ಚಿತ್ರದುರ್ಗ: ಜಿಲ್ಲೆಯ ಐತಿಹಾಸಿಕ ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಗೆ ಹೋಬಳಿಯ ಕೆಲ ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ಸೋಮವಾರ ರಾಜ್ಯ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಬಿ.ಯೋಗೀಶ್‌ಬಾಬು ಬಾಗಿನ ಸಮರ್ಪಿಸಿದರು.
ಕೆರೆಯು 25 ವರ್ಷಗಳ ನಂತರ ತುಂಬಿದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಈಚೆಗೆ ಬಾಗಿನ ಅರ್ಪಿಸಿದ್ದರು. ಇದೇ ವಿಚಾರವಾಗಿ ಯೋಗೀಶ್‌ಬಾಬು ಭಾನುವಾರ ನಾಯಕನಹಟ್ಟಿಯಲ್ಲಿ ಸಭೆ ನಡೆಸಿದ್ದು, ಕೈ ಪಾಳಯದಲ್ಲೇ ಗೊಂದಲಕ್ಕೆ ಕಾರಣವಾಗಿತ್ತು.
ನಾಯಕನಹಟ್ಟಿ-ತಳಕು ಹೋಬಳಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೋಮವಾರ ಯೋಗೀಶ್‌ಬಾಬು ಅವರ ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ, ಸಹಕಾರ ನೀಡದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿದಾಡಿತ್ತು.
ಕೆರೆಗೆ ಬಾಗಿನ ಅರ್ಪಣೆ ಕಾರ್ಯ ಈಗಾಗಲೇ ನಡೆದಿದೆ. ಮತ್ತೊಮ್ಮೆ ಮಾಡಿದರೆ, ಕೈ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಲಿದೆ. ಇದರಿಂದ ಶಾಂತಿಗೆ ಭಂಗ ಉಂಟಾಗಲಿದೆ ಎಂದು ಕಾಂಗ್ರೆಸ್ ಮುಖಂಡರೇ ಭಾನುವಾರ ಪೊಲೀಸ್ ಠಾಣೆಗೆ ಪತ್ರ ರವಾನಿಸಿ, ಕಾರ್ಯಕ್ರಮ ತಡೆಯಲು ಕೋರಿದ್ದರು. ಈ ಎಲ್ಲ ಬೆಳವಣಿಗೆ ನಡುವೆಯೂ ಯೋಗೀಶ್‌ಬಾಬು ಬಾಗಿನ ಅರ್ಪಿಸಿದರು. ಪೊಲೀಸರ ಸೂಚನೆ ಮೇರೆಗೆ ಇದಕ್ಕೂ ಮುನ್ನ ನಡೆಯಬೇಕಿದ್ದ ಮೆರವಣಿಗೆ ರದ್ದಾಯಿತು. ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪ್ರಹ್ಲಾದ್, ಹುಚ್ಚು ಮಲ್ಲಯ್ಯ, ತಿಪ್ಪಮ್ಮ, ಮುತ್ತಯ್ಯ, ನಾಗರಾಜ್ ಮೀಸೆ, ಬೋರಯ್ಯ ಇತರರಿದ್ದರು.