ವಿಶ್ವಕಪ್ ಆಸೆಯನ್ನು ಮತ್ತೆ ಮುಂದೂಡಿದ ಭಾರತ

 ‘45 ನಿಮಿಷಗಳ ಕೆಟ್ಟ ಬ್ಯಾಟಿಂಗ್ ನಮ್ಮನ್ನು ವಿಶ್ವಕಪ್ ಟೂರ್ನಿಯಿಂದ ಹೊರಹಾಕಿತು’ ಎಂದು ವಿರಾಟ್ ಕೊಹ್ಲಿ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹಲವು ಬಾರಿ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ಟೀಮ್ ಇಂಡಿಯಾದ ಮಹಾಬಲಿಷ್ಠ ಅಂಶವಾಗಿದ್ದ ಬ್ಯಾಟಿಂಗ್, ಮ್ಯಾಂಚೆಸ್ಟರ್ ಮರ್ವಘಾತದ ಅತ್ಯಂತ ದುರ್ಬಲ ಕೊಂಡಿ ಎನಿಸಿತು.

ಮಾರ್ಟಿನ್ ಗುಪ್ಟಿಲ್ ಎಸೆದ ಒಂದು ನಿಖರ ಥ್ರೋ, ಭಾರತದ 3ನೇ ವಿಶ್ವಕಪ್ ಗೆಲುವಿನ ಆಸೆಯನ್ನು ಮತ್ತೆ ನಾಲ್ಕು ವರ್ಷಕ್ಕೆ ಮುಂದೂಡಿದೆ. ಎಂಎಸ್ ಧೋನಿ ಇನ್ನೊಂಚೂರು ಪ್ರಯತ್ನ ಪಟ್ಟಿದ್ದರೆ, ಕನಿಷ್ಠ ಪಕ್ಷ ಡೈವ್ ಮಾಡಿದ್ದರೆ, ಭಾರತಕ್ಕೆ ಜಯದ ಎಲ್ಲ ಅವಕಾಶಗಳಿದ್ದವು. ಇನ್ನೂ ಹಾಗಿದ್ದವು, ಹೀಗಿದ್ದವು ಎಂದೀಗ ಚರ್ಚೆ ಮಾಡಬಹುದು. ಧೋನಿ ಇನಿಂಗ್ಸ್ ನಿಧಾನಗತಿಯದ್ದಾಗಿದ್ದರೂ, ಭಾರತದ ಹೋರಾಟವನ್ನು ಕೊನೇವರೆಗೂ ಉಳಿಸಿದ್ದಂಥ ಇನಿಂಗ್ಸ್ ಅದಾಗಿತ್ತು. ಹಾಗಾಗಿ ಈ ಸೋಲಿನ ದೂಷಣೆಯನ್ನು ಧೋನಿ ತಲೆಗೆ ಕಟ್ಟುವುದು ತಪ್ಪಾಗುತ್ತದೆ.

71 ರನ್​ಗೆ 5 ವಿಕೆಟ್ ನಂತರ 96 ರನ್​ಗೆ 6 ವಿಕೆಟ್ ಹಂತದಲ್ಲಿ ಭಾರತದ ಇನಿಂಗ್ಸ್ ಕುಸಿಯದಂತೆ ಕಾಪಾಡುವ ಕೈಗಳ ಅಗತ್ಯವಿತ್ತು. ಧೋನಿ ಅದನ್ನು ಸಮರ್ಥವಾಗಿ ನಿಭಾಯಿಸಿದರು. ಜಡೇಜಾರ 59 ಎಸೆತಗಳ 77 ರನ್ ಇನಿಂಗ್ಸ್ ಹೊರತಾಗಿಯೂ, ಜಡೇಜಾ ಔಟಾದ ಬೆನ್ನಲ್ಲಿಯೇ ಓವರ್​ಗೆ 15 ರನ್ ಪೇರಿಸುವ ಸವಾಲು ಭಾರತದ ಮುಂದಿತ್ತು. 116 ರನ್​ಗಳ ಜತೆಯಾಟದಲ್ಲಿ ಧೋನಿ ಪಾಲು 45 ಎಸೆತಗಳಲ್ಲಿ 32 ರನ್. ಇದರಲ್ಲಿ 20 ಎಸೆತಗಳು ಡಾಟ್ ಬಾಲ್ ಎಂದು ಲೆಕ್ಕಹಾಕಬಹುದಾದರೂ, ಅಂಥದ್ದೊಂದು ಇನಿಂಗ್ಸ್ ಧೋನಿ ಆಡದೇ ಇದ್ದಿದ್ದರೆ, ಭಾರತದ ಚೇಸಿಂಗ್ ಎಂದೋ ಮುಕ್ತಾಯವಾಗುತ್ತಿತ್ತು. ಕಡೇ ಪಕ್ಷ ವಿಶ್ವಕಪ್​ನ ತಮ್ಮ ಕೊನೇ ಇನಿಂಗ್ಸ್​ನಲ್ಲಿ ಧೋನಿ ಇಡೀ ಭಾರತದ ಕನಸುಗಳನ್ನು ಕೊನೇ ಹಂತದವರೆಗೂ ಜೀವಂತವಾಗಿಡುವ ಕೆಲಸವನ್ನು ನಿಸ್ಸಂಶಯವಾಗಿ ಮಾಡಿದ್ದರು.

 ಪ್ಲ್ಯಾನ್​  ಬಿ ಕೊರತೆ

ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಸೋಲಿನಲ್ಲಿ ಕಾಣಿಸಿದ್ದ ಬಹುದೊಂಡ ಅಂಶವೇನೆಂದರೆ, ಪ್ಲಾ್ಯನ್ ಬಿ ಕೊರತೆ. ಹಾಗೇನಾದರೂ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಆರಂಭದಲ್ಲಿಯೇ ಅಲ್ಪ ಮೊತ್ತಕ್ಕೆ ಔಟಾದಲ್ಲಿ ತಂಡ ಹೇಗೆ ಚೇಸಿಂಗ್ ಮಾಡಬೇಕು ಎನ್ನುವ ಬ್ಯಾಕ್​ಅಪ್ ಯೋಜನೆ ತಂಡದಲ್ಲಿ ಇದ್ದಂತೆ ಕಾಣಿಸಲಿಲ್ಲ. ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಆಡುವ ವೇಳೆಯಲ್ಲಿ ಒಬ್ಬ ಅನುಭವಿ ಆಟಗಾರ ಇನ್ನೊಂದು ತುದಿಯಲ್ಲಿ ಇರಬೇಕಿತ್ತು ಎಂದು ಸೌರವ್ ಗಂಗೂಲಿ ಹೇಳಿರುವ ಹಿಂದಿನ ಕಾರಣವೂ ಇದೆ. ಧೋನಿ ತಮ್ಮ ಸಲಹೆಗಳಿಂದಲೇ ರವೀಂದ್ರ ಜಡೇಜಾರಿಂದ ದೊಡ್ಡ ಇನಿಂಗ್ಸ್ ಹೊರತಂದಿದ್ದರು. ಇದೇ ಅವಕಾಶ ಕೇವಲ 8 ಏಕದಿನ ಪಂದ್ಯವಾಡಿರುವ ರಿಷಭ್ ಪಂತ್ ಹಾಗೂ ಪ್ರಬಲ ಆಲ್ರೌಂಡರ್ ಆಗಿ ರೂಪುಗೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯಗೆ ಲಭಿಸಿದ್ದರೆ, ಭಾರತಕ್ಕೆ ಗೆಲುವಿನ ಎಲ್ಲ ಅವಕಾಶಗಳು ಇರುತ್ತಿದ್ದವು. ಅದರೊಂದಿಗೆ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಕೊನೆಗೂ ಭಾರತಕ್ಕೆ ಪ್ರಶ್ನಾರ್ಥಕವಾಗಿಯೇ ಉಳಿದುಕೊಂಡಿತು. ಶಿಖರ್ ಧವನ್​ರ ಆರಂಭಿಕ ಸ್ಥಾನವನ್ನು ತುಂಬಲು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿದ್ದ ಕೆಎಲ್ ರಾಹುಲ್ ಅಗ್ರ ಕ್ರಮಾಂಕಕ್ಕೆ ಜಿಗಿದರೆ, ನಾಲ್ಕನೇ ಕ್ರಮಾಂಕದ ಲೋಪ ಹಾಗೆಯೇ ಉಳಿದುಕೊಂಡಿತು. ಇದು ತೀರಾ ಪ್ರಮುಖ ಪಂದ್ಯದಲ್ಲಿ ಭಾರತದ ಸೋಲಿಗೂ ಕಾರಣವಾಯಿತು.

ಪಾಠ ಕಲಿಯಲಿಲ್ಲ

ಒಟ್ಟಾರೆ ಈ ಸೋಲಿನಿಂದ ತಿಳಿದ ಪ್ರಮುಖ ಅಂಶವೇನೆಂದರೆ, ಭಾರತ ತಂಡ ಹಿಂದಿನ ಸೋಲುಗಳಿಂದ ಏನನ್ನೂ ಕಲಿಯುವುದಿಲ್ಲ ಎನ್ನುವುದು. 2015ರ ವಿಶ್ವಕಪ್ ಟೂರ್ನಿಯಲ್ಲೂ ಭಾರತದ ಅಭಿಯಾನ ಹೆಚ್ಚೂ ಕಡಿಮೆ ಇದೇ ರೀತಿ ಸಾಗಿತ್ತು. ಸೆಮಿಫೈನಲ್​ವರೆಗೂ ಅಜೇಯವಾಗಿದ್ದ ಭಾರತ, ಉಪಾಂತ್ಯ ಕದನದಲ್ಲಿ ಕೊನೆಗೆ ಚಾಂಪಿಯನ್ ಪಟ್ಟವೇರಿದ ಆಸ್ಟ್ರೇಲಿಯಾಗೆ ಶರಣಾಗಿತ್ತು. ಈ ಬಾರಿ ಒಂದೇ ಸೋಲಿನೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಆಡಲಿಳಿದ ಭಾರತ ಮತ್ತೊಮ್ಮೆ ನಿರಾಸೆ ಕಂಡಿತು. ಇದರ ನಡುವೆ ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಫೈನಲ್​ನಲ್ಲಿ ಭಾರತ ಸೋಲು ಕಂಡಿತ್ತು. ಈ ಮೂರು ಸೋಲುಗಳಲ್ಲಿ ಸಾಮಾನ್ಯ ಅಂಶವೇನೆಂದರೆ, ಭಾರತದ ಅಗ್ರ ಮೂರು ಆಟಗಾರರ ವೈಫಲ್ಯ. ಆ ಬಳಿಕ ಮಧ್ಯಮ ಕ್ರಮಾಂಕ ಒತ್ತಡವನ್ನು ನಿಭಾಯಿಸುವಲ್ಲಿ ಎಡವಿ ಸೋಲು ಕಂಡಿರುವುದು. ಈ ಮೂರು ಟೂರ್ನಿಗಳಲ್ಲಿ ಭಾರತದ ಅಗ್ರ ಮೂರು ಬ್ಯಾಟಿಂಗ್ ಕ್ರಮಾಂಕ 73ರ ಸರಾಸರಿಯಲ್ಲಿ 3378 ರನ್ ಕೂಡಿ ಹಾಕಿದೆ. ಆದರೆ, ತಂಡಕ್ಕೆ ಅಗತ್ಯವಾಗಿದ್ದ ಈ ಮೂರು ಪಂದ್ಯಗಳ ಗೆಲುವಿನ ವೇಳೆ ಅಗ್ರ 3 ಬ್ಯಾಟಿಂಗ್ ಕ್ರಮಾಂಕ 12.1 ರ ಸರಾಸರಿಯಲ್ಲಿ ಕೇವಲ 109 ರನ್ ಕಲೆ ಹಾಕಿದೆ. 2015ರ ವಿಶ್ವಕಪ್ ಸೆಮಿಫೈನಲ್​ನಲ್ಲಿ 328 ರನ್ ಬೆನ್ನಟ್ಟಬೇಕಿದ್ದ ವೇಳೆ, 15 ರನ್​ಗಳ ಒಳಗಾಗಿ ಶಿಖರ್ ಧವನ್, ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದರು. ಚಾಂಪಿಯನ್ಸ್ ಟ್ರೋಫಿ ಫೈನಲ್​ನ 3ನೇ ಓವರ್​ನ ಒಳಗೆ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಔಟಾಗಿದ್ದರೆ, ಅದಾದ ಐದು ಓವರ್​ಗಳ ಬಳಿಕ ಧವನ್ ಕೂಡ ಔಟಾಗಿದ್ದರಿಂದ ಭಾರತ 33 ರನ್​ಗೆ 3 ವಿಕೆಟ್ ಕಳೆದುಕೊಂಡಿತ್ತು. ಈಗ ವಿಶ್ವಕಪ್ ಸೆಮಿಫೈನಲ್​ನಲ್ಲಿ ಈ ಮೂವರಿಂದ ಬಂದ ಕಾಣಿಕೆ ಕೇವಲ 3 ರನ್. ರನ್ ಚೇಸಿಂಗ್​ನಲ್ಲಿ ಕೊಹ್ಲಿ ಕಿಂಗ್ ಎನಿಸಿಕೊಳ್ಳುತ್ತಾರಾದರೂ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಆಡಿದ ಬಹುದೊಡ್ಡ ಮುಖಾಮುಖಿಯಲ್ಲಿ ಅವರ ಕಾಣಿಕೆ 5, 1 ಹಾಗೂ 1 ರನ್. ತಪು್ಪಗಳನ್ನು ತಿದ್ದಿಕೊಂಡು ಇನ್ನೊಂದು ವರ್ಷದಲ್ಲಿ ಟಿ20 ವಿಶ್ವಕಪ್​ಗೆ ತಂಡ ಸಿದ್ಧವಾಗಬೇಕಿದೆ.

ರಿಷಭ್ ಪಂತ್ ಕಲಿತುಕೊಳ್ತಾರೆ ಎಂದ ಕೊಹ್ಲಿ

ರಿಷಭ್ ಪಂತ್ ಪ್ರಮುಖ ಸಂದರ್ಭದಲ್ಲಿ ಕೆಟ್ಟ ಶಾಟ್ ಬಾರಿಸಿ ಔಟಾದ ಬಗ್ಗೆ ಮಾತನಾಡಿದ ಕೊಹ್ಲಿ, ‘ಕ್ರಿಕೆಟ್ ಜೀವನದ ಆರಂಭಿಕ ದಿನಗಳಲ್ಲಿ ನಾನೂ ಇದೇ ರೀತಿಯ ತಪು್ಪಗಳನ್ನು ಮಾಡಿದ್ದೆ. ಅನುಭವ ಆದಂತೆ ಕಲಿತುಕೊಂಡೆ. ರಿಷಭ್ ಕೂಡ ಕಲಿತುಕೊಳ್ಳುತ್ತಾರೆ. ಆತ ಇನ್ನೂ ಯುವ ಆಟಗಾರ. ಮುಂದೊಂದು ದಿನ ಆತ ಕೂಡ ತಾನು ಮಾಡಿದ ತಪು್ಪಗಳನ್ನು ಹಿಂತಿರುಗಿ ನೋಡಿದಾಗ, ಆಗ ಹಾಗೆ ಆಡಬಾರದಿತ್ತು ಎಂದುಕೊಳ್ಳುತ್ತಾನೆ. ಈಗಾಗಲೇ ಪಂತ್​ಗೆ ಆ ಯೋಚನೆಯೂ ಬಂದಿರಬಹುದು’ ಎಂದು ಹೇಳುವ ಮೂಲಕ ಪಂತ್ ಪರವಾಗಿ ನಿಂತರು. ಪಂತ್ ಅದ್ಭುತ ಆಟಗಾರ. 3 ಪ್ರಮುಖ ವಿಕೆಟ್ ಬೇಗ ಉರುಳಿದ ಬಳಿಕ, ಹಾರ್ದಿಕ್ ಪಾಂಡ್ಯ ಜತೆಗೂಡಿ ಅವರು ಆಡಿದ ಅಲ್ಪ ರನ್​ಗಳ ಜತೆಯಾಟ ಉತ್ತಮವಾಗಿತ್ತು ಎಂದರು.

ಆಯ್ಕೆ ಸಮಿತಿಯ ಮೇಲೆ ದಾದಾ ಕಿಡಿ

ಕಳೆದ ಒಂದೂವರೆ ವರ್ಷದಲ್ಲಿ ಆಯ್ಕೆ ಸಮಿತಿ ಮಾಡಿದ ಅತಿದೊಡ್ಡ ಪ್ರಮಾದ ಏನೆಂದರೆ, ಸೂಕ್ತ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಅನ್ನು ಗುರುತಿಸಲು ವಿಫಲವಾಗಿರುವುದು ಎಂದು ಗಂಗೂಲಿ ಹೇಳಿದರು. ಎಲ್ಲ ಪಂದ್ಯಗಳನ್ನೂ ರೋಹಿತ್, ವಿರಾಟ್ ಆಡಬೇಕು ಎಂದರೆ ಸಾಧ್ಯವಿಲ್ಲ. ಶಿಖರ್ ಧವನ್ ಮರಳಿದ ಬಳಿಕ, ಕೆಎಲ್ ರಾಹುಲ್ 3ನೇ ಕ್ರಮಾಂಕ, ಕೊಹ್ಲಿ 4 ಹಾಗೂ ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಆಡಬೇಕು ಎಂದು ಅಭಿಪ್ರಾಯಪಟ್ಟರು.

ಧೋನಿ ಹಿಂಬಡ್ತಿ ಎಡವಟ್ಟು

ಮ್ಯಾಂಚೆಸ್ಟರ್: ಭಾರತದ ಸೋಲಿಗೆ ಒಂದೊಂದು ಕಾರಣಗಳು ಸಿಗುತ್ತಿದ್ದು, ಅನುಭವಿ ಧೋನಿಯನ್ನು ಕೆಳ ಕ್ರಮಾಂಕದಲ್ಲಿ (7ನೇ ಕ್ರಮಾಂಕ) ಬ್ಯಾಟಿಂಗ್​ಗೆ

ಕಳಿಸಿದ್ದೇ ತಂಡದ ತಂತ್ರಗಾರಿಕೆಯ ದೊಡ್ಡ ತಪು್ಪ ಎಂದು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಧೋನಿಗಿಂತ ಮೇಲಿನ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಆಡಿದರೂ ತಂಡಕ್ಕೆ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ‘ಪಾಂಡ್ಯಗಿಂತ ಮೇಲಿನ ಸ್ಥಾನದಲ್ಲಿ ಧೋನಿ ಬರಬೇಕಿತ್ತು. ಇದು ತಂತ್ರಗಾರಿಕೆಯ ವೈಫಲ್ಯ. ದಿನೇಶ್ ಕಾರ್ತಿಕ್​ರ ಸ್ಥಾನದಲ್ಲೂ ಧೋನಿ ಆಡಬಹುದಿತ್ತು. ಬಹುಶಃ ಇಂಥ ಸ್ಥಿತಿಗಳೇ ಧೋನಿ ಆಡಲು ವೇದಿಕೆಯಾಗಿತ್ತು. 2011ರ ಫೈನಲ್​ನಲ್ಲೂ ಸ್ವತಃ ತಾವೇ ಬಡ್ತಿ ಪಡೆದುಕೊಂಡು ಆಡಿದ್ದರು. ಕೊನೆಗೆ ಯುವರಾಜ್ ಜತೆಗೂಡಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು’ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ‘ಮೊದಲ 3 ವಿಕೆಟ್ ಉರುಳಿದಾಗ ಕ್ರೀಸ್​ನಲ್ಲಿ ಒಬ್ಬ ಅನುಭವಿ ಆಟಗಾರ ಇರಬೇಕಿತ್ತು. ಪಂತ್ ಆಡುವ ವೇಳೆ ಧೋನಿ ಕ್ರೀಸ್​ನಲ್ಲಿ ಇದ್ದಿದ್ದರೆ, ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಆ ಶಾಟ್ ಆಡಲು ಬಿಡುತ್ತಿರಲಿಲ್ಲ’ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ‘ಹಾರ್ದಿಕ್ ಪಾಂಡ್ಯರ ಸ್ಥಾನದಲ್ಲಿ ಧೋನಿ ಬಂದಿದ್ದರೆ, ಎಲ್ಲವೂ ಸರಿಯಾಗುತ್ತಿತ್ತು’ ಎಂದು ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

 

| ಸಂತೋಷ್ ನಾಯ್ಕ್​,  ಬೆಂಗಳೂರು

 

Leave a Reply

Your email address will not be published. Required fields are marked *