ವಿವಿಧ ಸಂಘಟನೆಗಳ ಪ್ರತಿಭಟನೆ

ಕಾಂಗ್ರೆಸ್ ಕಾರ್ಯಕರ್ತರಿಂದ ಮೋದಿ ವಿರುದ್ಧ ಘೊಷಣೆ ಕೂಗಿ ಆಕ್ರೋಶ

ಮೈಸೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆದವು. ಬಂದ್​ಗೆ ಕರೆಕೊಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದು, ವಿವಿಧ ಸಂಘಟನೆಗಳು ಕೈ ಜೋಡಿಸಿದ್ದವು.

ಕೈ ಪಡೆಯ ಹರತಾಳ: ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಬಸ್ ತಡೆದು ಪ್ರತಿಭಟಿಸಿದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನಾಕಾರರು, ಕಾಂಗ್ರೆಸ್ ಬಾವುಟ ಹಿಡಿದು ಕೇಂದ್ರ ಸರ್ಕಾರ, ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಆಗ್ರಹಿಸಿದರು.

ಫೌಂಟನ್ ವೃತ್ತದಲ್ಲಿ ಟಾಂಗ ಹಾಗೂ ಎತ್ತಿನ ಗಾಡಿ ಮೂಲಕ ಮೆರವಣಿಗೆ ನಡೆಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಶಾಸಕ ತನ್ವೀರ್​ಸೇಠ್ ಟಾಂಗಾ ಗಾಡಿಯಲ್ಲಿ ಸವಾರಿ ಮಾಡಿದರು. ಮಾಜಿ ಸಂಸದ ವಿಜಯಶಂಕರ್ ಎತ್ತಿನ ಗಾಡಿ ಓಡಿಸಿದರು.

ಆರ್​ಎಂಸಿ ಬಳಿ ಮಾಜಿ ಶಾಸಕ ವಾಸು ಸೈಕಲ್ ಸವಾರಿ ಮಾಡಿ ಗಮನ ಸೆಳೆದರು. ಬಳಿಕ ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದರು. ಎಂಜಿ ರಸ್ತೆಯಲ್ಲಿ ಎಂಎಲ್ಸಿ ಧರ್ಮ

ಸೇನ ನೇತೃತ್ವದಲ್ಲಿ ಸೇವಾದಳ, ಕಾರ್ವಿುಕ ಕಾಂಗ್ರೆಸ್ ಸಮಿತಿಯವರು ಪ್ರತಿಭಟನೆ ನಡೆಸಿದರು.

ಅಂತೆಯೇ, ಎಪಿಎಂಸಿ ಬಳಿ ಮಾಜಿ ಶಾಸಕ ಸತ್ಯನಾರಾಯಣ್, ಚಾಮುಂಡೇಶ್ವರಿ ಕ್ಷೇತ್ರ ಕಾಂಗ್ರೆಸ್ ಮುಖಂಡರು, ದೇವರಾಜ ಮಾರುಕಟ್ಟೆ ಬಳಿ ಜಿಪಂ ಸದಸ್ಯೆ ಪುಷ್ಪಾ ಅಮರನಾಥ್, ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ರಸ್ತೆಗಿಳಿದು ಕೇಂದ್ರದ ವಿರುದ್ಧ ಘೊಷಣೆ ಕೂಗಿದರು. ಜತೆಗೆ, ದೇವರಾಜ ಅರಸು ರಸ್ತೆ, ನೂರಡಿ ರಸ್ತೆ, ಹೈವೇ ವೃತ್ತ ಹೀಗೆ ನಗರದ ನಾಲ್ಕು ದಿಕ್ಕಿನಲ್ಲೂ ಕೈ ಪಡೆಯಿಂದ ಪ್ರತಿಭಟನೆ ಮೊಳಗಿತು.

ಜೆಡಿಎಸ್​ನಿಂದ ವಿನೂತನ ಪ್ರತಿಭಟನೆ: ಬಂದ್​ಗೆ ಬೆಂಬಲ ಘೊಷಿಸಿದ ಜೆಡಿಎಸ್, ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಗಾಂಧಿವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ವಿಶ್ವನಾಥ್ ಅವರು ಬೈಕ್​ನಲ್ಲಿ ಹಿಂಬದಿಯ ಸವಾರರಾಗಿ ಒಂದು ಸುತ್ತು ಹಾಕಿದರು.

ಜೆಡಿಎಸ್ ಕಾರ್ಯಕರ್ತರು ಚಿಕ್ಕಗಡಿಯಾರ ವೃತ್ತದ ಬಳಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಿ ವಿನೂತನ ಪ್ರತಿಭಟಿಸಿದರು. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ವಾಹನ ಬಳಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಳ್ಳುವ ಗಾಡಿಯೇ ಗತಿ ಎಂದು ಘೊಷಣೆ ಕೂಗಿದರು.

ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜನತಾದಳದಿಂದಲೂ ನಡುರಸ್ತೆಯಲ್ಲಿ ಸೌದೆ ಒಲೆ ಹಾಕಿ ಪಾತ್ರೆ ಇಟ್ಟು ಅಣಕು ಪ್ರದರ್ಶನ ಮಾಡಿದರು. ಕೋರ್ಟ್ ಎದುರಿನ ಗಾಂಧಿ ಪುತ್ಥಳಿ ಬಳಿ ಈ ಕಾರ್ಯಕರ್ತರು, ತೈಲ ಬೆಲೆ ಏರಿಕೆಯಿಂದ ಬಡ ಜನರು ಗ್ಯಾಸ್ ಸಿಲಿಂಡರ್ ಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದರ ಏರಿಕೆ ಬಡವರನ್ನು ಸುಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಗ್ರಹಾರದ ವೃತ್ತದಲ್ಲಿ ದ್ವಿಚಕ್ರ ವಾಹನಗಳನ್ನು 1 ರೂ, 2 ರೂ., 3 ರೂ.ಗಳಿಗೆ ಹರಾಜು ಹಾಕಿ ಅಣುಕು ಪ್ರದರ್ಶನದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಡ ಪಕ್ಷಗಳಿಂದಲೂ ಮೆರವಣಿಗೆ: ಆರು ಎಡಪಕ್ಷಗಳ ಕೇಂದ್ರ ಸಮಿತಿಯ ಅಖಿಲ ಭಾರತ ಹರತಾಳಕ್ಕೂ ಕರೆಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್), ಎಸ್​ಯುುಸಿಐಸಿ ಕಾರ್ಯಕರ್ತರು ರಾಮಸ್ವಾಮಿ ವೃತ್ತದಿಂದ ವಿಶ್ವಮಾನವ ಉದ್ಯಾನದ ವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ, ಬೈಕ್​ಗಳನ್ನು ತಳ್ಳಿಕೊಂಡು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಸಭೆ ನಡೆಸಲಾಯಿತು. ಎಡಪಕ್ಷಗಳ ಮುಖಂಡರಾದ ಕೆ. ಬಸವರಾಜು, ಎಚ್.ಆರ್. ಶೇಷಾದ್ರಿ, ಬಿ.ರವಿ, ಚೌಡಳ್ಳಿ ಜವರಯ್ಯ ಇತರರು ಇದ್ದರು.

ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ.ಮಹೇಶ್​ಚಂದ್ರಗುರು ಅಗ್ರಹಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂದ್​ಗೆ ಬೆಂಬಲ ಸೂಚಿಸಿದರು. ‘ಬಡತನ ನಿಮೂಲನೆ ಕೇಂದ್ರ ಸರ್ಕಾರದ ಧ್ಯೇಯವಾಗಬೇಕಿತ್ತು. ಆದರೆ, ಮೋದಿಯವರು ದೇಶದ ಬಡವರ ನಿಮೂಲನೆ ಮಾಡಲು ಹೊರಟಿದ್ದಾರೆ. ಎನ್​ಡಿಎ ಸರ್ಕಾರಕ್ಕೆ ಮಾನವ ಅಭಿವೃದ್ಧಿಯ ಅವಶ್ಯಕತೆ ಇಲ್ಲ. ಅವರಿಗೆ ಶ್ರೀಮಂತರ ಅಭಿವೃದ್ಧಿಯಷ್ಟೇ ಮುಖ್ಯವಾಗಿದೆ ಎಂದು ಪ್ರೊ.ಮಹೇಶ್​ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ, ಬಹುಜನ ಸಮಾಜ ಪಾರ್ಟಿ, ಕಟ್ಟಡ ಕಾರ್ವಿುಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.