ವಿವಿ ಬ್ಯಾಕ್​ಲಾಗ್ ಹುದ್ದೆ ಡೀಲ್

|ದೇವರಾಜ್ ಎಲ್.ಶೆಟ್ಟಿ

ಬೆಂಗಳೂರು: ಹುದ್ದೆ ಖಾಲಿ ಇಲ್ಲದಿದ್ದರೂ ಸೃಷ್ಟಿಸಲಾಗುತ್ತಿದೆ… ಏಕೆಂದರೆ ಇದರಿಂದ ಬರೋಬ್ಬರಿ 40ರಿಂದ 50 ಲಕ್ಷ ರೂ. ಕಮಾಯಿಯಾಗುತ್ತದೆ….!

ಇದು ಬೆಂಗಳೂರು ವಿಶ್ವವಿದ್ಯಾಲಯದ ಬ್ಯಾಕ್​ಲಾಗ್ ಹುದ್ದೆ ಭರ್ತಿಯ ಕರ್ಮಕಾಂಡ. ಉನ್ನತಾಧಿಕಾರಿಗಳಿಗೆ ಮರೆಮಾಚಿ ಭರ್ತಿಯಾಗಿರುವ ಹುದ್ದೆಗಳನ್ನೇ ಖಾಲಿ ಎಂದು ತೋರಿಸಿ, ಭರ್ತಿ ಮಾಡಲು ಕೆಲ ಅಧಿಕಾರಿಗಳು ಮುಂದಾಗಿದ್ದಾರೆ. ಇವು ಸಹ ಪ್ರಾಧ್ಯಾಪಕ ಹುದ್ದೆಗಳಾಗಿದ್ದು, ತಿಂಗಳ ವೇತನ 1 ಲಕ್ಷ ರೂ.ಗಳಿಗೂ ಹೆಚ್ಚಿರುವುದರಿಂದ ಹುದ್ದೆ ಭರ್ತಿಗೆ 40ರಿಂದ 50 ಲಕ್ಷ ರೂ. ಬಿಡ್ಡಿಂಗ್ ನಡೆಯುತ್ತಿದೆ. ಈಗಾಗಲೇ ಬಹುತೇಕರು ಉದ್ಯೋಗ ಆಸೆಯಿಂದ ಶೇ.70 ಮುಂಗಡ ಹಣ ಪಾವತಿಸಿದ್ದಾರೆಂದು ತಿಳಿದುಬಂದಿದೆ.

2018ರ ಮಾರ್ಚ್​ನಲ್ಲಿ ಮೊಟ್ಟಮೊದಲ ಬಾರಿಗೆ ಬೆಂವಿವಿ ಹೊರಡಿಸಿದ ನೇಮಕಾತಿ ಅಧಿಸೂಚನೆಯಲ್ಲಿ 20 ಉಲ್ಲೇಖಗಳಿದ್ದು, ಎಲ್ಲವೂ ಸರ್ಕಾರದ ಆದೇಶಗಳಿಗೆ ಸಂಬಂಧಿಸಿದ್ದಾಗಿವೆ. ಆದರೆ, ಈ ಹಿಂದೆ 3 ಬಾರಿ ಬ್ಯಾಕ್​ಲಾಗ್ ಹುದ್ದೆ ಭರ್ತಿಗೆ ಅರ್ಜಿ ಕರೆದರೂ ಅಧಿಸೂಚನೆಯಲ್ಲಿ ಯಾವುದೇ ಉಲ್ಲೇಖಗಳು ಇಲ್ಲದಿರುವುದು ಅಕ್ರಮ ನೇಮಕಕ್ಕೆ ಪುಷ್ಟಿ ನೀಡಿದೆ.

2002 ಮತ್ತು 2003ರಲ್ಲಿ 20ಕ್ಕೂ ಹೆಚ್ಚು ಹುದ್ದೆಗಳನ್ನು ವಿವಿ ಭರ್ತಿ ಮಾಡಿದೆ. ಅದೇ ಹುದ್ದೆಗಳಿಗೆ ಮತ್ತೆ 2018ರಲ್ಲಿ ಹೊಸ ಹುದ್ದೆಗಳೆಂಬಂತೆ ತೋರಿಸಿ ನೇಮಕಕ್ಕೆ ಆದೇಶ ಹೊರಡಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ನಡೆಯುವ ಭಾರಿ ಅಕ್ರಮಕ್ಕೆ ನಾಂದಿಯಾಗಲಿದೆ.

ಹಳೇ ಹುದ್ದೆ, ಹೊಸ ಭರ್ತಿ:ಅರ್ಥಶಾಸ್ತ್ರ ವಿಭಾಗದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸಹ ಪ್ರಾಧ್ಯಾಪಕ (ರೀಡರ್) ಹುದ್ದೆಯನ್ನು 2003ರಲ್ಲಿ ಡಾ. ರಾಜೇಂದ್ರಪ್ರಸಾದ್​ಗೆ ನೀಡಲಾಗಿದೆ. ಆದರೆ ಈಗ ಅದೇ ಹುದ್ದೆಯನ್ನು ಖಾಲಿ ಇದೆ ಎಂದು ತಿಳಿಸಿ ಬ್ಯಾಕ್​ಲಾಗ್ ಅಧಿಸೂಚನೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿ ಭೌತಶಾಸ್ತ್ರ ರೀಡರ್- ಡಾ. ನಾಗಯ್ಯ (ಎಸ್ಸಿ), ರಸಾಯನಶಾಸ್ತ್ರ ರೀಡರ್- ಡಾ.ಪಾಂಡುರಂಗಪ್ಪ (ಎಸ್​ಟಿ), ಗಣಿತ -ಡಾ. ಎಂ.ಮಹದೇವನಾಯಕ್ (ಎಸ್​ಟಿ), ಲೈಫ್ ಸೈನ್ಸ್ ಮತ್ತು ರೇಷ್ಮೆ ಕೃಷಿ- ಶಿವಶಂಕರ್ (ಎಸ್​ಸಿ), ಗಣಿತ- ಡಾ.ಚೆಲುವರಾಜು (ಎಸ್​ಟಿ), ಸಮಾಜಶಾಸ್ತ್ರ ವಿಭಾಗಕ್ಕೆ ವಿಜಯಪುರ ಮಹಿಳಾ ವಿವಿಯಿಂದ ಡಾ.ಸುಧಾ ಕಾಕೋಟೆ ಎಂಬುವರನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಎಲ್ಲ ಹುದ್ದೆಗಳಲ್ಲಿ ತಿಳಿಸಲಾಗಿರುವ ವ್ಯಕ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ ಮತ್ತೆ ಅದೇ ಹುದ್ದೆಗಳಿಗೆ ಹೊಸದಾಗಿ ನೇಮಕ ಅಧಿಸೂಚನೆ ಹೊರಡಿಸಿರುವುದು ಹಾಸ್ಯಾಸ್ಪದವಾಗಿದೆ. ಒಂದು ವೇಳೆ ಹುದ್ದೆ ಭರ್ತಿ ಮಾಡಿದರೆ, ಸುಧಾ ಕಾಕೋಟೆ ಅವರನ್ನು ಮಹಿಳಾ ವಿವಿಗೆ ವಾಪಸ್ ಕಳುಹಿಸಲು ಸಾಧ್ಯವೇ ಎಂಬುದನ್ನೇ ವಿವಿ ಆಲೋಚಿಸಿಲ್ಲ.

ನ್ಯಾಯಾಂಗ ತನಿಖೆಯಾಗಲಿ

ಹುದ್ದೆಗಳಿಗೆ ಅರ್ಜಿ ಸಲ್ಲಿರುವ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಪ್ರಗತಿಯಲ್ಲಿದೆ. 2018ರ ಬ್ಯಾಕ್​ಲಾಗ್ ಹುದ್ದೆಗಳಿಗೆ ನೀಡಿರುವ ಅಧಿಸೂಚನೆ ತಡೆ ಹಿಡಿದು 2002 ಮತ್ತು 2003ರಲ್ಲಿ ನೇಮಕಗೊಂಡ ಅಭ್ಯರ್ಥಿಗಳೆಷ್ಟು, ಉಳಿದ ಹುದ್ದೆಗಳೆಷ್ಟು ಎಂಬ ಖಚಿತ ವಿವರಗಳನ್ನು ನಿವೃತ್ತ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಿ ನಂತರ ಬ್ಯಾಕ್​ಲಾಗ್ ಹುದ್ದೆಗಳ ಖಾಲಿ ಇರುವಿಕೆ ಖಚಿತಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವ ಮೂಲಕ ವಿವಿ ಗೌರವ ಕಾಪಾಡಬೇಕೆಂದು ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯಿಸಿದೆ.

ಸರ್ಕಾರಕ್ಕೆ ತಪ್ಪು ಮಾಹಿತಿ

ಬ್ಯಾಕ್​ಲಾಗ್ ಹುದ್ದೆಗಳನ್ನು ಗುರುತಿಸಿ ನೇಮಕಾತಿ ಅಧಿಸೂಚನೆ ಹೊರಡಿಸುವ ಮುನ್ನ ವರದಿ ತಯಾರಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಬಂದಿದ್ದ ಅಧಿಕಾರಿಗಳಿಗೆ ವಿವಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ. ವಿವಿಯ ಸಿಬ್ಬಂದಿ ಅಧೀಕ್ಷಕ ಕೆ.ಆರ್. ಗೋವಿಂದ ರಾಜು ಮತ್ತು ಗುಮಾಸ್ತ ಮೋಹನ್ ಸೇರಿ 2003ರ ಬ್ಯಾಕ್​ಲಾಗ್ ಹುದ್ದೆಗಳ ನೇಮಕ ಅಧಿಸೂಚನೆ ಬಚ್ಚಿಟ್ಟು 1990-96ರ ಅವಧಿಯ ಮಾಹಿತಿ ನೀಡಿ ಹುದ್ದೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಖಾಲಿ ಹುದ್ದೆ ಪಟ್ಟಿ ರೂಪಿಸುವಾಗ ವಿವಿ ಉನ್ನತಾಧಿಕಾರಿ ಸಹಾಯಕ ಕುಲಸಚಿವೆ ಉಷಾ ಮತ್ತು ಉಪ ಕುಲಸಚಿವ ಶ್ರೀನಿವಾಸನ್ ಅವರನ್ನು ಗಣನೆಗೆ ತೆಗೆದುಕೊಳ್ಳದೆ ವರದಿ ತಯಾರಿಸಲಾಗಿದೆ. ವಿವಿಬ್ಯಾಕ್​ಲಾಗ್ ಹುದ್ದೆಗಳ ವರದಿಯನ್ನು ಆತುರಾತುರವಾಗಿ ಪಡೆದುಕೊಂಡು ಸದರಿ ವರದಿಗೆ ಹಿಂದಿನ ಹಂಗಾಮಿ ಕುಲಪತಿಗಳಾದ ಡಾ.ಸುದೇಶ್ ಅವರಿಂದ ಸಹಿ ಪಡೆದುಕೊಂಡಿದ್ದಾರೆ ಎಂದು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಈ ಹಿಂದೆ ವಿಶ್ವವಿದ್ಯಾಲಯದಲ್ಲಿ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಇವರಿಬ್ಬರನ್ನು ಹೆಚ್ಚಿನ ಹೊಣೆ ಇಲ್ಲದ ಸ್ಥಾನಗಳಿಗೆ ವರ್ಗ ಮಾಡಲಾಗಿತ್ತು. ಗೋವಿಂದರಾಜು ಹಣಕಾಸು ವಿಭಾಗ-7ರಲ್ಲಿ ಅಧೀಕ್ಷಕರಾಗಿದ್ದಾಗ ಕೆಲವು ಉಪಕರಣಗಳ ಖರೀದಿ ವ್ಯವಹಾರದಲ್ಲಿ ಅಕ್ರಮವೆಸಗಿದ್ದರೆಂದು ಬೇರೆಡೆಗೆ ವರ್ಗಾಯಿಸಲಾಗಿತ್ತು. ಮೋಹನ್​ಕುಮಾರ್ ಪರೀಕ್ಷಾ ವಿಭಾಗದಲ್ಲಿದ್ದಾಗ ಅಂಕಪಟ್ಟಿ ಹಗರಣವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.

ಸರ್ಕಾರದ ಹಿಂದಿನ ಆದೇಶವನ್ನು ನಾನಿನ್ನೂ ನೋಡಿಲ್ಲ. ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರೆ ಅಧಿಕಾರಿಗಳನ್ನು ಕರೆದು ಪರಿಶೀಲನೆ ನಡೆಸಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದು.

| ಡಾ.ಕೆ.ಆರ್. ವೇಣುಗೋಪಾಲ್ ಬೆಂವಿವಿ ಕುಲಪತಿ