ವಿವೇಕಾನಂದರ ತತ್ವಾದರ್ಶ ಅನುಕರಣೀಯ

ಶಿಡ್ಲಘಟ್ಟ : ವಿವೇಕಾನಂದರ ತತ್ವಾದರ್ಶಗಳನ್ನು ಯುವಜನತೆ ಮೈಗೂಡಿಸಿಕೊಂಡಾಗ ಮಾತ್ರ ಸದೃಢ ದೇಶ ನಿರ್ವಿುಸಲು ಸಾಧ್ಯ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಜೀ ಮಹಾರಾಜ್ ಹೇಳಿದರು.

ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ವಿವೇಕಾನಂದ ಹೆಸರೇ ಒಂದು ಪ್ರೇರಣೆ. ವಿವೇಕಾನಂದರು ತಮ್ಮ ಭಾಷಣದ ಮೂಲಕ ಹೇಗೆ ಜಗತ್ತಿನ ಗಮನ ಸೆಳೆದರೋ ಅದೇ ರೀತಿ ಬರವಣಿಗೆ ಮೂಲಕವೂ ಕ್ರಾಂತಿ ಮಾಡಿದವರು. ಕವಿ ರವೀಂದ್ರನಾಥ ಠಾಗೋರ್ ಅವರ ಬಗ್ಗೆ ಹೇಳುತ್ತ ‘ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆ ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮಿ ವಿವೇಕಾನಂದರನ್ನು ಓದಿ’ ಎಂದಿದ್ದರು. ಇಂತಹ ಮಹಾನ್ ಪುರಷನ ಆದರ್ಶಗಳನ್ನು ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಕೋಡಿರಂಗಪ್ಪ ಮಾತನಾಡಿ, ಪ್ರತಿಯೊಬ್ಬರಲ್ಲೂ ಅದಮ್ಯ ಉತ್ಸಾಹ, ಗುರು ಕಡೆಗೆ ಸಾಗುವ ಇಚ್ಛಾಶಕ್ತಿ, ಬಿಡದ ಪ್ರಯತ್ನ, ಆತ್ಮನಂಬಿಕೆ ಇರಬೇಕು. ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವ್ಯಕ್ತಿತ್ವವು ಸಾಧನೆಗೆ ಪ್ರೇರಕವಾಗುತ್ತದೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜನಾರ್ದನ್ ಮಾತನಾಡಿದರು. ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎನ್.ರಾಮಾಂಜನಪ್ಪ, ಗೌರವ ಕಾರ್ಯದರ್ಶಿ ಎಂ.ಆರ್.ಶಿವಣ್ಣ, ನಿರ್ದೇಶಕರಾದ ಸಿ.ನಾರಾಯಣಸ್ವಾಮಿ, ಎಂ.ಕೆ.ಚಂದ್ರಶೇಖರ್, ಸಿ.ಎಂ.ದೇವರಾಜ್, ಪ್ರಾಚಾರ್ಯ ಎಂ.ಚಂದ್ರಕುಮಾರ್ ಮತ್ತಿತರರಿದ್ದರು.