ವಿಯೆಟ್ನಾಂ ಮೆಣಸು ಆಮದು ಸ್ಥಗಿತಕ್ಕೆ ಒತ್ತಾಯ

ಪ್ರಧಾನಿಗಳಿಗೆ ಪತ್ರ ಬರೆಯಲು ನಿರ್ಧಾರ

ಶ್ರೀಮಂಗಲ: ವಿಯೆಟ್ನಾಂ ದೇಶದ ಕಾಳು ಮೆಣಸು ಆಮದು ಮಾಡಿಕೊಳ್ಳುವುದನ್ನು ಕೂಡಲೇ ಸ್ಥಗಿಗೊಳಿಸಿ ದೇಸಿ ಮೆಣಸು ಬೆಳೆಗಾರರ ರಕ್ಷಣೆಗೆ ಧಾವಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲು ಕೊಡಗು ಬೆಳೆಗಾರ ಒಕ್ಕೂಟ ಮತ್ತು ಜಿಲ್ಲಾ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಗೋಣಿಕೊಪ್ಪದ ಖಾಸಗಿ ಹೋಟೆಲ್‌ನಲ್ಲಿ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸೆ.20 ರಂದು ಉಭಯ ಸಂಘಟನೆಯ ನಿಯೋಗ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಮೂಲಕ ಪ್ರಧಾನಿಯವರಿಗೆ ಕಾಳುಮೆಣಸು ಅಕ್ರಮ ಆಮದು ಹಾಗೂ ಅಕ್ರಮ ಆಮದಿನಿಂದ ಕೆಲವು ವರ್ತಕರು ಅಲ್ಪಾವಧಿಯಲ್ಲಿ ಗಳಿಸಿರುವ ಕೋಟ್ಯಂತರ ರೂ. ಬಗ್ಗೆ ಹಾಗೂ ವಿಯೆಟ್ನಾಂ ಕಾಳುಮೆಣಸಿನ ಕಳಪೆ ಗುಣಮಟ್ಟ ಸೇರಿದಂತೆ ಸಂಪೂರ್ಣ ದಾಖಲೆಯನ್ನು ಪತ್ರದೊಂದಿಗೆ ಕಳುಹಿಸಲು ನಿರ್ಧರಿಸಲಾಯಿತು.
ಅಕ್ರಮ ಕಾಳುಮೆಣಸು ಆಮದಿನಿಂದ ಕೆ.ಜಿ.ಗೆ 730 ರೂ. ಇದ್ದ ದರ ಇದೀಗ 330ರೂ.ಗೆ ಕುಸಿದಿದೆ. ಪ್ರತಿ ಕೆ.ಜಿ. ಕಾಳುಮೆಣಸು ಬೆಳೆಯಲು 350 ರೂ.ವೆಚ್ಚ ತಗುಲುತ್ತಿದ್ದು, ಕಾನೂನನ್ನು ಉಲ್ಲಂಘಿಸಿ ಆಮದುದಾರರು ಕಾಳುಮೆಣಸು ಭಾರತಕ್ಕೆ ತರುವುದರಿಂದ ತೀವ್ರ ಬೆಲೆಕುಸಿತಕ್ಕೆ ಕಾರಣವಾಗಿದೆ ಎಂದು ಬೆಳೆಗಾರರು ಆರೋಪಿಸಿದರು.
ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್‌ದೇವಯ್ಯ, ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್‌ಮಾುದಪ್ಪ, ಖಜಾಂಜಿ ಮಾಣೀರ ವಿಜಯನಂಜಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶೆರಿಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್‌ಮಾದಪ್ಪ ಒಕ್ಕೂಟದ ಮಹಿಳಾ ಘಟಕದ ಪದಾಧಿಕಾರಿಗಳಾದ ಆಶಾ ಜೇಮ್ಸ್, ತೀತೀರ ಊರ್ಮಿಳಾ ಇತರರು ಇದ್ದರು.

Leave a Reply

Your email address will not be published. Required fields are marked *