ಧಾರವಾಡ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜಿಲ್ಲೆಯ ಬಾರ್, ರೆಸ್ಟೋರೆಂಟ್, ಕ್ಲಬ್, ಜಿಮ್ಖಾನಾ, ಹೋಟೆಲ್, ಮನೋರಂಜನಾ ಕೇಂದ್ರಗಳಲ್ಲಿ ವಿಶೇಷ ಪಾರ್ಟಿ, ರಿಯಾಯತಿ ಪ್ಯಾಕೇಜ್, ಡಿ.ಜೆ. ಮ್ಯೂಸಿಕ್, ಡಾನ್ಸ್ ಕಾರ್ಯಕ್ರಮ ಆಯೋಜನೆಯನ್ನು ನಿರ್ಬಂಧಿಸಲಾಗಿದೆ. ಈ ಆದೇಶ ಡಿ. 30ರಿಂದ ಜ. 2ರವರೆಗೆ ಜಾರಿಯಲ್ಲಿರುತ್ತದೆ. ಮಾರ್ಗಸೂಚಿ ಪಾಲಿಸದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅವರ ಲೈಸೆನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎಚ್ಚರಿಕೆ ನೀಡಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಹೋಟೆಲ್, ರೆಸ್ಟೋರೆಂಟ್, ಬಾರ್, ಕ್ಲಬ್, ವಿವಿಧ ಮನರಂಜನೆ ಹಾಗೂ ವಾಣಿಜ್ಯ ಸೇವೆ ಸಂಸ್ಥೆಗಳ ಮಾಲೀಕರ ಹಾಗೂ ವ್ಯವಸ್ಥಾಪಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕರೊನಾ ಹೊಸ ಸ್ವರೂಪದ ಹರಡುವಿಕೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಬಕಾರಿ, ಪೊಲೀಸ್, ಮಹಾನಗರ ಪಾಲಿಕೆಯಿಂದ ಲೈಸೆನ್ಸ್ ಪಡೆದಿರುವವರು, ಸೂಚಿಸಿರುವ ನಿಯಮಗಳಂತೆ ಮತ್ತು ಪ್ರತಿನಿತ್ಯದಂತೆ ತಮ್ಮ ವ್ಯವಹಾರ ನಿರ್ವಹಿಸಬಹುದು. ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು. ಪ್ರತಿಯೊಬ್ಬ ಗ್ರಾಹಕರಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಬಳಸಬೇಕು. ಪರಸ್ಪರ ಅಂತರ ಕಾಪಾಡುವಂತೆ ನೋಡಿಕೊಂಡು ಮಾಸ್ಕ್ ಧರಿಸದವರಿಗೆ ಉಚಿತವಾಗಿ ಮಾಸ್ಕ್ ನೀಡಬೇಕು ಎಂದು ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಸೂಚಿಸಿದರು.
ಮಹಾನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆಗಾಗಿ ಗುಂಪು ಸೇರುವುದು, ಬೈಕ್ ರ್ಯಾಲಿ, ಪಾರ್ಟಿ ಮಾಡುವುದು, ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಲಾಗಿದೆ. ಅಬಕಾರಿ, ಪೊಲೀಸ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಡಿ.30ರಿಂದ ಜ. 2ರವರೆಗೆ ನಿಗಾ ವಹಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸರ್ಕಾರದ ಮಾರ್ಗಸೂಚಿಗಳನ್ನು ವಿವರಿಸಿದರು. ಡಿಸಿಪಿಗಳಾದ ಕೆ. ರಾಮರಾಜನ್, ಆರ್.ಬಿ. ಬಸರಗಿ, ಉಪ ವಿಭಾಗಾಧಿಕಾರಿ ಡಾ. ಗೋಪಾಲಕಷ್ಣ, ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತ ಶಿವನಗೌಡ ಪಾಟೀಲ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಡಿಎಚ್ಒ ಡಾ. ಯಶವಂತ ಮದೀನಕರ, ತಹಸೀಲ್ದಾರ್ರಾದ ಡಾ. ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಜಿಲ್ಲೆಯ ಹೋಟೆಲ್, ಬಾರ್, ರೆಸ್ಟೋರೆಂಟ್, ಕ್ಲಬ್ಗಳ ಮಾಲೀಕರು, ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಸರ್ಕಾರದ ಮಾರ್ಗಸೂಚಿ ಪ್ರಕಟ: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೇಂದ್ರ ಗೃಹ ಮಂತ್ರಾಲಯ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕ್ಲಬ್, ಪಬ್, ರೆಸ್ಟೋರೆಂಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆಯನ್ನು ನಿರ್ಬಂಧಿಸಲಾಗಿದೆ. ಕೋವಿಡ್ ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳ, ಮುಖ್ಯ ರಸ್ತೆಗಳಲ್ಲಿ ಪರಸ್ಪರ ಅಂತರವಿಲ್ಲದ ಸಂಭ್ರಮಾಚರಣೆಯನ್ನು ನಿಷೇಧಿಸಿದೆ. ಆದರೆ ಪ್ರತಿನಿತ್ಯದ ಸಾಮಾನ್ಯ ಸೇರುವಿಕೆ ಹಾಗೂ ಕಾರ್ಯಚಟುವಟಿಕೆ ಕೈಗೊಳ್ಳಲು ನಿರ್ಬಂಧವಿಲ್ಲ. 10 ವರ್ಷದೊಳಗಿನ ಮತ್ತು 65 ವರ್ಷದ ಮೇಲ್ಪಟ್ಟ ಹಿರಿಯರು ಮನೆಯಲ್ಲಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಸ್ಥಳದಲ್ಲೇ ಪ್ರಕರಣ ದಾಖಲು: ಡಿಜೆ ಮ್ಯೂಸಿಕ್ ಕೇಳಿಬಂದರೆ ಮತ್ತು ಸಮಯ ಮೀರಿ ವ್ಯವಹಾರ ನಡೆಸಿದರೆ ಹೋಟೆಲ್ ಮ್ಯಾನೇಜರ್ ಮತ್ತು ಮಾಲೀಕರ ವಿರುದ್ಧ ಸ್ಥಳದಲ್ಲೇ ಪ್ರಕರಣ ದಾಖಲಿಸಿ ಸೀಜ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ವರ್ಷಾಚರಣೆ ಅಂಗವಾಗಿ ವಿಶೇಷ ಪ್ಯಾಕೇಜ್, ಕಾರ್ಯಕ್ರಮ ಆಯೋಜನೆ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಹ್ವಾನ ನೀಡುತ್ತಿರುವ ಮಾಹಿತಿ ಇದೆ. ಅಂಥ ಕಾರ್ಯಕ್ರಮಗಳ ತಯಾರಿ ಕೈಬಿಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಲಾಬುರಾಮ ಎಚ್ಚರಿಕೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲೂ ಲೈಸೆನ್ಸ್ದಾರರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗಿದೆ. ಹೊಸ ವರ್ಷಾಚರಣೆ ನೆಪದಲ್ಲಿ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಲು ಸನ್ನದುದಾರರಿಗೆ ಸೂಚಿಸಲಾಗಿದೆ. | ಪಿ. ಕೃಷ್ಣಕಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ