ವಿವಾದದ ಗೂಡಾದ ಮೆಡಿಕಲ್ ಕಾಲೇಜ್

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್ ಈಗ ವಿವಾದದ ಗೂಡಾಗಿದೆ. ಪ್ರತಿ ದಿನ ಒಂದಲ್ಲ ಒಂದು ದೂರುಗಳು ಕೇಳಿ ಬರುತ್ತಿವೆ. ಮೆಡಿಕಲ್ ಕಾಲೇಜ್​ನ ನಿರ್ದೇಶಕ ಡಾ.ಶಿವಾನಂದ ದೊಡ್ಡಮನಿ ನಿಯಮ ಬಾಹಿರವಾಗಿ ಹುದ್ದೆಯಲ್ಲಿ ಮುಂದುವರಿದಿದ್ದು, ಅವರನ್ನು ಕೈಬಿಡಬೇಕು ಎಂದು ಜನಶಕ್ತಿ ವೇದಿಕೆಯ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

ಮೆಡಿಕಲ್ ಕಾಲೇಜ್ ನಿರ್ದೇಶಕರ ಹುದ್ದೆಯಲ್ಲಿದ್ದವರು 58 ವರ್ಷಕ್ಕೆ ನಿವೃತ್ತರಾಗಬೇಕು. 4 ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ ಇರಬಾರದು ಎಂದು ಭಾರತೀಯ ವೈದ್ಯಕೀಯ ಮಂಡಳಿ ನಿಯಮಾವಳಿ ಹೇಳುತ್ತದೆ. ಆದರೆ, ದೊಡ್ಡಮನಿ 60 ವರ್ಷ ದಾಟಿದ್ದಾರೆ. ಅವರನ್ನು ನಾಲ್ಕು ವರ್ಷದ ನಂತರವೂ ಸರ್ಕಾರ ನಿಯಮ ಬಾಹಿರವಾಗಿ ಮುಂದುವರಿಸಿದೆ ಎಂದು ದಾಖಲೆಗಳ ಜೊತೆ ದೂರು ಸಲ್ಲಿಸಿದರು. ಕಾಲೇಜ್​ನಲ್ಲಿ ಹಲವು ಅವ್ಯವಹಾರಗಳು ನಡೆಯುತ್ತಿವೆ ಎಂದು ದೂರಿದರು. ಮಾಧವ ನಾಯ್ಕ, ಪ್ರಶಾಂತ ಗಾಂವಕರ್, ಅಲ್ತಾಫ ಶೇಖ್ ಇತರರು ಇದ್ದರು.

ವೈಯಕ್ತಿಕ ಕೆಲಸಕ್ಕೆ: ತಮ್ಮ ಮನೆಗೆ ಕೊಂಡೊಯ್ಯುವ ಒಣ ಮೆಣಸಿನಕಾಯಿ ತೊಟ್ಟು ತೆಗೆಯುವ ಕಾರ್ಯವನ್ನು ನಿರ್ದೇಶಕರು ಕಾಲೇಜ್ ನೌಕರರಿಂದ ಮಾಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೆಡಿಕಲ್ ಕಾಲೇಜ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಂದ ಕಾಲೇಜ್​ನ ಖಾಲಿ ಕೊಠಡಿಯಲ್ಲೇ ಈ ಕೆಲಸ ಮಾಡಿಸುತ್ತಿದ್ದರು ಎನ್ನಲಾಗಿದೆ. ಈ ಪೋಟೋ ಬಹಿರಂಗವಾಗುತ್ತಿದ್ದಂತೆ ಅದರಲ್ಲಿದ್ದ 8 ಗುತ್ತಿಗೆ ನೌಕರರನ್ನು ಬುಧವಾರ ಕೆಲಸದಿಂದ ಕೈಬಿಡಲಾಗಿತ್ತು. ಎಲ್ಲ ನೌಕರರು ತಮ್ಮ ಸಂಘಟನೆಯ ಮೂಲಕ ಒಟ್ಟಾಗಿ ಬುಧವಾರ ಪ್ರತಿಭಟನೆ ನಡೆಸಿದರು. ಸಾಮೂಹಿಕವಾಗಿ ಧರಣಿ ನಡೆಸುವುದಾಗಿ ಎಚ್ಚರಿಸಿದ ಬಳಿಕ ಕೆಲಸಕ್ಕೆ ವಾಪಸ್ ಪಡೆಯಲಾಗಿದೆ.
ನಿರ್ಣಾಯಕ ಘಟ್ಟ: ಶಿವಾನಂದ ದೊಡ್ಡಮನಿ ಅವರು ಗುರುವಾರ ಪತ್ರಿಕಾ ಹೇಳಿಕೆ ನೀಡಿದ್ದು, ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದ್ದಾರೆ. ತಾವು ನೇಮಕವಾದ ನಂತರ ಆಸ್ಪತ್ರೆ ಸೌಲಭ್ಯವನ್ನು 300 ಹಾಸಿಗೆಗೆ ಹೆಚ್ಚಿಸಲಾಗಿದೆ. ಐಸಿಯು ಸೇರಿ ವಿವಿಧ ತುರ್ತು ಚಿಕಿತ್ಸಾ ವಾರ್ಡ್​ಗಳನ್ನು ಪ್ರಾರಂಭಿಸಲಾಗಿದೆ. ಏಳು ಪ್ಯಾರಾ ಮೆಡಿಕಲ್ ಕೋರ್ಸ್ ಪ್ರಾರಂಭಿಸಲಾಗಿದೆ. ನಾಲ್ಕು ವಿಷಯಗಳಲ್ಲಿ ಪಿಜಿ ಕೋರ್ಸ್ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. 450 ಹಾಸಿಗೆಗಳ ಹೊಸ ಆಸ್ಪತ್ರೆ ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ. ಮೆಡಿಕಲ್ ಕಾಲೇಜ್​ನ ಅಭಿವೃದ್ಧಿ ಈಗ ನಿರ್ಣಾಯಕ ಘಟ್ಟದಲ್ಲಿದ್ದು, ಸ್ಥಳೀಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.