ವಿಲಾಸಿ ಬದುಕಿನ ದಾಸ್ಯತ್ವದಿಂದ ಹೊರಬನ್ನಿ

ಧಾರವಾಡ: ವಿಲಾಸಿ ಬದುಕಿಗೆ ಮಾರು ಹೋದ ನಾವು ನಮ್ಮ ಪ್ರಕೃತಿ ಸಹಿಸದಷ್ಟು ತಪ್ಪುಗಳನ್ನು ಎಸಗಿದ್ದೇವೆ. ಇದರಿಂದ ನಮ್ಮ ಆರೋಗ್ಯಕ್ಕೆ ಮಾರಕವಾದ ವ್ಯಾಪಕ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಹಾಗಾಗಿ ವಿಲಾಸಿ ಬದುಕಿನ ದಾಸ್ಯತ್ವದಿಂದ ಹೊರಬರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

ವಿಶ್ವ ಯೋಗ ದಿನದ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ ಜಿಲ್ಲೆ ಹುಕ್ಕೇರಿ ಹಿರೇಮಠದ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ ಹಾಗೂ ಶಿರಸಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮಂಗಳವಾರ 6, 4, 2+2, 1+1 ಆರೋಗ್ಯ ಸೂತ್ರದ ಕಾರ್ಡ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸ್ವಾರ್ಥದ ಕೈಂಕರ್ಯಗಳು ಹೆಚ್ಚಿದ್ದರಿಂದ ಜಾಗತಿಕ ತಾಪಮಾನ ಅಧಿಕವಾಗಿದೆ. ನಮ್ಮ ಪರಿಸರ ವ್ಯವಸ್ಥೆಯ ಸಮತೋಲನ ಹಾಳಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಶುದ್ಧ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಹೀಗಾಗಿ ಮನುಕುಲದ ಆರೋಗ್ಯ ಅನೇಕ ವಿಧದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆರೋಗ್ಯ ಸೂತ್ರದ ಪ್ರಚಾರಕ್ಕೆ ಹುಕ್ಕೇರಿ ಹಿರೇಮಠದ ಶ್ರೀಗಳು ಪೂರೈಸಿರುವ ಕಾರ್ಡ್​ಗಳನ್ನು 9 ಜಿಲ್ಲೆಗಳ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯ ಯೋಗ, ಅಧ್ಯಾತ್ಮ ಹಾಗೂ ಆರೋಗ್ಯದ ವ್ಯಾಪಕ ಪ್ರಚಾರದೊಂದಿಗೆ ಆರೋಗ್ಯವಂತ ಭಾರತ ನಿರ್ವಣಕ್ಕೆ ಶ್ರಮಿಸಬೇಕು. ಶಿಕ್ಷಣ ಮತ್ತು ಆರೋಗ್ಯ ತತ್ತ್ವ ಅಡಿ ಅತ್ಯಂತ ಸರಳವಾಗಿ ಜನತೆಯ ಆರೋಗ್ಯ ರಕ್ಷಣೆಗೆ ಕಾರಣವಾದ ಈ ಸೂತ್ರವನ್ನು ಶಾಲಾ ಹಂತದಿಂದಲೇ ಮಕ್ಕಳ ಮನಸ್ಸಿನಲ್ಲಿ ಬಿತ್ತಲು ಕಾರ್ಡ್​ಗಳನ್ನು ಪೂರೈಸಲಾಗಿದೆ ಎಂದರು.

ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಬಿಕೆಎಸ್ ವರ್ಧನ್ ಮಾತನಾಡಿದರು. ಡಿಡಿಪಿಐ ಗಜಾನನ ಮನ್ನಿಕೇರಿ, ಉಪ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಅಧಿಕಾರಿಗಳಾದ ಮಹಾದೇವಿ ಮಾಡಲಗೇರಿ, ಶಾಂತಾ ಮೀಸೆ, ಸಿಬ್ಬಂದಿ, ಇತರರು ಇದ್ದರು.

ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ಉಮೇಶ ಬೊಮ್ಮಕ್ಕನವರ ವಂದಿಸಿದರು.

ಉತ್ತಮ ಆರೋಗ್ಯಕ್ಕಾಗಿ ಸೂತ್ರ: ನಿಸರ್ಗ ಚಿಕಿತ್ಸಾ ತಜ್ಞ, ವಿಜಯವಾಣಿ ಅಂಕಣಕಾರ ಡಾ. ವೆಂಕಟರಮಣ ಹೆಗಡೆ ಮಾತನಾಡಿ, 6, 4, 2+2, 1+1 ಆರೋಗ್ಯ ಸೂತ್ರ ವಿಶಿಷ್ಟವಾಗಿದೆ. 6 ಎಂದರೆ ದಿನಕ್ಕೆ 6 ತಾಸುಗಳ ನಿದ್ರೆ, 4 ಲೀಟರ್ ಶುದ್ಧ ನೀರು ಕುಡಿಯುವುದು. ದಿನಕ್ಕೆ 2 ಹೊತ್ತು ಊಟ, 2 ಹೊತ್ತು ಪ್ರಾರ್ಥನೆ, ದಿನಕ್ಕೆ 1 ತಾಸು ಯೋಗ ಹಾಗೂ ವಾರಕ್ಕೆ 1 ದಿನ ಉಪವಾಸ ಮಾಡುವುದೇ ಈ ಸೂತ್ರವಾಗಿದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *