘ಇದು ಬಡವರ ವಿರೋಧಿ ಕಾನೂನು’ ಎಂಬುದಾಗಿ ಅಲ್ಲಿಯೂ ಜನ ವಿರೋಧಿಸಿದರಂತೆ. ಕತ್ತಲಾದ ಬಳಿಕ ರಸ್ತೆಯಲ್ಲಿ, ನದೀತೀರದಲ್ಲಿ ಕಸದಗಂಟು ಎಸೆದುಬಿಡುತ್ತಿದ್ದಂತೆ. ಅಂಥವರಿಗೆ ದಂಡ ವಿಧಿಸುವ, ತಪ್ಪಿತಸ್ಥರನ್ನು ಹಿಡಿದವರಿಗೆ ಬಹುಮಾನ ನೀಡುವ ಮೂಲಕ, ಸರ್ಕಾರ ಜನರಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಢಿಸುವಲ್ಲಿ ಸಫಲವಾಯಿತು. ಕಸದ ವಿಲೇವಾರಿ ಬಗ್ಗೆ ಅಗಾಧ ಪ್ರಚಾರ ಕೊಟ್ಟು, ಜನರ/ಮಕ್ಕಳ ದೃಷ್ಟಿಕೋನ ಬದಲಿಸುವಲ್ಲಿ ಯಶಸ್ವಿಯಾಯಿತು. ಈ ನಿಟ್ಟಿನಲ್ಲಿ ಹೆಜ್ಜೆಹಾಕಿದ ಅಂದಿನ ಮೇಯರ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು. ಒಮ್ಮೆ ಅವರು ಯಾರದೋ ಮದುವೆಗೆ ಹೋಗಿ ‘ಸರ್ಕಾರ ಅನುಮೋದಿಸಿದ ಬಣ್ಣದ ಕಸದ ಕವರ್​ಗಳ ಗುಚ್ಛ’ವನ್ನೇ ಉಡುಗೊರೆಯಾಗಿ ಕೊಟ್ಟು, ಸುದ್ದಿಯನ್ನೂ ಮಾಡಿ, ಕಸದ ವಿಂಗಡಣೆ ಬಗ್ಗೆ ಉತ್ಸಾಹ, ಜಾಗೃತಿ ಮೂಡಿಸಿದರಂತೆ!

ಬೆಂಗಳೂರಿನ ಕಸ ಕೋಲಾರಕ್ಕೇಕೆ?

ತ್ಯಾಜ್ಯ ವಿಂಗಡಣೆ/ನಿರ್ವಹಣೆಯ ವಿಷಯದಲ್ಲಿ ಕೋಲಾರ ಮಾದರಿಯಾಗಿರುವುದು 2014ರಲ್ಲಷ್ಟೇ ಸುದ್ದಿಯಾಗಿತ್ತು. ಈಗ ಆ ಊರಿನಾಚೆ ಬೆಂಗಳೂರಿನ ಕಸ ಕಳಿಸುವ ಚಿಂತನೆ ಖಂಡನಾರ್ಹ. ಒಂದು ದುರಂತದ ಉದಾಹರಣೆ ನೋಡಿ: ಅಮೆರಿಕದ ನಯಾಗರ ಜಲಪಾತದ ಬಳಿ ಜನೋಪಯೋಗವಿಲ್ಲದ ಒಂದು ಕಾಲುವೆ ಪ್ರದೇಶವಿತ್ತು (ಇದಕ್ಕೆ ‘ಲವ್ ಕೆನಾಲ್’ ಎಂದು ಹೆಸರು). ನೆರೆಹೊರೆಯ ಜನತೆ/ಮುನಿಸಿಪಾಲಿಟಿ ಇಲ್ಲಿ ಕಸಹಾಕಲು ಪ್ರಾರಂಭಿಸಿತು. ಕಾಲಾನಂತರದಲ್ಲಿ ಈ ಜಾಗವನ್ನು ಖರೀದಿಸಿದ ರಾಸಾಯನಿಕ ಕಂಪನಿಯೊಂದು, ರಾಸಾಯನಿಕ ತ್ಯಾಜ್ಯವನ್ನು ಹಾಕಿ ಮಣ್ಣು ಮುಚ್ಚಿತಂತೆ, ತರುವಾಯದಲ್ಲಿ ಗಿಡಗಳೂ ಚೆನ್ನಾಗಿ ಬೆಳೆದವಂತೆ. ಆ ನೆಲಭರ್ತಿ ಅಥವಾ ಕಸ ಸುರಿದ ತಾಣದ ಸುತ್ತಲೂ ಮನೆ, ಶಾಲೆಗಳು ಬೆಳೆದವು. ಆದರೆ ಕ್ರಮೇಣ ಅಲ್ಲಿನ ಜನರ ಆರೋಗ್ಯ ಹದಗೆಟ್ಟಿತು. ಗಾಳಿಯಲ್ಲಿ ದುರ್ನಾತ ಪಸರಿಸಲಾರಂಭಿಸಿತು, ‘ಲವ್ ಕೆನಾಲ್’ ಇದ್ದ ಪ್ರದೇಶದಲ್ಲಿ ಕಪ್ಪುದ್ರವ ಒಸರಲಾರಂಭಿಸಿತು. ನಾನಾ ಬಗೆಯ ಕಾಯಿಲೆಗಳು, ಗರ್ಭಪಾತಗಳು ಮತ್ತು ಜನನದೋಷಗಳಿಗೆ ಅಲ್ಲಿನ ಕುಟುಂಬಗಳು ಸಾಕ್ಷಿಯಾದವು. ಇದೊಂದು ‘ಪರಿಸರ ದುರಂತ’ ಎಂದು ಅರ್ಥವಾಗಲು ಅಲ್ಲಿನವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. 1978ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ‘ಆರೋಗ್ಯ ತುರ್ತಸ್ಥಿತಿ’ ಘೊಷಿಸಿದರು. ಅಲ್ಲಿಯತನಕ ನೈಸರ್ಗಿಕ ವಿಪತ್ತುಗಳಿಗೆ ಬಳಸುತ್ತಿದ್ದ ತುರ್ತಹಣವನ್ನು ಈ ಸಮಸ್ಯೆಯ ನಿವಾರಣೆಗೆ ಬಳಸಲಾಯಿತು. ಮಾವಳ್ಳಿಪುರ, ಮಂಡೂರು ಘೊರಚಿತ್ರಣ ನಿಜಕ್ಕೂ ಗಾಬರಿ ಹುಟ್ಟಿಸುವಂಥದ್ದು. ಬೇರೆ ಊರುಗಳು ಇಂಥ ಸಮಸ್ಯೆಯ ಬಲಿಪಶುಗಳಾಗದಿರಲಿ.

’ಖಜ್ಟಛಿಚಠಿಛ್ಞಿಛಿಛ ್ಚಞಞ್ಠ್ಞಠಿಢ ಜಿಠ ಚ ಠಠ್ಟಿಛ್ಞಿಜಠಿಜಛ್ಞಿಛಿಛ ್ಚಞಞ್ಠ್ಞಠಿಢ’ ಎನ್ನುತ್ತಾರೆ ಡಾ. ಪಾಲ್ ಕೊನೆಟ್. ಅದಕ್ಕೇ ಏನೋ ಈಗ ಎಷ್ಟೋ ಜನ ಸ್ವಯಂಪ್ರೇರಣೆಯಿಂದ ಕಸವಿಂಗಡಣೆ ಮಾಡುವ, ಮನೆಯಲ್ಲೇ ಗೊಬ್ಬರ ತಯಾರಿಕೆ ಮಾಡುವ ಸುದ್ದಿಗಳನ್ನು ಓದುತ್ತಿದ್ದೇವೆ. ನಾವು ಕೊಟ್ಟ ಮಿಶ್ರಿತ ಕಸ ಅಥವಾ ವಿಂಗಡಣೆಯಾಗದ ಕಸವು ಸುಡಲ್ಪಟ್ಟು ಎಷ್ಟೋ ಜನ ಉಸಿರಾಟ ಸಂಬಂಧಿ ಸಮಸ್ಯೆ/ಕಾಯಿಲೆಗಳಿಗೆ ಒಳಗಾಗಬಹುದು ಅಥವಾ ಪ್ರಾಣಿ-ಪಕ್ಷಿಗಳು ತಿಂದು ಸಂಕಟಪಡಬಹುದು ಎಂಬ ಚಿಂತನೆ ಜನರ ಮನಸ್ಸಲ್ಲಿ ಬಂದಿದ್ದೇ ಆದಲ್ಲಿ, ಅವರು ಜವಾಬ್ದಾರಿಯುತವಾಗಿ ಕಸ ವಿಂಗಡಣೆ/ವಿಲೇವಾರಿ ಮಾಡುತ್ತಾರೆ. ‘ಪೋಲಿಯೋ ಡ್ರಾಪ್ಸ್ ಹಾಕ್ಸಿದ್ರಾ?’ ಅಂತ ಅಮಿತಾಭ್ ಬಚ್ಚನ್​ರಂಥ ಸೆಲೆಬ್ರೆಟಿಗಳು ಮಾಧ್ಯಮಗಳಲ್ಲಿ ವಿಚಾರಿಸುವಂತೆ, ಕಸವಿಂಗಡಣೆ ಬಗ್ಗೆ ಆಗಿಂದಾಗ್ಗೆ ಜಾಹೀರಾತುಗಳು ಮೂಡಿಬರುತ್ತಿದ್ದರೆ ಜನರನ್ನು ಈ ನಿಟ್ಟಿನಲ್ಲಿ ಉತ್ತೇಜಿಸಿ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಇಷ್ಟು ಮಾತ್ರವಲ್ಲದೆ, ಸರ್ಕಾರವೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರಷ್ಟೇ ನಮ್ಮ ಗಾಳಿ, ನೀರು, ಆಹಾರ, ಭೂಮಿ ಶುದ್ಧವಾಗಿರಲು ಸಾಧ್ಯ.

Leave a Reply

Your email address will not be published. Required fields are marked *

Back To Top