| ಜಗನ್ ರಮೇಶ್ ಬೆಂಗಳೂರು

ವೈದ್ಯಕೀಯ ವರದಿಯಲ್ಲಿ ನಿಗದಿತ ಪ್ರಮಾಣದ ಮದ್ಯದ ಅಂಶ ಪತ್ತೆಯಾಗದಿದ್ದರೂ ಕುಡಿದು ಕಾರು ಚಲಾಯಿಸಿ ಅಪಘಾತವೆಸಗಿದ್ದಾರೆಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ವಿಮೆ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಗ್ರಾಹಕ ನ್ಯಾಯಾಲಯ ವಿಮಾ ಕಂಪನಿಯ ‘ಕಿಕ್’ ಇಳಿಸಿದೆ. ಕಾರಿನ ಸಂಪೂರ್ಣ ವಿಮೆ ಮೊತ್ತ 3.22 ಲಕ್ಷ ರೂ.ಪಾವತಿಸುವ ಜತೆಗೆ 35 ಸಾವಿರ ರೂ. ದಂಡ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ರಕ್ತದ ಮಾದರಿ ಪರೀಕ್ಷೆ ನಡೆಸಿದ್ದ ವೈದ್ಯರು ರಕ್ತದಲ್ಲಿ 3 ಎಂ.ಜಿ ಮದ್ಯದ ಪ್ರಮಾಣ ಇರುವುದಾಗಿ ವರದಿ ನೀಡಿದ್ದರು. ಇದೇ ವಿಚಾರ ಮುಂದಿಟ್ಟುಕೊಂಡ ಖಾಸಗಿ ವಿಮಾ ಸಂಸ್ಥೆ ವಿಮೆ ಹಣ ಪಾವತಿಸಲು ನಿರಾಕರಿಸಿತ್ತು. ಅಪಘಾತಕ್ಕೀಡಾದ ವ್ಯಕ್ತಿ ಇದನ್ನು ಗ್ರಾಹಕ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದೀಗ ನ್ಯಾಯಾಲಯ ವಾಹನದ ವಿಮೆ ಮೊತ್ತ ರೂ. 3,22,105 ವಾರ್ಷಿಕ ಶೇ.12 ಬಡ್ಡಿಸಹಿತ ಹಣ ಪಾವತಿಗೆ ನಿರ್ದೇಶಿಸಿದೆ. 

ಸರ್ವೆಯರ್ ವರದಿ: ವಾಹನ ಅಪಘಾತವಾದ ಬಳಿಕ ವಿಮಾ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು. ಇದರಿಂದ ಸಂಸ್ಥೆ ಅಪಘಾತ ಸಂಭವಿಸಿದ ಸ್ಥಳ ಹಾಗೂ ವಾಹನ ಪರಿಶೀಲನೆ ನಡೆಸಿ ವರದಿ ನೀಡಲು ಸರ್ವೆಯರ್ ಒಬ್ಬರನ್ನು ನೇಮಿಸಿತ್ತು. ವರದಿ ನೀಡಿದ್ದ ಸರ್ವೆಯರ್, ‘ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ವಾಹನದ ದುರಸ್ತಿ ಮೌಲ್ಯ ವಿಮೆಯ ಘೋಷಿತ ಮೌಲ್ಯದ ಶೇ.75ನ್ನು ಮೀರಿದೆ. ನಷ್ಟದ ಮೌಲ್ಯವನ್ನು ಸರ್ವೀಸ್ ಸೆಂಟರ್​ನ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದ್ದು, 2,50,000 ರೂ. ನಿಗದಿಪಡಿಸಬಹುದಾಗಿದೆ. ಆರ್​ಸಿ ಸಹಿತ ನಿರೀಕ್ಷಿತ ಹಾನಿ ಮೊತ್ತ 40 ಸಾವಿರ, ಆರ್​ಸಿ ರಹಿತ ಹಾನಿ ಮೊತ್ತ 25 ಸಾವಿರ ಎಂದು ಲೆಕ್ಕ ಹಾಕಬಹುದಾಗಿದ್ದು, ಈ ಆಧಾರದ ಮೇಲೆ ಒಟ್ಟು ನಷ್ಟದ ಮೊತ್ತವನ್ನು 2,25,000 ರೂ. ಎಂದು ಪರಿಗಣಿಸಬಹುದು’ ಎಂದು ತಿಳಿಸಿದ್ದರು. ಈ ಅಂಶ ಪರಿಗಣಿಸಿರುವ ನ್ಯಾಯಾಲಯ, 2,50,000ದಷ್ಟು ನಷ್ಟ ಗುರುತಿಸಿದ್ದ ಸರ್ವೆಯರ್ ಹಾನಿ ಮೊತ್ತವನ್ನು ಕಳೆದು 2,25,000 ರೂ ನೀಡಬಹುದು ಎಂದು ಶಿಫಾರಸು ಮಾಡಿದ್ದಾರೆ. ವಾಹನವನ್ನು 3,22,105 ರೂ. ಗೆ ವಿಮೆ ಮಾಡಿಸಲಾಗಿದೆ. ಹಾನಿ ಮೊತ್ತ 40 ಸಾವಿರ ರೂ. ನಿಗದಿಪಡಿಸಲಾಗಿದ್ದರೂ, ಆ ಹಣವೂ ವಿಮಾ ಸಂಸ್ಥೆಗೆ ಬರಲಿದೆ. ಹೀಗಾಗಿ ಆ ಮೊತ್ತವನ್ನೂ ಸೇರಿಸಿಕೊಂಡರೆ ಘೋಷಿತ ವಿಮೆ ಮೊತ್ತವನ್ನು ಸಂಪೂರ್ಣವಾಗಿ ಪಡೆಯಲು ದೂರುದಾರರು ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.