ವಿವಿಗಳಲ್ಲಿನ ಭ್ರಷ್ಟಾಚಾರ ತನಿಖೆಗೆ ಆಗ್ರಹ

ಧಾರವಾಡ: ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ನೇಮಕಾತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ವಿವಿಗಳಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಧರಣಿ ನಡೆಸಲಾಯಿತು.

ರಾಜ್ಯದ ಶೈಕ್ಷಣಿಕ ಸ್ಥಿತಿ, ವಿವಿಗಳ ಪರಿಸ್ಥಿತಿ ನೋಡಿದರೆ ಶಿಕ್ಷಣದ ಮೂಲ ಉದ್ದೇಶ ಪೊರೈಸುತ್ತಿಲ್ಲ ಎಂಬುದು ಕಾಣುತ್ತಿದೆ. ಅನೇಕ ಸಮಸ್ಯೆಗಳಿಂದ ಕೂಡಿರುವ ವಿವಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ದಿನೇ ದಿನೆ ಕುಸಿಯುತ್ತಿರುವುದು ಆತಂಕದ ವಿಷಯ. ಸರ್ಕಾರ ತನ್ನದೇ ನಾಟಕದಲ್ಲಿ ಶಿಕ್ಷಣ ಕ್ಷೇತ್ರ ಕಡೆಗಣಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉನ್ನತ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ದೃಷ್ಟಿಯಿಂದ ರಾಜ್ಯದಲ್ಲಿ ಅನೇಕ ವಿವಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಆಗದೆ ಹಲವು ವಿವಿಗಳ ಶೈಕ್ಷಣಿಕ ವಾತಾವರಣ ಹಾಳು ಮಾಡಲಾಗುತ್ತಿದೆ. ರಾಜ್ಯದ ಅನೇಕ ವಿವಿಗಳಲ್ಲಿ ಕುಲಪತಿಗಳ ನೇಮಕವಾಗದಿರುವುದು ಹಾಗೂ ಪ್ರಸ್ತುತ ಕವಿವಿಯಲ್ಲಿ ಆರು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ನಡೆಯದಿರುವುದು ವಿಷಾದದ ಸಂಗತಿ. ಇದು ರಾಜ್ಯ ಸರ್ಕಾರಕ್ಕೆ ಉನ್ನತ ಶಿಕ್ಷಣದ ಬಗ್ಗೆ ಇರುವ ನಿರ್ಲಕ್ಷ್ಯ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಉನ್ನತ ಶಿಕ್ಷಣದ ಉಳಿವಿಗೆ ಸರ್ಕಾರ ಕೂಡಲೆ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ವಿವಿಗಳ ನೇಮಕಾತಿಯನ್ನು ಕೆಇಎಗೆ ಕೊಡದೆ ಆಯಾ ವಿವಿಗಳಿಗೆ ಬಿಟ್ಟು, ಸ್ವಾಯತ್ತತೆ ಹಕ್ಕು ಉಳಿಸಬೇಕು. ಇದಲ್ಲದೆ ರಾಜ್ಯದ 412 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಹುತೇಕ ಕಾಲೇಜುಗಳಲ್ಲಿ ಗ್ರೇಡ್ 1 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿದ್ದರೂ ಬಹುತೇಕ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಸಹ ತಕ್ಷಣ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಜಗದೀಶ ಮಾನೆ, ಗಂಗಾಧರ ಹಂಜಗಿ, ಹನಮಂತ ಬಗಲಿ, ಶೇಖರ ಕೊಡಿಕೊಪ್ಪ, ಪವನ ಕರಿಕಟ್ಟಿ, ಹನಮಂತ ಜೋಗಿ, ಚಿದಂಬರ ಶಾಸ್ತ್ರಿ, ರಶ್ಮಿ ಪಡತಾಳೆ, ಇತರರು ಇದ್ದರು.

Leave a Reply

Your email address will not be published. Required fields are marked *