ವಿಶೇಷ ಮಕ್ಕಳನ್ನು ಕಾಳಜಿಯಿಂದ ಕಾಣೋಣ…

ಮಗುವಿನ ಮುಗ್ಧ ನಗು, ಮನೋಹರವಾದ ನೋಟವನ್ನು ನಾನು ಮರೆಯಲು ಸಾಧ್ಯವಿಲ್ಲ. ಬಾಲ್ಯದ ತುಂಟಾಟ, ಉತ್ಸಾಹಗಳೆಲ್ಲ ಅವನಲ್ಲಿ ತುಂಬಿ ತುಳುಕುತ್ತಿದ್ದವು. ಬೂದುಬಣ್ಣದ ಶರ್ಟ್ ಧರಿಸಿದ್ದ ಆತ ಹವಾಯಿ ಚಪ್ಪಲಿ ಹಾಕಿಕೊಂಡು ಅತ್ತಂದಿತ್ತ ಲಗುಬಗೆಯಿಂದ ಓಡಾಡಿಕೊಂಡಿದ್ದ. ‘ಹೆಸರೇನು ಮಗು?’ ಎಂದಾಗ ಮಾಧವನ್ ಎಂದ. ಮುದ್ದಾದ ಹೆಸರಿನ ಈ ಹುಡುಗನ ತಂದೆ ನಂಬೂದರಿ. ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಅಷ್ಟೇ ಅಲ್ಲ ನಿವೃತ್ತ ಉಪ ಜಿಲ್ಲಾಧಿಕಾರಿ. ಮಾಧವನ್ ಎಲ್ಲರಂತೆ ಶಾಲೆಗೆ ಹೋಗಲು ಬಯಸಿದ್ದ. ಚೆನ್ನಾಗಿ ಓದುವ ಇಚ್ಛೆ ಹೊಂದಿದ್ದ. ನೋಡಲು ಇತರೆ ಸಾಮಾನ್ಯ ಮಕ್ಕಳಂತೆ ಕಾಣುತ್ತಿದ್ದ ಈತ ತನ್ನ ಲವಲವಿಕೆಯಿಂದ ಗಮನ ಸೆಳೆಯುತ್ತಿದ್ದ. ಹಾಗಂತ ಅವನು ಶಾಲೆ ಮೆಟ್ಟಿಲು ಹತ್ತದವನೇನಲ್ಲ. ಇತರೆ ಮಕ್ಕಳಂತೆ ಶಾಲೆ, ಆಟೋಟ ಎಲ್ಲ ಆತನ ದಿನಚರಿಯ ಪ್ರಮುಖ ಭಾಗವಾಗಿತ್ತು. ಮಾಧವನ್ 3-4ನೇ ತರಗತಿಗೆ ಬರುತ್ತಿದ್ದಂತೆ ಆತನ ಅಧ್ಯಾಪಕರು ‘ಈತ ಲರ್ನಿಂಗ್ ಡಿಸೇಬಿಲಿಟಿ (Learning disability) ಯಿಂದ ಬಳಲುತ್ತಿದ್ದಾನೆ, ಸಾಮಾನ್ಯ ಮಕ್ಕಳ ಜತೆ ಈತ ಓದು ಮುಂದುವರಿಸಲು ಸಾಧ್ಯವಿಲ್ಲ’ ಎಂದುಬಿಟ್ಟರು! ಲೆಕ್ಕದಲ್ಲಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಆತನಿಗೆ ಕಠಿಣವಲ್ಲ ಅಸಾಧ್ಯ ಎಂಬಂತೆ ಆಗಿದ್ದವು.

ಆತ ಓದುತ್ತಿದ್ದ ಶಾಲೆ ಆ ಊರಿನ ಪ್ರತಿಷ್ಠಿತ ಹಾಗೂ ದೊಡ್ಡ ಶಾಲೆಯಾಗಿತ್ತು. ಆದರೆ, ಯಾರೊಬ್ಬ ಶಿಕ್ಷಕರೂ ಈ ಮಗುವಿನ ಸಮಸ್ಯೆ ಅರಿಯುವ, ಅವನ ಸಹಾಯಕ್ಕೆ ನಿಲ್ಲುವ ಗೋಜಿಗೆ ಹೋಗಲಿಲ್ಲ. ಮಾಧವನ್ ಡಿಸ್​ಲೆಕ್ಸಿಯಾದಿಂದ ಬಳಲುತ್ತಿದ್ದ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ರಜ್ಜು ಭೈಯ್ಯಾ (ರಾಜೇಂದ್ರ ಸಿಂಗ್) ಅವರೊಡನೆ ಹಿಂದೊಮ್ಮೆ ಕೇರಳಕ್ಕೆ ಹೋಗಿದ್ದಾಗ ಆಯುರ್ವೆದ ಚಿಕಿತ್ಸಾ ಪದ್ಧತಿಯಲ್ಲಿ ತುಂಬ ಹೆಸರು ಮಾಡಿರುವ ತ್ರಿಶೂರ್ ಜಿಲ್ಲೆಯ ವಿವಿಧೆಡೆ ನಮ್ಮ ಪ್ರವಾಸವಿತ್ತು. ಹಾಗೇ ತಾಯಿಕಟ್ಟುಶೇರಿ ಎಂಬ ಗ್ರಾಮಕ್ಕೆ ಭೇಟಿ ಕೊಟ್ಟಾಗ ಮಾಧವನ್ ಹಾಗೂ ಅವನ ತಂದೆ ನಂಬೂದರಿ ಭೇಟಿಯಾಗಿದ್ದರು.

ಡಿಸ್​ಲೆಕ್ಸೀಯಾ ಸಮಸ್ಯೆಗೆ ಶಿಕ್ಷಕರೇ ಪರಿಹಾರ ಒದಗಿಸಬಹುದು. ಆದರೆ, ಬಿ.ಎ. ಬಿ.ಎಡ್​ನ ನಮ್ಮ ಇಂದಿನ ಶಿಕ್ಷಣಕ್ರಮ ‘ನಾಮ್ ಕೇ ವಾಸ್ತೆ’ ಶಿಕ್ಷಕರನ್ನು ಉತ್ಪಾದಿಸುತ್ತಿದೆ. ಹಾಗಾಗಿ, ಮಗುವಿನ ಸಣ್ಣ ಕೊರತೆ, ದೌರ್ಬಲ್ಯವನ್ನೂ ನಿವಾರಿಸುವ ಶಕ್ತಿ ಈ ಶಿಕ್ಷಕರಲ್ಲಿಲ್ಲ. ಆಟೋಟದಲ್ಲಿ ಮುಂದಿದ್ದ, ವಿಷಯಗಳ ಗ್ರಹಿಕೆಯಲ್ಲಿ ಚುರುಕಾಗಿದ್ದ ಮಾಧವನ್​ಗೆ ಸೂಕ್ತ ಮಾರ್ಗದರ್ಶನ ನೀಡಿ, ಶೈಕ್ಷಣಿಕವಾಗಿಯೂ ಉತ್ತಮಗೊಳಿಸುವ ಅವಕಾಶಗಳು ಶಿಕ್ಷಕರ ಮುಂದೆ ಇದ್ದವು. ಆದರೆ, ಯಾರೂ ಹಾಗೆ ಮಾಡಲಿಲ್ಲ. ಅವರೆಲ್ಲ ಇದೊಂದು ‘ವಿಚಿತ್ರ ಸಮಸ್ಯೆ’ ಎಂದು ಭಾವಿಸಿದ್ದರು. ಆದ್ದರಿಂದ, ಮಾಧವನ್ ಪಾಲಿಗೆ ಯಾವುದೇ ಶಾಲೆಗಳೂ ಇರಲಿಲ್ಲ. ಇದರಿಂದ ಆತನ ತಂದೆ ಧೃತಿಗೆಟ್ಟಿದ್ದು ಸ್ವಾಭಾವಿಕವೇ ಆಗಿತ್ತು. ಆದರೆ, ಆ ಹುಡುಗನ ಮನೆಯವರಿಗೂ ಈತನ ಸಮಸ್ಯೆ ಏನೆಂಬುದು ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಮಾಧವನ್ ಬೇಕೆಂದೇ ಓದಿನಲ್ಲಿ ಉದಾಸೀನ ತಳೆಯುತ್ತಿದ್ದಾನೆ ಎಂದು ಭಾವಿಸಿ ತಂದೆ ಹಾಗೂ ಆತನ ತಂಗಿ ‘ಚೆನ್ನಾಗಿ ಓದುವಂತೆ’ ಅವನ ಮೇಲೆ ಒತ್ತಡ ಹೇರಿದ್ದರು. ಒಂದೇ ಸಂಗತಿ-ವಿಷಯ ಮತ್ತೆ ಮತ್ತೆ ಓದಿ ಮನನ ಮಾಡಿಕೊಂಡು, ಬಳಿಕ ಅರ್ಥಮಾಡಿ ಕೊಂಡಾನು. ಹೇಗಾದರೂ ಮಾಡಿ ಆತ ಚೆನ್ನಾಗಿ ಓದಲೇ ಬೇಕು. ಎಂಟನೇ ತರಗತಿವರೆಗೆ ಹೇಗೂ ಮೇಷ್ಟ್ರು ಪಾಸು ಮಾಡಿಬಿಡುತ್ತಾರೆ. ಆಮೇಲೆ, ಆತನಿಗೆ ಮೂರನೇ ತರಗತಿಯ ಪುಸ್ತಕವೂ ಓದಲು ಬರದಿದ್ದರೆ? ಜನ ‘ಹಿರಿಯ ಸರ್ಕಾರಿ ಅಧಿಕಾರಿಯ ಮಗನಿಗೆ ಓದಲು ಆಗುತ್ತಿಲ್ಲ’ ಎಂದು ಮಾತಾಡಿಕೊಳ್ಳುತ್ತಾರೆ, ಗೇಲಿ ಮಾಡುತ್ತಾರೆ. ಇದನ್ನೆಲ್ಲ ಹೇಗೆ ಸಹಿಸಲಿ? ಈ ನೋವು ಯಾರಿಗೆ ಹೇಳಲಿ ಎಂಬ ಸಂಕಟ ನಂಬೂದರಿಯವರದ್ದು.

ಮನೆಯಲ್ಲಿ ಈ ಹುಡುಗ ತಿಂಡಿ ತಿನ್ನುತ್ತಿದ್ದರೆ ಪ್ಲೇಟಿನಾಚೆ ಚೆಲ್ಲುತ್ತಿದ್ದ, ರಸಂ ಶರ್ಟ್ ಮೇಲೆ ಚೆಲ್ಲಿಕೊಳ್ಳುತ್ತಿದ್ದ. ಯಾರಾದರೂ ಅತಿಥಿಗಳು ಬಂದಾಗ ಹೀಗೆ ಆಗಿಬಿಟ್ಟರೆ ತಂದೆ-ತಾಯಿ ಭಾರಿ ಮುಜುಗರ ಪಟ್ಟುಕೊಳ್ಳುವವರು. ಹಾಗಾಗಿ, ಯಾರಾದರೂ ಅತಿಥಿಗಳು ಮನೆಗೆ ಬರುತ್ತಾರೆಂದರೆ ಮೊದಲೇ ಮಾಧವನ್ ತಿಂಡಿಯನ್ನು ಮುಗಿಸುತ್ತಿದ್ದರು. ಇಲ್ಲವಾದಲ್ಲಿ ತಂಗಿ ರಮಾಳನ್ನು ಇವನ ಜತೆ ಕೂಡಿಸುತ್ತಿದ್ದರು. ಮುಂದೆ ಇದೆಲ್ಲ ಮಾಧವನ್​ಗೆ ಅರ್ಥವಾಗತೊಡಗಿತು. ಹಾಗಾಗಿ, ಮನೆಗೆ ಯಾರೇ ಬಂದರೂ ಅವರಿಂದ ದೂರವಿರಲು ಬಯಸುತ್ತಿದ್ದ. ಆದ್ದರಿಂದ ಏನಾದರೂ ನೆಪ ಮಾಡಿ ಮನೆಯಿಂದಾಚೆ ಹೋಗಿಬಿಡುತ್ತಿದ್ದ. ನಿಧಾನಕ್ಕೆ ಆತನ ಸ್ವಭಾವ, ವರ್ತನೆಯೂ ಬದಲಾಯಿತು. ಸಿಟ್ಟು, ಕಿರಿಕಿರಿ, ಹಠಮಾರಿತನ ಅವನ ಗುರುತಾಗಿಬಿಟ್ಟವು! ತಂದೆ-ತಾಯಿ ತಂಗಿ ಮೇಲೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರು. ಆಕೆ ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು, ಪ್ರೀತಿಯನ್ನೂ ಸುರಿಸುತ್ತಿದ್ದರು. ಆದರೆ, ತಾನು ಚಿಕ್ಕ ಬೇಡಿಕೆ ಇಟ್ಟರೂ ಅದನ್ನು ‘ವ್ಯರ್ಥ ಖರ್ಚು’ ಎಂದ್ಹೇಳಿ ತಂದೆ-ತಾಯಿ ಸಾಗಿಹಾಕಿಬಿಡುತ್ತಾರೆ ಎನ್ನುವ ಕೊರಗು, ಸಂಕಟ ಮಾಧವನ್​ದ್ದು. ಹಾಗಾಗಿ, ಆತ ಒಳಗೊಳಗೇ ಕುಗ್ಗತೊಡಗಿದ, ತನ್ನ ಜಗತ್ತಿನಲ್ಲೇ ಇರತೊಡಗಿದ. ಇದು ತಂದೆಗೆ ಅರ್ಥವಾಗುತ್ತಿದ್ದರೂ ಏನೂ ಮಾಡಲಾರದೆ ಸುಮ್ಮನಿದ್ದರು. ಅವನ ಜೀವನೋಪಾಯಕ್ಕಾಗಿ ಸಣ್ಣ ಅಂಗಡಿ ಹಾಕಿಕೊಡಲು ಯೋಚಿಸಿದರು. ಆದರೆ, ಅಂಗಡಿ ಹಾಕಿಕೊಟ್ಟರೆ ಲೆಕ್ಕಪತ್ರ ಹೇಗೆ ಮಾಡುತ್ತಾನೆ ಎಂಬ ಪ್ರಶ್ನೆ ತಲೆದೋರಿತು. ಅಂಗಡಿ ತೆಗೆದು ಲೆಕ್ಕಪತ್ರಕ್ಕಾಗಿ ಒಬ್ಬ ವಿಶ್ವಾಸಿಗನನ್ನು ಕೆಲಸಕ್ಕೆ ಇರಿಸಿಕೊಂಡರಾಯಿತು ಎಂದು ಯೋಚಿಸಿದರು. ಅತ್ತ ರಮಾಳನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳುಹಿಸುವ ತಯಾರಿ ನಡೆದಿತ್ತು. ಇದನ್ನು ಕಂಡು ಮಾಧವನ್ ಸಂಕೋಚದಿಂದಲೇ ‘ನಾನೂ ಕಾಲೇಜಿಗೆ ಹೋಗುತ್ತೇನೆ’ ಎಂದು ತಾಯಿ ಬಳಿ ಹೇಳಿದಾಗ ಏನು ಹೇಳಬೇಕು ಎಂದು ಅವರಿಗೆ ತೋಚದಂತಾಯಿತು. ಮಾಧವನ್ ಏನು ಮಾಡುತ್ತಾನೆ? ಎಲ್ಲಿಗೆ ಹೋಗುತ್ತಾನೆ? ನಾವಿಬ್ಬರು ಇರೋವರೆಗೆ ಸರಿ. ಆ ಬಳಿಕ ಈತನನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ತಂದೆ-ತಾಯಿಯನ್ನು ಕಾಡತೊಡಗಿತು.

ಈ ಪ್ರಕರಣ ಸ್ವಲ್ಪ ದೀರ್ಘವಾಗಿ ವಿವರಿಸಲು ಕಾರಣವಿದೆ. ಏಕೆಂದರೆ, ಇದು ಕೇವಲ ಮಾಧವನ್ ಹಾಗೂ ಆತನ ತಂದೆ-ತಾಯಿ ಕತೆ, ಕೊರಗಲ್ಲ. ಇಡೀ ದೇಶದಲ್ಲಿ ಇಂಥ 4 ಕೋಟಿ ಮಕ್ಕಳಿದ್ದಾರೆ. ಡಿಸ್​ಲೆಕ್ಸಿಯಾ ಸೇರಿದಂತೆ ಬಹುವಿಧ ಅಂಗಾಂಗ ನ್ಯೂನತೆ, ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ. ಆದರೆ, ವಿಪರ್ಯಾಸ ನೋಡಿ. ಈವರೆಗೆ ಒಂದೇಒಂದು ರಾಜಕೀಯ ಪಕ್ಷ ಇಂಥ ಮಕ್ಕಳ ಅಭಿವೃದ್ಧಿ ನಮ್ಮ ಆದ್ಯತೆ, ಈ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತೇವೆ ಎಂಬ ಸಾಲನ್ನು ಪ್ರಣಾಳಿಕೆಯಲ್ಲಿ ಸೇರಿಸಿಲ್ಲ, ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿಲ್ಲ. ಈ ಮಕ್ಕಳಿಗೆ ಶಾಲೆಗಳ ಕೊರತೆ ಇದೆ. ಅದಕ್ಕಿಂತಲೂ ಹೆಚ್ಚು ಪ್ರೀತಿ ಮತ್ತು ಕಾಳಜಿಯ ಕೊರತೆಯಿದೆ. ದೇಶದ ಬೇರೆಲ್ಲ ಭಾಗಗಳು ಬಿಡಿ ರಾಜಧಾನಿ ದೆಹಲಿಯಲ್ಲೇ ಹೇಳಿಕೊಳ್ಳುವಂಥ ಶಾಲೆ ಇಂಥ ಮಕ್ಕಳ ಪಾಲಿಗಿಲ್ಲ. ಇತರೆ ಮಕ್ಕಳ ಜತೆಗೇ ಈ ವಿಶೇಷ ಮಕ್ಕಳಿಗೆ ಶಿಕ್ಷಣ ಕೊಡುವಂಥ ಕ್ರಮ, ಸೌಲಭ್ಯ ನಮ್ಮಲ್ಲಿನ್ನು ಸೃಷ್ಟಿಯಾಗಿಲ್ಲ. ಉತ್ತರಾಖಂಡ ಶಿಕ್ಷಣ ಕ್ಷೇತ್ರದಲ್ಲಿ ತುಂಬ ಹೆಸರು ಮಾಡಿರುವ ರಾಜ್ಯ. ಅಲ್ಲೂ ಸಾಮಾನ್ಯ ಮಕ್ಕಳ ಜತೆ ವಿಶೇಷ ಮಕ್ಕಳನ್ನು ಕೂರಿಸಿ ಶಿಕ್ಷಣ ನೀಡುವ ಕ್ರಮ ಇನ್ನೂ ಜಾರಿಗೆ ಬಂದಿಲ್ಲ. ಹಲವು ವಿಷಯಗಳಲ್ಲಿ ಸಮರ್ಥರಾಗಿರುವ ಈ ಮಕ್ಕಳಿಗೆ ‘ಅಸಾಮರ್ಥ್ಯ’ದ ಹಣೆಪಟ್ಟಿ ಕಟ್ಟುವುದೆಂದರೆ ಮಾನವಿಯತೆಯನ್ನು ಮರೆತಂತೆ. ಆದರೆ, ಇಂಥ ಮಕ್ಕಳ ಪಾಲಿಗೆ ಭಾರತ ನಿಷ್ಕರುಣಿ ದೇಶ ಎಂಬುದು ಕಹಿವಾಸ್ತವ. ಈ ಮಕ್ಕಳನ್ನು ಇತರೆ ಮಕ್ಕಳಿಂದ ಬೇರ್ಪಡಿಸಿ ‘ವರ್ಗಿಕರಣ’ದ ಹೆಸರಲ್ಲಿ ಶಿಕ್ಷಣ ನೀಡುವುದು ಸರಿಯಾದ ಕ್ರಮವಲ್ಲ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವಾಗ ಸಂಯುಕ್ತ ಶೈಕ್ಷಣಿಕ ಪಠ್ಯಕ್ರಮ, ವ್ಯವಸ್ಥೆ ರೂಪಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬುದು ತೀರಾ ವಿಪರ್ಯಾಸದ ಸಂಗತಿ. ಇತ್ತೀಚಿನ ದಿನಗಳಲ್ಲಿ ಇಂಥ ಪ್ರಯತ್ನಗಳು ಆರಂಭವಾಗಿರುವುದು ತುಸು ಸಮಾಧಾನದ ಸಂಗತಿ. ಗುಡಗಾಂವ್​ನಲ್ಲಿ ನೀಲಮ್ ಜಾಲಿ ಎಂಬ ಸಾಮಾಜಿಕ ಕಾರ್ಯಕರ್ತೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ‘ವಿಶ್ವಾಸ’ ಎಂಬ ಸಂಸ್ಥೆ ಮೂಲಕ ಸಾಮಾನ್ಯ ಹಾಗೂ ವಿಶೇಷ ಮಕ್ಕಳಿಗೆ ಒಂದೇ ಸೂರಿನಡಿ ಶಿಕ್ಷಣ ಒದಗಿಸುತ್ತಿದ್ದಾರೆ. ಮುಂಬೈಯಲ್ಲಿ ಮಿಠು ಅಲೂರ್ ಎಂಬ ಸಮಾಜಸೇವಿ ಇಂಥ ಮಕ್ಕಳಿಗೆ ಹೊಸ ಬಾಳು ಒದಗಿಸುತ್ತಿದ್ದಾರೆ. ಆದರೆ, ದೇಶಾದ್ಯಂತ ಇರುವ ಈ ಕೋಟ್ಯಂತರ ಮಕ್ಕಳ ಮ್ಯಾಪಿಂಗ್ ಅಂದರೆ ಗುರುತಿಸುವಿಕೆ ಕಾರ್ಯ ನಡೆಯಬೇಕು ಮತ್ತು ಪ್ರತಿ ಶಿಕ್ಷಕ/ಕಿಯೂ ಡಿಸ್​ಲೇಕ್ಸಿಯಾ/ವಿಶೇಷ ಮಕ್ಕಳಿಗೆ ಕಲಿಸುವ ತರಬೇತಿ ಹೊಂದಿರಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಮಾಧವನ್​ನಂತೆ ಪ್ರತಿ ಮಕ್ಕಳಲ್ಲೂ ಕನಸಿದೆ. ಅದನ್ನು ಈಡೇರಿಸಲು ಬರೀ ಭಾವುಕತೆ ಸಾಕಾಗುವುದಿಲ್ಲ. ತಂದೆ-ತಾಯಿ ಬೆಂಬಲ ಮತ್ತು ಇಡೀ ಸಮಾಜ ಅವರನ್ನು ಜತೆಯಲ್ಲಿ ಕರೆದುಕೊಂಡು ಹೋಗುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಆಗ ಮಾತ್ರ ನಿಜವಾದ ಬದಲಾವಣೆ ಕಾಣಲು ಸಾಧ್ಯ.

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *