ವಿಮೆ ವಿಳಂಬಕ್ಕೆ ಖಂಡನೆ

ಕುಂದಗೋಳ: ರೈತರ ಖಾತೆಗೆ ಬೆಳೆವಿಮೆ ಪರಿಹಾರ ಜಮೆಯಾಗದಿರುವುದನ್ನು ಖಂಡಿಸಿ ತಾಲೂಕಿನ ಕಳಸ, ಹರಲಾಪೂರ, ಸುಲ್ತಾನಪುರ ರೈತರು ಕಳಸದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

2015-16ರ ಬೆಳೆವಿಮೆ ಹಾಗೂ 2016-17ರ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆವಿಮೆ ಬಗೆಗೆ ರೈತರಿಗೆ ಸರಿಯಾದ ಮಾಹಿತಿ ನಿಡಿಲ್ಲ. ರೈತರ ಖಾತೆಗಳಿಗೆ ಹಣ ಜಮೆ ಮಾಡಿಲ್ಲ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಹರ್ಲಾಪೂರ, ಸುಲ್ತಾನಪುರ ಗ್ರಾಮಗಳ ರೈತರ ಖಾತೆಗೆ 76. 12 ಲಕ್ಷ ರೂ. ಇನ್ನೂ ಜಮೆ ಆಗಿಲ್ಲ. ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು, ಶೀಘ್ರ ಖಾತೆಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರರಾವ್ ಮಾತನಾಡಿ, 10 ದಿನಗಳ ಕಾಲಾವಕಾಶ ನೀಡಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದರು. ಇದಕ್ಕೆ ಸ್ಪಂದಿಸಿದ ರೈತರು ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಕೈಬಿಟ್ಟರು. ಎಸ್.ಎಸ್. ಹಿರೇಮಠ, ಅಶೋಕ ಹಡಗಲಿ, ಈಶ್ವರ ಅರಳಿ, ಪರಮೇಶ ಬಂಡಿವಾಡ, ಚಂದ್ರಶೇಖರ ಕಾಳಿ, ಎಸ್.ಬಿ. ಪಾಟೀಲ, ಜೀವಣ್ಣ ಹೊಸಳ್ಳಿ, ಗಂಗಾಧರ ಕೊಪ್ಪದ, ಮಾಂತೇಶ ರಾಮಗೇರಿ, ಕಲ್ಲಪ್ಪ ಬಂಡಿವಾಡ, ಸತೀಶ ಕೊರಡೂರ, ಬಸಲಿಂಗಯ್ಯ ಕವದಿಮಠ, ವರ್ದಮಾನ ಹಡಗಲಿ, ನೂರಾರು ರೈತರು ಪಾಲ್ಗೊಂಡಿದ್ದರು.