ಶನಿವಾರಸಂತೆ: ಮಂಗಳವಾರ ಸುಬ್ರಮಣ್ಯ ಷಷ್ಠಿ ಹಬ್ಬದ ಪ್ರಯುಕ್ತ ಶನಿವಾರಸಂತೆ ಕೆಲವೆಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಷಷ್ಠಿ ಹಬ್ಬದ ಪ್ರಯುಕ್ತ ಮಂಗಳವಾರ ಶನಿವಾರಸಂತೆ ಮುಖ್ಯರಸ್ತೆಯಲ್ಲಿರುವ ಶ್ರೀ ಗಣಪತಿ, ಪಾರ್ವತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಕ್ಷೀರಾಭಿಷೇಕ ಮತ್ತು ಎಳನೀರು ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರಿಗೆ ಭಕ್ತಾಧಿಗಳು ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು.
ಹಿರಿಕರ ಶ್ರೀಮಲ್ಲೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ:
ಸಮೀಪದ ಹಿರಿಕರ ಗ್ರಾಮದಲ್ಲಿರುವ ಶ್ರೀಮಲ್ಲೇಶ್ವರ ದೇವಾಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ಷಷ್ಠಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವಾಲಯದ ಅರಳಿಮರದ ನಾಗದೇವ ಬನದಲ್ಲಿ ನಾಗದೇವರಿಗೆ ಪ್ರಧಾನ ಅರ್ಚಕ ಬಾಲು ಭಟ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೂರಾರು ಭಕ್ತರು ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಹಿರಿಕರ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಎಚ್.ಎಸ್.ರಕ್ಷಿತ್, ಪ್ರಮುಖರಾದ ಬೆಳ್ಳಿಯಪ್ಪ, ಎಚ್.ಎಂ.ಚಂದ್ರಶೇಖರ್, ದಾಮೋದರ್ ಮತ್ತಿತರರಿದ್ದರು.
ತರಕಾರಿ ವಿನಿಮಯ: ಮಂಗಳವಾರ ಬೆಳಗ್ಗೆ ಷಷ್ಠಿ ಹಬ್ಬದ ಪ್ರಯುಕ್ತ ಕೆಲವು ಕಡೆಗಳಲ್ಲಿ ಅಕ್ಕಪಕ್ಕದ ಮನೆಗಳವರು ತರಕಾರಿ, ಗಡ್ಡೆ ಗೆಣಸುಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಷಷ್ಠಿ ಹಬ್ಬವನ್ನು ಆಚರಿಸಿದರು.