ವಿವೇಕಾನಂದರ ಚಿಂತನೆ ಅಧ್ಯಯನ ಮಾಡಿ

ವಿಜಯವಾಣಿ ಸುದ್ದಿಜಾಲ ಗದಗ: ವಿವೇಕಾನಂದರ ಜಾಗತಿಕ ಭಾಷಣದ ಬಳಿಕ ಹಿಂದು ಧರ್ಮ ವಿಜ್ಞಾನಕ್ಕೆ ಹತ್ತಿರ ಎಂದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿವೇಕಾನಂದರ ವೈಜ್ಞಾನಿಕ ಚಿಂತನೆಗಳನ್ನು ಅಧ್ಯಯನ ಮಾಡಬೇಕಿದೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಯುವಾ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ಸ್ವಾಮಿ ವಿವೇಕಾನಂದರ ಷಿಕಾಗೋ ಭಾಷಣದ 125ನೇ ವರ್ಷದ ನೆನಪಿಗಾಗಿ ಗುರುವಾರ ಆಯೋಜಿಸಿದ್ದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಡಿ ಜಗತ್ತನ್ನೇ ತನ್ನ ವೇದಾಂತಗಳಿಂದ ನಿಬ್ಬೆರಗಾಗಿಸಿದ್ದ ಸ್ವಾಮಿ ವಿವೇಕಾನಂದರು, ಕೇವಲ ಸಂತರಲ್ಲ, ಅವರೊಬ್ಬ ಯೋಧ ಸಂತ, ವಿಜ್ಞಾನಿ ಎಂದು ಅಮೆರಿಕದ ಎನಿಬೆಸೆಂಟ್ ಹೇಳಿದ್ದರು. ಪ್ರೀತಿಯಿಂದ ಬರುವ ವಲಸಿಗರಿಗೂ ಆಶ್ರಯ ನೀಡುವ ನಮ್ಮ ದೇಶ, ಕಳ್ಳತನದಿಂದ ನುಸುಳುವವರನ್ನು ಓಡಿಸುವ ಕೆಲಸನ್ನೂ ಮಾಡುತ್ತಿದೆ ಎಂದರು.

ಭಾರತ ಮತ್ತು ಪಾಕಿಸ್ತಾನಕ್ಕೆ ಏಕಕಾಲದಲ್ಲಿ ಸ್ವಾತಂತ್ರ್ಯ ದೊರೆತರೂ ಭಾರತವು ಇಂದು ಜಗತ್ತಿನ 5ನೇ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿದೆ. ಪಾಕಿಸ್ತಾನ ಪಾತಾಳಕ್ಕೆ ಕುಸಿದಿದ್ದು, ಅನ್ಯ ರಾಷ್ಟ್ರಗಳಲ್ಲಿ ಸಾಲ ಬೇಡುತ್ತಿದೆ. ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಜಗತ್ತಿನ ಮುಸ್ಲಿಂ ರಾಷ್ಟ್ರಗಳೂ ಸೇರಿ ಯಾವೊಂದು ದೇಶವೂ ಭಾರತದ ಕೆಲಸವನ್ನು ತಪ್ಪು ಎಂದು ಹೇಳಲಿಲ್ಲ. ಚೀನಾ ದೇಶವು ಅಮೆರಿಕವನ್ನು ಎದುರಿಸಲು ಭಾರತಕ್ಕೆ ಮನವಿ ಮಾಡುವಷ್ಟರ ಮಟ್ಟಿಗೆ ಭಾರತವು ಉನ್ನತ ಸ್ಥಾನದಲ್ಲಿ ಬೆಳೆದು ನಿಂತಿದೆ ಎಂದರು.

ಯುವಕರಿಗಾಗಿ ಮಾಡಿದ ಯುವ ಬ್ರಿಗೇಡ್ ಮಾದರಿಯಲ್ಲಿ ಯುವತಿಯರಿಗಾಗಿ ನಿವೇದಿತಾ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಸ್ವಾಭಿಮಾನ ಹೊಂದಿದವನು ಜಗತ್ತನ್ನಾಳಿದರೆ, ಸ್ವಾಭಿಮಾನ ಇಲ್ಲದವನು ಜಗತ್ತಿನಿಂದ ಆಳಲ್ಪಡುತ್ತಾನೆ. ಈ ನಿಟ್ಟಿನಲ್ಲಿ ಯುವಕರು ಜನಪ್ರತಿನಿಧಿಗಳನ್ನು ಕಾಯುವ ಬದಲು ದೇಶ ಕಟ್ಟುವ ಕೆಲಸದಲ್ಲಿ ಮುನ್ನುಗ್ಗಬೇಕು. ಈ ಮೂಲಕ ಸದೃಢ, ಭವ್ಯ ಭಾರತ ನಿರ್ವಿುಸಿ, ವಿಶ್ವಗುರು ಭಾರತವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ವಿಜಯಪುರ-ಗದಗ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಸಾನ್ನಿಧ್ಯ ವಹಿಸಿದ್ದರು. ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್.ವೈ. ಚಿಕ್ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಶಹರ ಕಾಂಗ್ರೆಸ್ ಅಧ್ಯಕ್ಷ ಗುರಣ್ಣ ಬಳಗಾನೂರ ಇದ್ದರು. ಬಾಹುಬಲಿ ಜೈನರ ನಿರ್ವಹಿದರು.

ಶೋಭಾಯಾತ್ರೆ

ಸ್ವಾಮಿ ವಿವೇಕಾನಂದರ ಷಿಕಾಗೋ ಭಾಷಣದ 125ನೇ ವರ್ಷದ ನೆನಪಿಗಾಗಿ ಸಂಚರಿಸುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯು ಗದಗ ನಗರಕ್ಕೆ ಗುರುವಾರ ಆಗಮಿಸಿತು. ನಗರದ ರಾಚೋಟೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಥಯಾತ್ರೆ ಮೆರವಣಿಗೆಯು ಒಕ್ಕಲಗೇರಿ ಓಣಿ ಮಾರ್ಗವಾಗಿ ಎಪಿಎಂಸಿ ಆವರಣದ ಸ್ವಾಮಿ ವಿವೇಕಾನಂದ ಸಭಾಂಗಣವರೆಗೆ ಸಾಗಿತು.

ಸ್ಪರ್ಧಾ ವಿಜೇತರಿಗೆ ಬಹುಮಾನ

ವಿವೇಕಾನಂದರ ಷಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ನೆನಪಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಕಾಶ ಮಲ್ಲಾಡದ, ವಿದ್ಯಾ ಪಟ್ಟಣಶೆಟ್ಟಿ, ಸುಜಾತಾ ತಮ್ಮನಗೌಡರ, ಚಿತ್ರಕಲೆಯಲ್ಲಿ ಶಶಾಂಕ ಪಾಟೀಲ, ಭೂಮಿಕಾ ಮಾದಗುಂಡಿ, ಫಯಾಜ್ ಇಬ್ರಾಹಿಂಪುರ, ಭಾಷಣ ಸ್ಪರ್ಧೆಯಲ್ಲಿ ಪೂಜಾ ಮುತ್ತಿನಪೆಂಡಿಮಠ, ಪವಿತ್ರಾ ಕಣವಿ, ಪೂರ್ಣಿಮಾ ಸವದತ್ತಿಮಠ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ದೀಪಾ ಬ್ಯಾಹಟ್ಟಿ, ಅನಿತಾ ಪವಾರ ಹಾಗೂ ಪೂನಮ್ ಬಸವಾ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.